Wed. Nov 25th, 2026

ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಸಿನಿಮಾ ತಾರೆಯರು, ಸಾಹಿತಿಗಳ ಸಾಥ್:10 ಮೂಟೆ ಅಕ್ಕಿ, ದಿನಸಿ ತಂದ ವಿನೋದ್ ರಾಜ್

Share this with Friends

ಬೆಂಗಳೂರು: ಮಾಸಿಕ 15,000 ರೂ. ಗೌರವಧನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಬುಧವಾರ 9ನೇ ದಿನಕ್ಕೆ ಕಾಲಿಟ್ಟಿದ್ದು, ಚಳಿ-ಮಳೆಯ ನಡುವೆಯೂ ಹೋರಾಟ ಮುಂದುವರಿಸಿರುವ ಕಾರ್ಯಕರ್ತೆಯರಿಗೆ ಕನ್ನಡ ಚಿತ್ರರಂಗದ ಕಲಾವಿದರು, ಹಿರಿಯ ಸಾಹಿತಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದ್ದಾರೆ.

10 ಮೂಟೆ ಅಕ್ಕಿ, ದಿನಸಿ ತಂದ ನಟ ವಿನೋದ್ ರಾಜ್:

ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಬೆಂಬಲ ನೀಡಲು ಚೆನ್ನೈನಿಂದ ವಿಶೇಷವಾಗಿ ಬೆಂಗಳೂರಿಗೆ ಆಗಮಿಸಿದ ಹಿರಿಯ ನಟ ವಿನೋದ್ ರಾಜ್, ಪ್ರತಿಭಟನಾನಿರತ ಮಹಿಳೆಯರ ಆಹಾರದ ವ್ಯವಸ್ಥೆಗಾಗಿ 10 ಮೂಟೆ ಅಕ್ಕಿ, ತರಕಾರಿ ಹಾಗೂ ದಿನಸಿ ಸಾಮಗ್ರಿಗಳನ್ನು ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅವರು, “ಕೊರೊನಾ ಸಂಕಷ್ಟದ ಕಾಲದಲ್ಲಿ ಜನರಿಗೆ ಧೈರ್ಯ ತುಂಬಿ ಪ್ರಾಣದ ಹಂಗು ತೊರೆದು ಸೇವೆ ಸಲ್ಲಿಸಿದವರು ಆಶಾ ಕಾರ್ಯಕರ್ತೆಯರು. ನನ್ನ ತಾಯಿಗೆ ಅನಾರೋಗ್ಯ ಕಾಡಿದಾಗಲೂ ಇವರೇ ಸೇವೆ ಮಾಡಿದ್ದರು. ದೇವರ ಸಮಾನರಾದ ಇವರ ಕಣ್ಣೀರಿಗೆ ಸರ್ಕಾರ ತಕ್ಷಣವೇ ಸ್ಪಂದಿಸಿ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಭಾವುಕರಾಗಿ ಮನವಿ ಮಾಡಿದರು.

ಸಚಿವ ನರೇಂದ್ರ ಸ್ವಾಮಿ ವಿರುದ್ಧ ನಟಿ ತಾರಾ ಕಿಡಿ:

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ನಟಿ ತಾರಾ, ಆಶಾ ಕಾರ್ಯಕರ್ತೆಯರ ಕುರಿತು ‘ಕೇಳಿದಾಗಲೆಲ್ಲಾ ಕಂಠೀಹಾರ ಕಿತ್ತುಕೊಡಲು ಆಗುತ್ತದೆಯೇ’ ಎಂದು ಹೇಳಿಕೆ ನೀಡಿದ್ದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ/ನರೇಂದ್ರ ಸ್ವಾಮಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಕಂಠೀಹಾರ ಕೊಡಲು ನೀವೇನು ರಾಜರಾ? ಜನ ಮತ ಹಾಕದಿದ್ದರೆ ನೀವು ಗೆಲ್ಲುವುದಿಲ್ಲ. ಸಚಿವರು ಬಂದು ಕುಟುಂಬ ಬಿಟ್ಟು ಬೀದಿಯಲ್ಲಿ ಹೋರಾಡುತ್ತಿರುವ ಈ ತಾಯಂದಿರ ಕಾಲಿಗೆ ಬಿದ್ದರೂ ತಪ್ಪಿಲ್ಲ. ಮುಖ್ಯಮಂತ್ರಿಗಳು ಹಿಂದೆ ಘೋಷಿಸಿದ್ದ 10 ಸಾವಿರ ರೂ. ಗೌರವಧನವನ್ನಾದರೂ ಮೊದಲು ಜಾರಿಗೊಳಿಸಲಿ; ಇಲ್ಲವಾದರೆ ಇದು ರಾಷ್ಟ್ರಮಟ್ಟದ ಹೋರಾಟವಾಗಲಿದೆ” ಎಂದು ಎಚ್ಚರಿಸಿದರು.

ಮಾಳವಿಕಾ ಅವಿನಾಶ್, ಅವಿನಾಶ್ ಬೆಂಬಲ:

ನಟಿ ಮಾಳವಿಕಾ ಅವಿನಾಶ್ ಮಾತನಾಡಿ, ಇತರರ ಆರೋಗ್ಯ ಕಾಯುವ ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರ ತಕ್ಷಣವೇ 15 ಸಾವಿರ ರೂ. ಮಾಸಿಕ ಗೌರವಧನ ನಿಗದಿಪಡಿಸಬೇಕು. ಕೇಂದ್ರ ಸರ್ಕಾರದ ಗಮನಕ್ಕೂ ಈ ವಿಚಾರವನ್ನು ತರಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ನಟ ಅವಿನಾಶ್ ಕೂಡ ಕೋವಿಡ್ ಸಂದರ್ಭದಲ್ಲಿ ಕಾರ್ಯಕರ್ತೆಯರು ಸಲ್ಲಿಸಿದ ಸೇವೆಯನ್ನು ಸ್ಮರಿಸಿ, ಅವರ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದರು.

ಸಾಹಿತಿಗಳು, ಸಂಘಟನೆಗಳ ಒತ್ತಾಯ:

ಹಿರಿಯ ಸಾಹಿತಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಮಾತನಾಡಿ, ಒಂಬತ್ತು ದಿನಗಳಿಂದ ಬಿಸಿಲು, ಮಳೆ, ಚಳಿಯಲ್ಲಿ ಮಹಿಳೆಯರು ಹೋರಾಡುತ್ತಿದ್ದರೂ ಸರ್ಕಾರ ಸ್ಪಂದಿಸದಿರುವುದು ಪ್ರಜಾಪ್ರಭುತ್ವಕ್ಕೆ ನಾಚಿಕೆಗೇಡು; ಸಿಎಂ ಖುದ್ದು ಸ್ಥಳಕ್ಕೆ ಬಂದು ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು. ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ, ಮುಖ್ಯಮಂತ್ರಿಗಳು ಕೇವಲ ಸಹೋದರಿಯರು ಎಂದು ಕರೆಯುವುದನ್ನು ಬಿಟ್ಟು ಬೇಡಿಕೆಗಳ ಕುರಿತು ಸ್ಪಷ್ಟ ಆದೇಶ ಹೊರಡಿಸಬೇಕು ಎಂದರು. ಇದೇ ವೇಳೆ ಲೇಖಕಿ ಡಾ. ವಸುಂಧರಾ ಭೂಪತಿ, ಪ್ರಾಂತ ರೈತ ಸಂಘದ ಮುಖಂಡ ಯಶವಂತ್, ಬ್ರೇಕ್ ಥ್ರೂ ಸೈನ್ಸ್ ಸೊಸೈಟಿಯ ಮನಮೋಹನ್ ಹಾಗೂ ಪ್ರೊ. ಚಂದ್ರಶೇಖರ್ ತಾಳ್ಯ ಅವರು ಕೂಡ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಮತ್ತೊಂದೆಡೆ, ನಟಿ ಕಾರುಣ್ಯ ರಾಮ್ ಅವರು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರನ್ನು ಭೇಟಿಯಾಗಿ ಆಶಾ ಕಾರ್ಯಕರ್ತೆಯರ ಸಮಸ್ಯೆ ಬಗೆಹರಿಸುವಂತೆ ಮನವಿ ಸಲ್ಲಿಸಿದ್ದಾರೆ.

 


Share this with Friends

Related Post