Thu. Nov 26th, 2026

ಇಂದಿನಿಂದ ನ. 30ರವರೆಗೆ ಕೆಇಎ ನೇಮಕಾತಿ ಲಿಖಿತ ಪರೀಕ್ಷೆ; ಅಭ್ಯರ್ಥಿಗಳ ತಪಾಸಣೆಗೆ ಇದೇ ಮೊದಲ ಬಾರಿಗೆ ‘ಕ್ಯೂಆರ್ ಕೋಡ್’ ಬಳಕೆ

Share this with Friends

ಬೆಂಗಳೂರು: ರಾಜ್ಯದ ವಸತಿ ಶಾಲಾ ಶಿಕ್ಷಕರು ಹಾಗೂ ಕಾರಾಗೃಹ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿಗೆ ನವೆಂಬರ್ 27ರಿಂದ 30ರವರೆಗೆ ಲಿಖಿತ ಪರೀಕ್ಷೆಗಳು ನಡೆಯಲಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಪರೀಕ್ಷಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಈ ಬಾರಿ ಅಭ್ಯರ್ಥಿಗಳ ನೈಜತೆ ಪರಿಶೀಲನೆಗೆ ವಿನೂತನ ಕ್ಯೂಆರ್ ಕೋಡ್ (QR-Code) ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.

ಪರೀಕ್ಷಾ ವೇಳಾಪಟ್ಟಿ ಮತ್ತು ಹುದ್ದೆಗಳ ವಿವರ:

ನ. 27 (ಶುಕ್ರವಾರ): ಬೆಂಗಳೂರು, ಕಲಬುರಗಿ ಹಾಗೂ ಮೈಸೂರಿನಲ್ಲಿ ಪರೀಕ್ಷೆ ನಡೆಯಲಿದೆ. ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ 57 ಕಂಪ್ಯೂಟರ್ ಶಿಕ್ಷಕರ ಹುದ್ದೆಗಳಿಗೆ (27,933 ಅಭ್ಯರ್ಥಿಗಳು) ಪರೀಕ್ಷೆ ನಿಗದಿಯಾಗಿದೆ. ಮಧ್ಯಾಹ್ನ 2.30ರಿಂದ 4.30ರವರೆಗೆ 103 ಗಣಿತ ಶಿಕ್ಷಕರು (18,891 ಅಭ್ಯರ್ಥಿಗಳು) ಹಾಗೂ 55 ಹಿಂದಿ ಶಿಕ್ಷಕರ ಹುದ್ದೆಗಳಿಗೆ (1,479 ಅಭ್ಯರ್ಥಿಗಳು) ಪರೀಕ್ಷೆ ಜರುಗಲಿದೆ.

ನ. 28 (ಶನಿವಾರ): ಕಲ್ಯಾಣ ಕರ್ನಾಟಕ ವೃಂದದ ಕಾರಾಗೃಹ ಇಲಾಖೆಯ 5 ಜೈಲರ್ ಮತ್ತು 275 ವಾರ್ಡರ್ ಹುದ್ದೆಗಳಿಗೆ ಬಳ್ಳಾರಿ, ದಾವಣಗೆರೆ ಹಾಗೂ ಕಲಬುರಗಿ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ನ. 29 (ಭಾನುವಾರ): 108 ಇಂಗ್ಲಿಷ್ ಶಿಕ್ಷಕರು ಹಾಗೂ 81 ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳಿಗೆ ಬೆಂಗಳೂರು, ಮೈಸೂರು ಮತ್ತು ಕಲಬುರಗಿಯಲ್ಲಿ ಪರೀಕ್ಷೆ ಆಯೋಜಿಸಲಾಗಿದೆ.

ನ. 30 (ಸೋಮವಾರ): 154 ಸಮಾಜ ವಿಜ್ಞಾನ ಶಿಕ್ಷಕರ ಹುದ್ದೆಗಳಿಗೆ ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ.

ಕ್ಯೂಆರ್ ಕೋಡ್ ಮೂಲಕ ಅಭ್ಯರ್ಥಿಗಳ ನೈಜತೆ ಪರಿಶೀಲನೆ

ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳ ತಪಾಸಣೆಯನ್ನು ಮತ್ತಷ್ಟು ಚುರುಕುಗೊಳಿಸಲು ಕೆಇಎ ಹೊಸ ಕ್ರಮ ಕೈಗೊಂಡಿದೆ. ಈವರೆಗೆ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಮುಖ ಚಹರೆ ಪತ್ತೆ ತಂತ್ರಜ್ಞಾನದ (Facial Recognition) ಮೂಲಕ ಅಭ್ಯರ್ಥಿಗಳನ್ನು ತಪಾಸಣೆ ನಡೆಸಿ ಒಳಬಿಡುತ್ತಿದ್ದರು. ಇದರಿಂದ ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರದಲ್ಲಿ ವಿಳಂಬವಾಗುತ್ತಿತ್ತು.

ಇದನ್ನು ತಪ್ಪಿಸಲು, ನ. 27ರಿಂದ 30ರವರೆಗೆ ನಡೆಯುವ ಎಲ್ಲಾ ಪರೀಕ್ಷೆಗಳಲ್ಲಿ ಕೊಠಡಿ ಮೇಲ್ವಿಚಾರಕರೇ ಕೆಇಎ ಅಭಿವೃದ್ಧಿಪಡಿಸಿರುವ ಕ್ಯೂಆರ್ ಕೋಡ್ ಬಳಸಿ ಅಭ್ಯರ್ಥಿಗಳ ಭಾವಚಿತ್ರ ತೆಗೆದು ನೈಜತೆ ಖಾತರಿಪಡಿಸಿಕೊಳ್ಳಲಿದ್ದಾರೆ. ಪ್ರತಿ ಕೊಠಡಿಗೆ ಇಬ್ಬರು ಮೇಲ್ವಿಚಾರಕರನ್ನು ನಿಯೋಜಿಸಲಾಗಿದ್ದು, ಮೊದಲ ಬೆಲ್ ಆಗುವವರೆಗೆ ಒಬ್ಬರು ಅಭ್ಯರ್ಥಿಗಳ ಪರಿಶೀಲನೆ ನಡೆಸಲಿದ್ದಾರೆ. ಈ ಪ್ರಾಯೋಗಿಕ ಪ್ರಯತ್ನದ ಯಶಸ್ಸನ್ನು ಆಧರಿಸಿ ಮುಂದಿನ ಇತರ ಪರೀಕ್ಷೆಗಳಿಗೂ ಈ ವ್ಯವಸ್ಥೆಯನ್ನು ವಿಸ್ತರಿಸಲಾಗುವುದು ಎಂದು ಎಚ್. ಪ್ರಸನ್ನ ಮಾಹಿತಿ ನೀಡಿದ್ದಾರೆ.

 

 


Share this with Friends

Related Post