ಮೈಸೂರು,ಜೂ.27: ಇದು ಏನ್ ಕಾಲಾನೋ ಏನೋ,ಎಲ್ಲಿ ನೋಡಿದರೂ ಬರೀ ಮೋಸಾನೆ ಕಾಣ್ತಾ ಇದೆ.
ಇದುವರೆಗೆ ಪರೀಕ್ಷೆಗಳಲ್ಲಿ ಅಧಿಕೃತ ಅಭ್ಯರ್ಥಿ ಬದಲಿಗೆ ಮತ್ಯಾರೋ ಬರೆದ್ದನ್ನ ಕೇಳಿದ್ದೇವೆ ಇದೀಗ ಜಾಬ್ ಸರದಿ!
ವರ್ಚ್ಯೂಯಲ್ ಇಂಟರ್ವ್ಯೂ ನಲ್ಲಿ ಬೇರೆ ವ್ಯಕ್ತಿಯನ್ನ ಬಳಸಿ ಕೆಲಸ ಗಿಟ್ಟಿಸಿಕೊಂಡ ಭೂಪ ನಿಜ ಗೊತ್ತಾಗುತ್ತಿದ್ದಂತೆ ಪರಾರಿಯಾಗಿಬಿಟ್ಟಿದ್ದಾನೆ.
ಇಂತಹ ವಿಚಿತ್ರ ಘಟನೆ ಮೈಸೂರಿನ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜಾಬ್ ಏಜೆನ್ಸಿಯೊಂದಕ್ಕೆ ಮಂಕುಬೂದಿ ಎರಚಿದವನ ಹೆಸರು ಸಾಗಿ ವೆಂಕಯ್ಯ ಅಂತಾ.
ಹೆಬ್ಬಾಳ ಬಡಾವಣೆಯ ಎರಡನೇ ಹಂತದಲ್ಲಿ ಸಂದೇಶ್ ಅವರು ಟೆಕ್ ಆರ್ಕ್ ಟೆಕ್ನಾಲಜಿ ಪ್ರೈ.ಲಿ ಎಂಬ ಹೆಸರಿನಲ್ಲಿ ಹೆಸರಾಂತ ಕಂಪನಿಗಳಿಗೆ ಉದ್ಯೋಗಿಗಳನ್ನ ಇಂಟರ್ವ್ಯೂ ಮೂಲಕ ಆರಿಸಿ ಕಳಿಸುವ ಕೆಲಸ ಮಾಡುತ್ತಿದ್ದಾರೆ.
ವರ್ಚ್ಯೂಯಲ್ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನ ಆಯ್ಕೆ ಮಾಡಿಕೊಂಡು ಇನ್ಫೋಸಿಸ್ ಹಾಗೂ ಇನ್ನಿತರ ಕಂಪನಿಗಳಿಗೆ ಕಳುಹಿಸಿಕೊಡುತ್ತಾರೆ.
ಏಪ್ರಿಲ್ 2024 ರಲ್ಲಿ ಸಾಗಿ ವೆಂಕಯ್ಯ ಕೂಡಾ ಉದ್ಯೋಗ ಅರಸಿ ವರ್ಚ್ಯೂಯಲ್ ಇಂಟರ್ವ್ಯೂ ಅಟೆಂಡ್ ಮಾಡಿ ಆಯ್ಕೆ ಆಗಿದ್ದ.ಈತನ ಪ್ರತಿಭೆಗೆ ತಕ್ಕಂತೆ ಸಂದೇಶ್ ರವರು ಮೇ ತಿಂಗಳಲ್ಲಿ ಇನ್ಫೋಸಿಸ್ ಪ್ರಾಜೆಕ್ಟ್ ಗೆ ನೇಮಕ ಮಾಡಿದ್ದಾರೆ
ಜೂನ್ 14 ರವರೆಗೂ ವರ್ಕ್ ಫ್ರಂ ಹೋಮ್ ಮಾಡಿ ಉತ್ತಮ ಕೆಲಸ ಮಾಡಿದ ನಂತರ ಸಾಗಿ ವೆಂಕಯ್ಯ ಪದೇ ಪದೇ ತಪ್ಪುಗಳನ್ನ ಮಾಡುತ್ತಲೇ ಇದ್ದ.ಇದು ಅನುಮಾನಕ್ಕೆಡೆಯಾಯಿತು
ಆಗ ಸಾಗಿ ವೆಂಕಯ್ಯನ ವರ್ತನೆಯಲ್ಲಿ ಅನುಮಾನಗೊಂಡ ಸಂದೇಶ್ ಅವರು ವರ್ಚ್ಯುಯಲ್ ಮೀಟಿಂಗ್ ಕರೆದು ಪ್ರಶ್ನೆ ಕೇಳಿದಾಗ ಆತ ತಬ್ಬಿಬ್ಬಾಗಿ ಏನೇನೊ ಉತ್ತರಿಸಿದ್ದಾನೆ.
ಭಾಷೆಯಲ್ಲಿ ಅನುಮಾನ ಬಂದಿದೆ,ಭಾಷಾ ಸಂವಹನೆಯಲ್ಲೂ ವ್ಯತ್ಯಾಸ ಕಂಡುಬಂದಿದೆ.ಕೂಡಲೇ ಈತನ ಭಾವಚಿತ್ರವನ್ನ ಸ್ಕ್ರೀನ್ ಶಾಟ್ ತೆಗೆದು ಪರಿಶೀಲಿಸಿದಾಗ ಸಾಗಿ ವೆಂಕಯ್ಯನ ಬಣ್ಣ ಬಯಲಾಗಿದೆ.
ನೇಮಕವಾಗುವಾಗ ನಡೆಸಿದ ಸಂದರ್ಶನದಲ್ಲಿ ಇದ್ದ ವ್ಯಕ್ತಿಯೇ ಬೇರೆ ಕೆಲಸಕ್ಕೆ ಬಂದಿರುವ ವ್ಯಕ್ತಿಯೇ ಬೇರೆ ಆಗಿರುವುದು ಭಾವಚಿತ್ರದಲ್ಲಿ ಖಚಿತವಾಗಿದೆ,ತನ್ನ ಬಣ್ಣ ಬಯಲಾಗುತ್ತಿದ್ದಂತೆ ಸಾಗಿ ವೆಂಕಯ್ಯ ತಲೆಮರೆಸಿಕೊಂಡಿದ್ದಾನೆ.
ಈಗ ಸಂದೇಶ್ ಅವರು ಹೆಬ್ಬಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದು ಆತನ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.