ಸರ್ಜಾಪುರ ರಸ್ತೆಯ ದೊಮ್ಮಸಂದ್ರ ವೃತ್ತದಲ್ಲಿ ಮೀತಿ ಮೀರುತ್ತಿರುವ ಸಂಚಾರ ದಟ್ಟಣೆ, ನಿತ್ಯ ಗಂಟೆಗಟ್ಟಲೆ ನಿಂತಲ್ಲೆ ನಿಲುತ್ತಿವೆ ವಾಹನಗಳು
ಬೆಂಗಳೂರು, ಜು,23 : ಸರ್ಜಾಪುರ ರಸ್ತೆಯ ದೊಮ್ಮಸಂದ್ರ ವೃತ್ತದಲ್ಲಿ ಅವ್ಯವಸ್ಥಿತವಾಗಿ ವಾಹನಗಳು ಸಂಚಾರ ಮಾಡುತ್ತಿರುವುದರಿಂದ ಜನರು ಇಲ್ಲಿ ಗಂಟೆಗಟ್ಟಲೆ ಸಂಚಾರ ದಟ್ಟನೆಯಲ್ಲಿ ಸಿಲುಕಿಕೊಂಡು ಪರದಾಡುತ್ತಿದ್ದಾರೆ.
ಪ್ರತಿ ದಿನ ಇಲ್ಲಿ ಸಂಚಾರ ದಟ್ಟನೆ ಮುಂದುವರೆಯುತ್ತಿದ್ದು ಜನರು ಪ್ರತಿ ದಿನ ಸಂಚಾರ ದಟ್ಟಣೆಯಿಂದ ರೋಸಿಹೋಗಿ ಆಳುವ ಸರ್ಕಾರಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಈ ಸಂಚಾರ ದಟ್ಟನೆಗೆ ಪ್ರಮುಖ ಕಾರಣ ದೊಮ್ಮಸಂದ್ರ ವೃತ್ತದಲ್ಲಿ ಯಾವುದೇ ಸಂಚಾರ ಪೋಲಿಸರು ಇಲ್ಲದಿರುವುದು, ಸಂಚಾರ ಚಿಹ್ನೆಗಳು ಆಳವಡಿಸದೇ ಇರುವುದು. ನಾಲ್ಕು ದಿಕ್ಕಿನಿಂದಲೂ ಏಕ ಕಾಲಕ್ಕೆ ವಾಹನ ಸವಾರರು ಸಂಚಾರ ಮಾಡಿ ದಟ್ಟನೆಯಲ್ಲಿ ಸಿಲುಕಿಕೊಳ್ಳುತ್ತಿರುವುದು. ಇದರ ಜೊತೆಗೆ ಸುಮಾರು ಆರೇಳು ವರ್ಷಗಳಿಂದಲೂ ನೆನೆಗದಿಗೆ ಬಿದ್ದಿರುವ ಮೇಲು ಸೇತುವೆ ಕಾಮಗಾರಿ. ಇನ್ನು ಹದಗೆಟ್ಟ ರಸ್ತೆ ಇವೆಲ್ಲವೂ ಇಲ್ಲಿನ ಮಿತಿಮೀರಿದ ಸಂಚಾರ ದಟ್ಟನೆಗೆ ಕಾರಣವಾಗಿದೆ.
ಈ ಸಮಸ್ಯೆ ಬಗೆಹರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಮನಸ್ಸು ಯಾರಿಗೂ ಇದ್ದಂತಿಲ್ಲ, ಕೇತ್ರ ಶಾಸಕರು, ಸ್ಥಳೀಯ ಆಡಳಿತ, ಅಧಿಕಾರಗಳು, ಪೋಲಿಸ್ ಇಲಾಖೆ, ಅಧಿಕಾರದಲ್ಲಿರುವ ಸರ್ಕಾರ, ಬೆಂಗಳೂರು ನಗರಾಭಿವೃದ್ಧಿ ಸಚಿವರು, ದೊಮ್ಮಸಂದ್ರ ಸೇರಿದಂತೆ ಸುತ್ತ ಮುತ್ತಲ ಊರಿನ ಜನರು ಇವರೆಲ್ಲರೂ ಕಣ್ಣಿಗೆ ಕಂಡರು ಕಾಣದಂತೆ ದಿನ ತಮ್ಮ ವ್ಯಯಕ್ತಿಕ ವ್ಯವಹಾರ, ಕೆಲಸಗಳಲ್ಲಿ ತೊಡಗಿಕೊಂಡಿರುತ್ತಾರೆ.
ಈ ಸಂಚಾರದಟ್ಟಣೆಯಿಂದ ಕಚೇರಿಗಳಿಗೆ ಸರಿಯಾದ ಸಮಯಕ್ಕೆ ತಲುಪದೇ ಪರಿತಪಿಸುವವರು ಎಷ್ಟೋ ಮಂದಿ. ಶಾಲೆಗಳ ಪ್ರಾರಂಭದ ಸಮಯ ಮೀರಿದರು ಬಸ್ಸುಗಳಲ್ಲೇ ಇರುವ ಶಾಲಾ ಮಕ್ಕಳು, ಕೆಲ ಶಾಲಾಮಕ್ಕಳು, ಉದ್ಯೋಗಿಗಳು ಬಸ್ಸಿನಿಂದ ಇಳಿದು ಒಂದು ಅಥವಾ ಎರಡು ಕಿಲೋ ಮೀಟರ್ ದೂರದವರೆಗೆ ನಡೆದು ಕೊಂಡು ಹೋಗುವುದು ಪ್ರತಿ ದಿನ ಸಾಮಾನ್ಯ ಎಂಬಂತೆ ಆಗೋಗಿದೆ.
ದೊಮ್ಮಸಂದ್ರದ ವೃತ್ತದಲ್ಲಿ ಸಂಚಾರ ದಟ್ಟನೆ ನಿವಾರಣೆಯಾಗಲು ಜವಾಬ್ದಾರಿ ನಿರ್ವಹಿಸಬೇಕಿರುವವರು ಕಾರ್ಯ ಪ್ರವೃತ್ತರಾಗಿ ಆದಷ್ಟು ಬೇಗ ಸಮಸ್ಯೆಯಿಂದ ಜನರನ್ನು ಪಾರು ಮಾಡುವಂತಾಗಲಿ ಎಂಬುದು ಈ ಸುದ್ದಿಯ ಆಶಯ.

