Thu. Oct 31st, 2024

ಧಾರವಾಡದಲ್ಲಿ ಪ್ರಹ್ಲಾದ್ ಜೋಷಿ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ಕಣಕ್ಕೆ..!

Dingaleshwara Swamiji
Share this with Friends

ಬೆಂಗಳೂರು,ಏ.8 : ಧಾರವಾಡ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಪ್ರಹ್ಲಾದ್ ಜೋಶಿಯವರು ಮತ್ತೆ ಕಣಕ್ಕಿಳಿದಿದ್ದು, ಇವರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ದಿಂಗಲೇಶ್ವರ ಶ್ರೀ ಕಣಕ್ಕೆ ಇಳಿಯವುದಾಗಿ ಘೋಷಿಸಿದ್ದಾರೆ.ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸ್ಪರ್ಧೆ ಮಾಡಿರುವ ಪ್ರತಿಷ್ಠಿತ ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಶಿರಹಟ್ಟಿ ಭಾವೈಕ್ಯತಾ ಮಹಾಸಂಸ್ಥಾನ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ. ಕೋಮು ಸೌಹಾರ್ದ ಜಾತ್ಯಾತೀತ ಹೋರಾಟ, ಎಡಪಂಥೀಯ ದೃಷ್ಟಿಕೋನದಿಂದ ಬೆಳೆದು ಬಂದ ಅವರು ಹುಬ್ಬಳ್ಳಿಯ ಮೂರುಸಾವಿರ ಮಠದ ಉತ್ತರಾಕಾರಕ್ಕಾಗಿ ಹೋರಾಟ ಸೇರಿದಂತೆ ಅನೇಕ ಬೆಳವಣಿಗೆಗಳು, ಜೀವ ಬೆದರಿಕೆ, ಭಾವೈಕ್ಯತೆ ಸೇರಿದಂತೆ ಮಠದ ವಿಷಯವಾಗಿ ವಿವಾದಾತ್ಮಕ ಹೇಳಿಕೆಗಳಿಂದಲೇ ದಿಂಗಲೇಶ್ವರ ಶ್ರೀ ಗಮನ ಸೆಳೆದವರು.

ಸೋಮವಾರ ಬೆಂಗಳೂರಿನಲ್ಲಿ ದಿಂಗಾಲೇಶ್ವರ ಸ್ವಾಮೀಜಿಯವರು ತಮ್ಮ ಬೆಂಬಲಿಗರು, ಹಿತೈಷಿಗಳು, ಅಭಿಮಾನಿಗಳ ಜೊತೆ ಸಭೆ ನಡೆಸಿದರು. ಈ ಬಾರಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ನೀವು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲೇಬೇಕೆಂದು ಬೆಂಬಲಿಗರು ಪಟ್ಟು ಹಿಡಿದ ಕಾರಣ ಅಂತಿಮವಾಗಿ ಸ್ಪರ್ಧೆ ಮಾಡುವುದಾಗಿ ಸ್ವಾಮೀಜಿ ತಮ್ಮ ನಿರ್ಧಾರವನ್ನು ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿಂಗಾಲೇಶ್ವರ ಸ್ವಾಮೀಜಿ, ರಾಜಕೀಯದಲ್ಲಿ ಧರ್ಮ ಇರಬೇಕು ಎಂದು ಜನರು ಬಯಸಿದ್ದಾರೆ. ನೊಂದ ಜನರು ನಮ್ಮ ಜೊತೆಗೆ ನೋವು ತೊಡಗಿಕೊಂಡರು. ಹೀಗಾಗಿ ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಎರಡೂ ರಾಷ್ಟ್ರೀಯ ಪಕ್ಷಗಳು ಎಲೆಕ್ಷನ್ ಫಿಕ್ಸಿಂಗ್ ಮಾಡಿಕೊಂಡಿವೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇದು ಮತದಾರರಿಗೆ ಮಾಡಿದ ದ್ರೋಹವಾಗಿದೆ. ಎರಡು ರಾಷ್ಟ್ರೀಯ ಪಕ್ಷಗಳು ಅಭ್ಯರ್ಥಿಗಳನ್ನು ಘೋಷಣೆ ಮಾಡಿವೆ. ಆದರೆ ಮತದಾರರು ನಮ್ಮನ್ನು ಚುನಾವಣೆಗೆ ನಿಲ್ಲಿಸುವ ನಿರ್ಧಾರ ಮಾಡಿದ್ದಾರೆ.

ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ, ಸ್ವಾರ್ಥ ರಾಜಕಾರಣಿಗಳ ವಿರುದ್ಧ ಸ್ವಾಭಿಮಾನಿ ಧರ್ಮ ಗುರುಗಳು ಮಾಡಿದ ಧರ್ಮ ಯುದ್ಧದ ಘೋಷಣೆ ಇದಾಗಿದೆ. ಧರ್ಮ ಯುದ್ಧವು ಕೇವಲ ಈ ಚುನಾವಣೆಗೆ ಸೀಮಿತವಾಗಿಲ್ಲ, ಜೀವ ಇರುವವರೆಗೂ ಮುಂದುವರೆಯಲಿದೆ, ನೊಂದವರ ಕಷ್ಟಕ್ಕೆ ಸ್ಪಂದಿಸಲು ಈ ನಿರ್ಧಾರ ಎಂದು ಹೇಳಿದರು.

ಪ್ರಹ್ಲಾದ್ ಜೋಷಿ ಹೀರೋ ಆಗಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಝಿರೋ ಆಗಿದ್ದಾರೆ. ತಮ್ಮ ಸಮುದಾಯದ ಬೆಳವಣಿಗೆ ಅಷ್ಟೇ ನೋಡುತ್ತಾರೆ. ಬೇರೆ ಸಮುದಾಯದವನ್ನು ಕಡೆಗಣಿಸುತ್ತಾರೆ. ನಮ್ಮ ಸಮುದಾಯವನ್ನು ತುಳಿದು ರಾಜಕಾರಣ ಮಾಡಿದ್ದಾರೆ. ಈಶ್ವರಪ್ಪ ಅವರಿಗೆ ಟಿಕೆಟ್ ತಪ್ಪಲು ಪ್ರಹ್ಲಾದ್ ಜೋಷಿ ಅವರೇ ಕಾರಣ ಎಂದು ಇದೇ ಸಂದರ್ಭದಲ್ಲಿ ಸ್ವಾಮೀಜಿ ಹೇಳಿದರು.


Share this with Friends

Related Post