ಬೆಂಗಳೂರು : “ರಾಜ್ಯದಲ್ಲಿ ಪ್ರಸ್ತುತ 6,500 ಕಾಡಾನೆಗಳಿವೆ. ಆದರೆ, ಈ ಆನೆಗಳು ಮಾತ್ರ ಯಾರಿಗೂ ಬೇಡವಾಗಿವೆ. ಬೇಲೂರಿನಿಂದ ಸ್ಥಳಾಂತರಿಸಲು ಮುಂದಾದರೆ ಚಿಕ್ಕಮಗಳೂರಿನವರು ಬೇಡ ಎನ್ನುತ್ತಾರೆ; ಹಾಗಾದರೆ ಅವುಗಳನ್ನು ಎಲ್ಲಿಗೆ ಕಳುಹಿಸಬೇಕು?” ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಾಸನ ಜಿಲ್ಲೆಯ ಬೇಲೂರು ಭಾಗದಿಂದ ಕಾಡಾನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸುವ ‘ಆಪರೇಷನ್ ಗಜ’ ಕಾರ್ಯಾಚರಣೆಗೆ ಚಿಕ್ಕಮಗಳೂರು ಜಿಲ್ಲೆಯ ಸ್ವಪಕ್ಷೀಯ ಶಾಸಕರೇ ತೀವ್ರ ವಿರೋಧ ವ್ಯಕ್ತಪಡಿಸಿ, ರಾಜೀನಾಮೆ ಬೆದರಿಕೆ ಹಾಕಿರುವ ಬೆನ್ನಲ್ಲೇ ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಸ್ವಪಕ್ಷೀಯ ಶಾಸಕರಿಗೆ ಖಡಕ್ ತಿರುಗೇಟು:
“ಅರಣ್ಯ ಸಚಿವರಿಗೆ ಕಾಡಿನ ಬಗ್ಗೆ ಏನೂ ಗೊತ್ತಿಲ್ಲ” ಎಂದು ಟೀಕಿಸಿದ್ದ ಚಿಕ್ಕಮಗಳೂರು ಶಾಸಕ ಎಚ್.ಡಿ. ತಮ್ಮಯ್ಯ ಅವರಿಗೆ ತಿರುಗೇಟು ನೀಡಿದ ರಾಮಲಿಂಗಾರೆಡ್ಡಿ, “ನಾನು 8 ಬಾರಿ ಶಾಸಕನಾಗಿದ್ದೇನೆ, ನನಗೆ ಪರಿಸ್ಥಿತಿ ಅರ್ಥವಾಗುವುದಿಲ್ಲವೇ? ನಮ್ಮದೂ ಬನ್ನೇರುಘಟ್ಟ ಅರಣ್ಯ ವ್ಯಾಪ್ತಿಯ ಆನೇಕಲ್, ಅಲ್ಲಿನ ನಮ್ಮ ತೋಟಕ್ಕೂ ಕಾಡಾನೆಗಳು ಬರುತ್ತವೆ. ನನಗೆ ಅರಣ್ಯ ಖಾತೆಯ ಮೇಲೆ ಯಾವುದೇ ವ್ಯಾಮೋಹವಿಲ್ಲ. ಕಾಡಿನಲ್ಲೇ ಹುಟ್ಟಿ ಬೆಳೆದವರು ಯಾರಾದರೂ ಇದ್ದರೆ ಅವರಿಗೇ ಅರಣ್ಯ ಸಚಿವ ಸ್ಥಾನ ನೀಡಲಿ, ನನ್ನದೇನೂ ಅಭ್ಯಂತರವಿಲ್ಲ. ಇದರಿಂದ ಆನೆ ದಾಳಿ ನಿಲ್ಲುವುದಾದರೆ ನಾನು ಖಾತೆ ಬಿಟ್ಟುಕೊಡಲು ಸಿದ್ಧನಿದ್ದೇನೆ” ಎಂದು ಹೇಳಿದರು. ಅಲ್ಲದೆ, ಶಾಸಕಿ ನಯನಾ ಮೋಟಮ್ಮ ಸೇರಿದಂತೆ ಇತರ ಶಾಸಕರು ನೇರವಾಗಿ ನನ್ನೊಂದಿಗೆ ಚರ್ಚಿಸದೆ ರಾಜೀನಾಮೆ ಪತ್ರ ನೀಡುವ ನಾಟಕವಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ಆನೆಗಳ ಸಂಖ್ಯೆ ಹೆಚ್ಚಳವೇ ಸಮಸ್ಯೆಗೆ ಕಾರಣ:
“1978ರಲ್ಲಿ ರಾಜ್ಯದಲ್ಲಿ ಕೇವಲ 1,950 ಆನೆಗಳಿದ್ದವು; ಈಗ ಅವುಗಳ ಸಂಖ್ಯೆ 6,500ಕ್ಕೆ ಏರಿಕೆಯಾಗಿದೆ. ಜೊತೆಗೆ 653 ಹುಲಿಗಳಿವೆ. ಅರಣ್ಯ ಪ್ರದೇಶ ಸೀಮಿತವಾಗಿದ್ದು, ಬೇಲೂರಿನಲ್ಲಿರುವ 13,000 ಎಕರೆ ಅರಣ್ಯವೂ ಒಂದೇ ಕಡೆ ಇಲ್ಲದೆ ತುಂಡು ತುಂಡಾಗಿದೆ. ಅಲ್ಲಿ 55 ಆನೆಗಳು ಬೀಡುಬಿಟ್ಟಿದ್ದು, ಇತ್ತೀಚೆಗೆ ಇಬ್ಬರು ಸಾವನ್ನಪ್ಪಿದ್ದಾರೆ. ಆನೆಗಳಿಗೆ ಬೇಲೂರು ಆನೆ, ಚಿಕ್ಕಮಗಳೂರು ಆನೆ ಎಂಬ ಪ್ರತ್ಯೇಕ ಗಡಿ ಇರುವುದಿಲ್ಲ; ಕಾಡಿರುವ ಕಡೆ ಅವು ಸಂಚರಿಸುತ್ತವೆ” ಎಂದು ಸಚಿವರು ಪರಿಸ್ಥಿತಿಯನ್ನು ವಿವರಿಸಿದರು.
ನ.30ರಂದು ಮಹತ್ವದ ಸಭೆ:
ಮುಖ್ಯಮಂತ್ರಿಗಳ ಸೂಚನೆಯಂತೆ ಸದ್ಯಕ್ಕೆ ಆನೆ ಸ್ಥಳಾಂತರ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ನವೆಂಬರ್ 30ರಂದು ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಸಂಸದರು, ಶಾಸಕರು, ಕಾಫಿ ಬೆಳೆಗಾರರ ಸಂಘದ ಪ್ರತಿನಿಧಿಗಳು ಮತ್ತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ಕರೆಯಲಾಗಿದೆ. ಆ ಸಭೆಯಲ್ಲಿ ಶಾಸಕರು ಸೂಚಿಸುವ ಸೂಕ್ತ ಅರಣ್ಯ ಪ್ರದೇಶಕ್ಕೆ ಆನೆಗಳನ್ನು ಸ್ಥಳಾಂತರಿಸುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು.

