ಬೆಂಗಳೂರು, ಮೇ.15: ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಸರ್ಕಾರದಲ್ಲಿ ದೊಡ್ಡ ತಿಮಿಂಗಿಲ ಇದೆ ಎಂದಿದ್ದಾರೆ, ಕೂಡಲೇ ಅವರು ಅದರ ಹೆಸರು ಹೇಳಬೇಕು ಎಂದು ಗೃಹ ಸಚಿವ ಪರಮೇಶ್ವರ್ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರ್ಕಾರದಲ್ಲಿ ದಡ್ಡ ತಿಮಿಂಗಲ ಇದೆ ಎಂದ ಮೇಲೆ ಅದರ ಹೆಸರು ಹೇಳಬೇಕು, ಅವರಿಗೆ ಆ ತಿಮಿಂಗಿಲ ಯಾರು ಎಂದು ಗೊತ್ತಿರಲೇಬೇಕು ಹಾಗಾಗಿ ಅಂತಹ ಹೇಳಿಕೆ ನೀಡಿದ್ದಾರೆ, ಗೊತ್ತಿದ್ದೂ ಹೇಳದೆ ಹೋದರೆ ಅದು ದೊಡ್ಡ ತಪ್ಪಾಗುತ್ತದೆ ಎಂದು ತಿಳಿಸಿದರು.
ಎಚ್. ಡಿ ಕುಮಾರಸ್ವಾಮಿ ಅವರು ತಮ್ಮ ಬಳಿ ಭ್ರಷ್ಟಾಚಾರದ ಪೆನ್ ಡ್ರೈವ್ ಇದೆ ಎಂದು ಹೇಳುತ್ತಲೇ ಬಂದಿದ್ದಾರೆ, ಆದರೆ ಇದುವರೆಗೂ ಅದನ್ನು ಬಿಡುಗಡೆ ಮಾಡಿಲ್ಲ ಅದನ್ನೇ ಬಳಕೆ ಮಾಡಿಕೊಂಡು ದಿನಕ್ಕೊಂದು ಹೇಳಿಕೆ ನೀಡುತ್ತಲೇ ಇದ್ದಾರೆ, ಕೂಡಲೇ ಅವರು ಪೆನ್ ಡ್ರೈವ್ ನೀಡಲಿ ನಾವು ತನಿಖೆ ಮಾಡಿಸದೆ ಇದ್ದಾಗ ಆ ಬಗ್ಗೆ ಪ್ರಶ್ನೆ ಮಾಡಲಿ ಎಂದು ಪರಮೇಶ್ವರ್ ತಿರುಗೇಟು ನೀಡಿದರು.
ಕೆಲವರು ಪ್ರಜ್ವಲ್ ರೇವಣ್ಣ ಅವರು ಜರ್ಮನಿಯಿಂದ ವಾಪಸು ಬರಲು ಟಿಕೆಟ್ ಬುಕ್ ಮಾಡಿಸಿದ್ದಾರೆ ಎನ್ನುತ್ತಾರೆ, ಮತ್ತೆ ಕೆಲವರು ಅದನ್ನು ಕ್ಯಾನ್ಸಲ್ ಮಾಡಿದ್ದಾರೆ ಎಂದು ಹೇಳುತ್ತಾರೆ ಹಾಗಾದರೆ ಗುಪ್ತಚರ ಇಲಾಖೆಗಿಂತಲೂ ಮೊದಲು ಬೇರೆಯವರಿಗೆ ಮಾಹಿತಿ ಸಿಗುತ್ತಿದೆ ಅಂತಹ ಮಾಹಿತಿಗಳಿದ್ದರೆ ನಮಗೆ ತಲುಪಿಸಲಿ ತನಿಖೆಗೂ ಸಹಾಯವಾಗುತ್ತದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.