ನವದೆಹಲಿ.ಏ.8 : 5, 8, 9 ಹಾಗೂ 11ನೇ ತರಗತಿ ವಿದ್ಯಾರ್ಥಿಗಳ ಬೋರ್ಡ್ ಪರೀಕ್ಷೆಗಳ ಫಲಿತಾಂಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಕಲೆದ ತಿಂಗಳು ಕರ್ನಾಟಕ ಹೈಕೋರ್ಟ್ ನಿರ್ದೇಶನದ ಮೇರೆಗೆ ಬೋರ್ಡ್ ಎಕ್ಸಾಂ ನಡೆದಿತ್ತು. ಈ ಪರೀಕ್ಷೆಗಳ ಫಲಿತಾಂಶಗಳನ್ನು ಘೋಷಿಸುವುದಕ್ಕೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ. ಮುಂದಿನ ಆದೇಶದವರೆಗೆ ಕಾಯುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಸುಪ್ರೀಕೋರ್ಟ್ನ ನ್ಯಾಯಮೂರ್ತಿಗಳಾದ ಬೇಲಾ ತ್ರಿವೇದಿ ಮತ್ತು ಪಂಕಜ್ ಮಿಥಾಲ್ ಅವರ ನ್ಯಾಯಾಪೀಠವು ಈ ತೀರ್ಪು ನೀಡಿದೆ. ಶಾಲೆ ಘೋಷಿಸಿದ ಫಲಿತಾಂಶಗಳನ್ನು ಯಾವುದೇ ಕಾರಣಕ್ಕೂ ಗಣನೆಗೆ ತೆಗೆದುಕೊಳ್ಳಬಾರದು ಎಂದು ಹೇಳಿದೆ.
5,8,9,11 ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ಬೇಡ ಎಂದು ಖಾಸಗಿ ಶಾಲಾ ಒಕ್ಕೂಟಗಳು ಆಗ್ರಹಿಸಿದ್ದವು. ಈ ಹಿಂದೆಯೂ ಖಾಸಗಿ ಶಾಲೆಗಳ ಒಕ್ಕೂಟ ಸುಪ್ರೀಂಕೋರ್ಟ್ ಮೆಟ್ಟಿಲು ಏರಿತ್ತು. ಆ ವೇಳೆ ಹೈಕೋರ್ಟ್ನಲ್ಲೇ ಬಗೆಹರಿಸಿಕೊಳ್ಳಲು ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. ಇದೀಗ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ.
ಮಾರ್ಚ್ ತಿಂಗಳಿನಲ್ಲಿ ಬೋರ್ಡ್ ಎಕ್ಸಾಂ ನಡೆದಿತ್ತು. ಪರೀಕ್ಷೆ ನಡೆಸದಂತೆ ರುಪ್ಸಾ ಅರ್ಜಿ ಸಲ್ಲಿಸಿತ್ತು. ಆದಾಗ್ಯೂ ಪರೀಕ್ಷೆ ಸುಸೂತ್ರವಾಗಿ ನಡೆಸಲಾಗಿತ್ತು. ಇದಾದ ಬಳಿಕ ರುಪ್ಸಾ ಮೌಲ್ಯಮಾಪನ ದೋಷ ಆರೋಪ ಮಾಡಿತ್ತು. ಬೇಕಾಬಿಟ್ಟಿ ಮೌಲ್ಯ ಮಾಪನವಾಗಿದೆ ಎಂದು ಹೇಳಿತ್ತು. ಮೌಲ್ಯಾಂಕನ ಪರೀಕ್ಷೆ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ ಫಲಿತಾಂಶ ಬಿಡುಗಡೆಗೆ ಬ್ರೇಕ್ ಹಾಕಿದೆ.