Thu. Nov 26th, 2026

ನಂದಿನಿ ಮೊಸರಿನ ದರ ಪ್ರತಿ ಕೆ.ಜಿ.ಗೆ 2 ರೂ. ಇಳಿಕೆ:ನವೆಂಬರ್ 29ರಿಂದ ಪರಿಷ್ಕೃತ ದರ ಜಾರಿ..!

Share this with Friends

ಬೆಂಗಳೂರು : ಭಾರಿ ಬೆಲೆ ಏರಿಕೆಗೆ ಸಾರ್ವಜನಿಕರು, ಗೃಹಿಣಿಯರು ಹಾಗೂ ಹೋಟೆಲ್ ಉದ್ಯಮಿಗಳಿಂದ ವ್ಯಕ್ತವಾದ ತೀವ್ರ ವಿರೋಧಕ್ಕೆ ಮಣಿದಿರುವ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್), ನಂದಿನಿ ಮೊಸರಿನ ಮಾರಾಟ ದರವನ್ನು ಪ್ರತಿ ಕೆ.ಜಿ.ಗೆ (ಲೀಟರ್) 2 ರೂ. ಹಾಗೂ 500 ಗ್ರಾಂ ಪ್ಯಾಕೆಟ್‌ಗೆ 1 ರೂ. ಕಡಿತಗೊಳಿಸಿ ಬುಧವಾರ ಆದೇಶ ಹೊರಡಿಸಿದೆ. ಈ ಪರಿಷ್ಕೃತ ದರಗಳು ನವೆಂಬರ್ 29ರಿಂದ ರಾಜ್ಯಾದ್ಯಂತ ಜಾರಿಗೆ ಬರಲಿವೆ.

ನೂತನ ದರಪಟ್ಟಿಯ ಅನ್ವಯ, ಪ್ರಸ್ತುತ 68 ರೂ. ಇದ್ದ 1 ಕೆ.ಜಿ. ಮೊಸರಿನ ಪ್ಯಾಕೆಟ್ ಬೆಲೆ 66 ರೂ.ಗೆ ಇಳಿಕೆಯಾಗಲಿದೆ. ಅದೇ ರೀತಿ, 34 ರೂ. ಇದ್ದ 500 ಗ್ರಾಂ ಮೊಸರಿನ ಪ್ಯಾಕೆಟ್ ಇನ್ನು ಮುಂದೆ 33 ರೂ.ಗೆ ಲಭ್ಯವಾಗಲಿದೆ. ಗ್ರಾಹಕರ ಹಿತದೃಷ್ಟಿಯಿಂದ ಮೊಸರಿನ ದರವನ್ನು ಕಡಿತಗೊಳಿಸುವಂತೆ ರಾಜ್ಯ ಸರ್ಕಾರ ನೀಡಿದ್ದ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೆಎಂಎಫ್ ಪ್ರಕಟಣೆಯಲ್ಲಿ ತಿಳಿಸಿದೆ.

ದರ ಏರಿಕೆ ಮತ್ತು ಇಳಿಕೆಯ ಹಿನ್ನೆಲೆ:

ಕಳೆದ ನವೆಂಬರ್ 1ರಿಂದ ಜಾರಿಗೆ ಬರುವಂತೆ ಕೆಎಂಎಫ್ ನಂದಿನಿ ಹಾಲು ಮತ್ತು ಮೊಸರಿನ ದರವನ್ನು ದಿಢೀರ್ ಹೆಚ್ಚಿಸಿತ್ತು. ಆ ಸಂದರ್ಭದಲ್ಲಿ 1 ಕೆ.ಜಿ. ಮೊಸರಿನ ಬೆಲೆಯನ್ನು 54 ರೂ.ನಿಂದ 68 ರೂ.ಗೆ (ಬರೋಬ್ಬರಿ 14 ರೂ. ಹೆಚ್ಚಳ) ಮತ್ತು 500 ಗ್ರಾಂ ಪ್ಯಾಕೆಟ್ ದರವನ್ನು 28 ರೂ.ನಿಂದ 34 ರೂ.ಗೆ (6 ರೂ. ಹೆಚ್ಚಳ) ಏರಿಸಲಾಗಿತ್ತು. ದೈನಂದಿನ ಅಗತ್ಯ ವಸ್ತುವಿನ ಬೆಲೆಯನ್ನು ಏಕಾಏಕಿ ಹೆಚ್ಚಿಸಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಬೆಂಗಳೂರು ಹಾಗೂ ರಾಜ್ಯ ಹೋಟೆಲ್‌ಗಳ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ದರ ಇಳಿಸುವಂತೆ ಮನವಿ ಸಲ್ಲಿಸಿದ್ದರು. ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೊಸರಿನ ದರದಲ್ಲಿ 2 ರೂ. ಕಡಿತಗೊಳಿಸುವಂತೆ ಸೂಚನೆ ನೀಡಿದ್ದರು. ಸರ್ಕಾರದ ಸೂಚನೆ ಹೊರಬಿದ್ದ ಸುಮಾರು 20 ದಿನಗಳ ನಂತರ ಕೆಎಂಎಫ್ ದರ ಇಳಿಕೆಯ ಅಧಿಕೃತ ಆದೇಶ ಪ್ರಕಟಿಸಿದೆ.

 

 


Share this with Friends

Related Post