ರಾಮನಗರ: ಸಾಮಾನ್ಯವಾಗಿ ರಾಜಕಾರಣಿಗಳ ಮನೆ ಮದುವೆ ಎಂದರೆ ಕೋಟ್ಯಂತರ ರೂಪಾಯಿ ಖರ್ಚು, ಅದ್ಧೂರಿ ಸೆಟ್ಗಳು, ವೈಭವೋಪೇತ ಮೆರವಣಿಗೆ ಹಾಗೂ ಆಡಂಬರವೇ ಎದ್ದು ಕಾಣುತ್ತದೆ. ಆದರೆ, ಈ ಎಲ್ಲಾ ಸಂಪ್ರದಾಯಗಳಿಗೆ ಸೆಡ್ಡು ಹೊಡೆದಿರುವ ನಂಜನಗೂಡು ಕ್ಷೇತ್ರದ ಯುವ ಶಾಸಕ ದರ್ಶನ್ ಧ್ರುವನಾರಾಯಣ್, ಯಾವುದೇ ಆಡಂಬರವಿಲ್ಲದೆ ಅತ್ಯಂತ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಸಮಾಜಕ್ಕೆ ಹೊಸ ಮಾದರಿಯಾಗಿದ್ದಾರೆ.
ರಾಮನಗರದ ಪ್ರಕೃತಿ ರಮಣೀಯ ತಾಣ ‘ಜಾನಪದ ಲೋಕ’ದಲ್ಲಿ ಗುರುವಾರ ನಡೆದ ಸರಳ ಸಮಾರಂಭದಲ್ಲಿ ದರ್ಶನ್ ಧ್ರುವನಾರಾಯಣ್ ಹಾಗೂ ಡಾ. ಶ್ರೀನಿಧಿ ಅವರು ರಾಷ್ಟ್ರಕವಿ ಕುವೆಂಪು ಅವರ ಆಶಯದ ‘ಮಂತ್ರ ಮಾಂಗಲ್ಯ’ ಪದ್ಧತಿಯಡಿ ಸತಿ-ಪತಿಗಳಾದರು.
ಸರಳತೆ ಮತ್ತು ಸಮಾನತೆಯ ಸಂದೇಶ:
ಪುರೋಹಿತಶಾಹಿ ಪದ್ಧತಿ, ವರದಕ್ಷಿಣೆ ಹಾಗೂ ದುಂದುವೆಚ್ಚಗಳಿಗೆ ಅವಕಾಶವಿಲ್ಲದ ಮಂತ್ರ ಮಾಂಗಲ್ಯದ ಸಂಹಿತೆಯಂತೆ ಈ ವಿವಾಹ ನೆರವೇರಿತು. ಕೇವಲ ಕುಟುಂಬಸ್ಥರು, ಆಪ್ತರು ಹಾಗೂ ಬೆರಳೆಣಿಕೆಯಷ್ಟು ಗಣ್ಯರ ಸಮ್ಮುಖದಲ್ಲಿ ನವಜೋಡಿ ಪರಸ್ಪರ ಹಾರ ಬದಲಾಯಿಸಿಕೊಂಡು, ಸಂವಿಧಾನ ಹಾಗೂ ಕುವೆಂಪು ಅವರ ವಿಚಾರಧಾರೆಗಳಿಗೆ ಸಾಕ್ಷಿಯಾಗಿ ಹೊಸ ಬದುಕಿಗೆ ಮುನ್ನುಡಿ ಬರೆದರು.
ಸಿಎಂ ಡಿ.ಕೆ. ಶಿವಕುಮಾರ್ ಮೆಚ್ಚುಗೆ:
ಯುವ ಶಾಸಕನ ಈ ಸರಳ ನಡೆಯನ್ನು ಸ್ವತಃ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ನೂತನ ದಂಪತಿಗೆ ಶುಭಹಾರೈಸಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಿಎಂ, “ಸರಳತೆ, ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಪ್ರತೀಕವಾದ ಮಂತ್ರ ಮಾಂಗಲ್ಯದ ಮೂಲಕ ಹೊಸ ಜೀವನಕ್ಕೆ ಮುನ್ನುಡಿ ಬರೆದಿರುವ ನವಜೋಡಿಯ ಬಾಳ ಪಯಣದ ಪ್ರತಿ ಹೆಜ್ಜೆಯೂ ಸಂತಸ, ಸೌಹಾರ್ದ ಮತ್ತು ಸಮೃದ್ಧಿಯಿಂದ ಕೂಡಿರಲಿ” ಎಂದು ಆಶೀರ್ವದಿಸಿದ್ದಾರೆ.
ತಂದೆ ದಿವಂಗತ ಆರ್. ಧ್ರುವನಾರಾಯಣ್ ಅವರ ಸರಳತೆ ಮತ್ತು ಜನಪರ ಕಾಳಜಿಯ ಹಾದಿಯಲ್ಲೇ ಸಾಗುತ್ತಿರುವ ದರ್ಶನ್, ತಮ್ಮ ವಿವಾಹದಲ್ಲೂ ಆಡಂಬರಕ್ಕೆ ತಿಲಾಂಜಲಿ ಇಡುವ ಮೂಲಕ ಯುವ ಪೀಳಿಗೆಗೆ ಹಾಗೂ ಜನಪ್ರತಿನಿಧಿಗಳಿಗೆ ಉತ್ತಮ ಸಂದೇಶ ರವಾನಿಸಿದ್ದಾರೆ.

