ಬೆಂಗಳೂರು: ಕಾಂಗ್ರೆಸ್ ಕಾರ್ಯಕರ್ತರ ಅನುಕೂಲಕ್ಕಾಗಿ ರಚಿಸಿರುವ ‘ಗಂಜಿ ಕೇಂದ್ರ’ಗಳಿಗೆ ಸುಮಾರು 2,000 ಕೋಟಿ ರೂ. ವ್ಯಯಿಸುತ್ತಿರುವ ರಾಜ್ಯ ಸರ್ಕಾರ, ಮಳೆ-ಚಳಿಯನ್ನು ಲೆಕ್ಕಿಸದೆ ಬೀದಿಗಿಳಿದಿರುವ ಆಶಾ ಕಾರ್ಯಕರ್ತೆಯರ ಬೇಡಿಕೆಯಾದ 480 ಕೋಟಿ ರೂ. ನೀಡಲು ಮೀನಮೇಷ ಎಣಿಸುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಆಡಳಿತ ವೈಖರಿಯಿಂದ ಸಾರ್ವಜನಿಕರು ಮಾತ್ರವಲ್ಲದೆ ಸ್ವತಃ ಕಾಂಗ್ರೆಸ್ ಶಾಸಕರೇ ಬೇಸತ್ತಿದ್ದಾರೆ. ಆನೆ ಹಾವಳಿ ವಿಚಾರದಲ್ಲಿ ಆಡಳಿತ ಪಕ್ಷದ ಶಾಸಕರೇ ಅಸಮಾಧಾನ ಹೊರಹಾಕಿದ್ದಾರೆ. ಹತ್ತು ದಿನಗಳಿಂದ ಫ್ರೀಡಂ ಪಾರ್ಕ್ನಲ್ಲಿ ಆಶಾ ಕಾರ್ಯಕರ್ತೆಯರು ಹೋರಾಟ ನಡೆಸುತ್ತಿದ್ದರೂ, ಅವರಿಗೆ ಕನಿಷ್ಠ ಮೂಲಸೌಕರ್ಯ ಕಲ್ಪಿಸಿಲ್ಲ. ಮುಖ್ಯಮಂತ್ರಿಗಳು ಜರ್ಮನಿ, ಜಪಾನ್ ಪ್ರವಾಸ ಮಾಡಲಿ, ಆದರೆ ಮೊದಲು ರಾಜ್ಯದ ಹೋರಾಟಗಾರರ ಸಮಸ್ಯೆ ಆಲಿಸಬೇಕು. ಬೆಂಗಳೂರಿನ ರಸ್ತೆ, ಕಸ ವಿಲೇವಾರಿ ಸಮಸ್ಯೆ ಬಗೆಹರಿಸದೆ ಜಪಾನ್ ವ್ಯವಸ್ಥೆ ವೀಕ್ಷಿಸಲು ಹೋಗಿರುವುದು ಹಾಸ್ಯಾಸ್ಪದ. ಇವರ ನಿರ್ಲಕ್ಷ್ಯದಿಂದಾಗಿ ರಾಜ್ಯದ ಕಂಪನಿಗಳು ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದತ್ತ ಮುಖಮಾಡುತ್ತಿವೆ ಎಂದು ವ್ಯಂಗ್ಯವಾಡಿದರು.
ಬಂಡೆ ಹೃದಯದ ಸರ್ಕಾರ:
ಆಶಾ ಕಾರ್ಯಕರ್ತೆಯರನ್ನು ಸಹೋದರಿಯರು ಎಂದು ಕರೆಯುತ್ತಿದ್ದವರು ಈಗ ‘ಬಂಡೆ ಹೃದಯ’ದವರು ಎಂಬುದನ್ನು ಸಾಬೀತುಪಡಿಸಿದ್ದಾರೆ. ತಾಯಂದಿರ ಮತಗಳಿಂದ ಗೆದ್ದಿದ್ದೇವೆ ಎನ್ನುವವರು ಕೇವಲ ವಿಡಿಯೋ ಕರೆ ಮಾಡುವ ಬದಲು ನೇರವಾಗಿ ಫ್ರೀಡಂ ಪಾರ್ಕ್ಗೆ ಭೇಟಿ ನೀಡಿ ಅಹವಾಲು ಸ್ವೀಕರಿಸಬೇಕು. ಇಲ್ಲದಿದ್ದರೆ ಡಿ.ಕೆ. ಶಿವಕುಮಾರ್ ಕೇವಲ ರಿಯಲ್ ಎಸ್ಟೇಟ್ ಉದ್ಯಮಿ ಎಂಬುದು ಸಾಬೀತಾಗುತ್ತದೆ. ಬೆಳಗಾವಿ ಅಧಿವೇಶನ ಆರಂಭವಾದರೆ ಅಧಿಕಾರಿಗಳೆಲ್ಲ ಅತ್ತ ತೆರಳಲಿದ್ದು, ಹೋರಾಟಗಾರರನ್ನು ಕೇಳುವವರೇ ಇರುವುದಿಲ್ಲ ಎಂದು ಅಶೋಕ ಕಿಡಿಕಾರಿದರು.
ಪುಸ್ತಕ ಖರೀದಿಗಿಂತ ಜನರ ಸಂಕಷ್ಟ ಮುಖ್ಯ:
ಸೋನಿಯಾ ಗಾಂಧಿ ಅವರ ಪುಸ್ತಕ ಬಿಡುಗಡೆಗೆ ತೋರಿದ ಉತ್ಸಾಹವನ್ನು ಸರ್ಕಾರ ಆಶಾ ಕಾರ್ಯಕರ್ತೆಯರ ಸಮಸ್ಯೆ ಬಗೆಹರಿಸಲು ತೋರಿಸಲಿ. ಪಕ್ಷದವರೆಲ್ಲರೂ ಕಡ್ಡಾಯವಾಗಿ ಪುಸ್ತಕ ಖರೀದಿಸಬೇಕೆಂಬ ಸೂಚನೆಯಿಂದಾಗಿ ಸಚಿವ ಮುನಿಯಪ್ಪ ಹತ್ತು ಸಾವಿರ ಪುಸ್ತಕ ಕೊಳ್ಳುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿರುವ ಭರವಸೆಗಳನ್ನು ಈಡೇರಿಸಿದರೆ ಸಾಕು. ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ ಪ್ರಧಾನಿ ಮೋದಿ ಅವರು 1,000 ರೂ. ಸಹಾಯಧನ ಹಾಗೂ 50 ಲಕ್ಷ ರೂ. ವಿಮೆ ಸೌಲಭ್ಯ ನೀಡಿದ್ದರು. ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಘೋಷಿಸಿದ್ದ 1,000 ರೂ. ಹೆಚ್ಚಳವನ್ನು ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಕೂಡಲೇ ರದ್ದುಪಡಿಸಿದರು ಎಂದು ದೂರಿದರು.
ಅನುದಾನ ಹಂಚಿಕೆಯಲ್ಲಿ ತಾರತಮ್ಯ:
ಘೋಷಣೆ ಮಾಡುವಾಗ ಕೇಂದ್ರ ಸರ್ಕಾರದ ನೆನಪಾಗದ ಸಚಿವರು, ಈಗ ಅನುದಾನಕ್ಕಾಗಿ ಕೇಂದ್ರದತ್ತ ಬೊಟ್ಟು ಮಾಡುತ್ತಿದ್ದಾರೆ. ಭಾರತ್ ಜೋಡೋ ಹೆಸರಿನಲ್ಲಿ 1,000 ಕೋಟಿ ರೂ., ಗ್ಯಾರಂಟಿ ಅನುಷ್ಠಾನ ಸಮಿತಿಗೆ 250 ಕೋಟಿ ರೂ. ಸೇರಿದಂತೆ ಗ್ರಾಮ ಪಂಚಾಯಿತಿ ಮಟ್ಟದ ಸಮಿತಿಗಳಿಗೆ ಒಟ್ಟು 2,000 ಕೋಟಿ ರೂ.ಗಳನ್ನು ಪಕ್ಷದ ಕಾರ್ಯಕರ್ತರಿಗಾಗಿ ಖರ್ಚು ಮಾಡಲಾಗುತ್ತಿದೆ. ಅಲ್ಪಸಂಖ್ಯಾತರಿಗೆ 4,358 ಕೋಟಿ ರೂ. ಹಾಗೂ ವಿದ್ಯಾರ್ಥಿಗಳ ಲ್ಯಾಪ್ಟಾಪ್ಗೆ ತಲಾ 50 ಸಾವಿರ ರೂ. ನೀಡುವ ಸರ್ಕಾರಕ್ಕೆ, ರಾಜ್ಯದ ಆರೋಗ್ಯ ಸೇವೆಯಲ್ಲಿ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರಿಗೆ ತಲಾ 15,000 ರೂ. ಗೌರವಧನ ನೀಡಲು ಸಾಧ್ಯವಾಗುತ್ತಿಲ್ಲ. ಮುಂದಿನ ಚುನಾವಣೆಯಲ್ಲಿ ಇವರ ಶಾಪ ಸರ್ಕಾರಕ್ಕೆ ತಟ್ಟಲಿದೆ. ಇದೀಗ ಅಂಗನವಾಡಿ ಸಹಾಯಕರೂ ಹೋರಾಟಕ್ಕೆ ಸಜ್ಜಾಗುತ್ತಿದ್ದು, ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ-ಜೆಡಿಎಸ್ ಜಂಟಿಯಾಗಿ ಈ ವಿಷಯವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಿವೆ ಎಂದು ಎಚ್ಚರಿಸಿದರು.
ರಾಜೀನಾಮೆ ನಾಟಕ ಹಾಗೂ ಸಮನ್ವಯ ಸಭೆ:
ಕಾಡಾನೆ ಸಮಸ್ಯೆ ಮುಂದಿಟ್ಟುಕೊಂಡು ಶಾಸಕಿ ನಯನಾ ಮೋಟಮ್ಮ ಸೇರಿದಂತೆ ಕಾಂಗ್ರೆಸ್ ಶಾಸಕರು ನೀಡಿರುವ ರಾಜೀನಾಮೆ ಕೇವಲ ಜನರ ಕಣ್ಣಿಗೆ ಮಣ್ಣೆರಚುವ ನಾಟಕವಾಗಿದೆ. ನಿಯಮದಂತೆ ಒಂದು ಸಾಲಿನ ಪತ್ರವನ್ನು ನೇರವಾಗಿ ಸ್ಪೀಕರ್ಗೆ ನೀಡದೆ ಹೈಡ್ರಾಮಾ ಮಾಡಿದ್ದಾರೆ. ಇನ್ನು ಗುರುವಾರ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಎನ್ಡಿಎ ಸಮನ್ವಯ ಸಮಿತಿ ಸಭೆ ನಡೆಯಲಿದ್ದು, ಅಧಿವೇಶನದ ಕಾರ್ಯತಂತ್ರ ಹಾಗೂ ಮುಂಬರುವ ಚುನಾವಣೆಗಳ ಕುರಿತು ಚರ್ಚಿಸಲಾಗುವುದು. ಅಖಂಡ ಕರ್ನಾಟಕದ ಅಭಿವೃದ್ಧಿಗೆ ನಾವೆಲ್ಲ ಬದ್ಧರಾಗಿದ್ದು, ಪ್ರತ್ಯೇಕ ರಾಜ್ಯದ ಕುರಿತು ಹೇಳಿಕೆ ನೀಡಿರುವ ನಮ್ಮ ಪಕ್ಷದ ಶಾಸಕರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ಆರ್. ಅಶೋಕ ಸ್ಪಷ್ಟಪಡಿಸಿದರು.

