Fri. Mar 6th, 2026

ಧೈರ್ಯವಿದ್ದರೆ ಗ್ಯಾರಂಟಿಗಳ ಮೇಲೆ ವಿಶ್ವಾಸವಿದ್ದರೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಿಸಿ: ವಿಜಯೇಂದ್ರ ಸವಾಲು

Share this with Friends

ನವದೆಹಲಿ: ರಾಜ್ಯ ಸರ್ಕಾರ ನುಡಿದಂತೆ ನಡೆದಿರುವುದು ನಿಜವೇ ಆಗಿದ್ದರೆ,‌ನಿಮ್ಮ ಗ್ಯಾರಂಟಿಗಳ ಬಗ್ಗೆ ಅಪಾರವಾದ ವಿಶ್ವಾಸ ಇದ್ದರೆ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆ ಘೋಷಿಸಿ ಎಂದು ರಾಜ್ಯ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸವಾಲೆಸೆದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಿಮಗೆ ತಾಕತ್ತಿದ್ದರೆ, ಧೈರ್ಯವಿದ್ದರೆ, ನಿಮ್ಮ ಗ್ಯಾರಂಟಿಗಳ ಬಗ್ಗೆ ಅಪಾರವಾದ ವಿಶ್ವಾಸ ಇದ್ದರೆ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆ ಘೋಷಿಸಬೇಕು ಅದನ್ನು ಬಿಟ್ಟು ವಿಳಂಬ ಮಾಡುವುದೇಕೆ? ನಿಮ್ಮನ್ನು ತಡೆಯುವವರು ಯಾರು? ಕುಂಟು ನೆಪ ಮುಂದಿಟ್ಟು ಜಿಬಿಎ ಚುನಾವಣೆಯನ್ನೂ ಮುಂದೂಡುತ್ತೀರಿ. ವಾಸ್ತವಿಕ ಸತ್ಯ ಏನೆಂದರೆ, ರಾಜ್ಯದ ಮತದಾರರು ಇಂಥ ಅಯೋಗ್ಯ ಕಾಂಗ್ರೆಸ್ ಪಕ್ಷಕ್ಕೆ ಮತದಾನ ಮಾಡಿದ್ದರ ಕುರಿತು ಭ್ರಮನಿರಸನಗೊಂಡಿದ್ದಾರೆ ಎಂದು ವಿಶ್ಲೇಷಿಸಿದರು.

ರಾಜ್ಯದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು ಎರಡೂವರೆ ವರ್ಷಗಳನ್ನು ಪೂರೈಸಿದೆ. ನುಡಿದಂತೆ ನಡೆದ, ನುಡಿದಂತೆ ನಡೆಯುತ್ತಿರುವ ಸರಕಾರ, ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದನ್ನು ಎಲ್ಲವನ್ನೂ ಅನುಷ್ಠಾನ ಮಾಡಿದ್ದೇವೆ; ರಾಜ್ಯದ ಕಾಂಗ್ರೆಸ್ ಸರಕಾರ ಮಾದರಿ ಸರಕಾರ ಎಂದು ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಾದಿಯಾಗಿ ಸಚಿವ ಸಂಪುಟದ ಸದಸ್ಯರು ಪದೇಪದೇ ಈ ಮಾತನಾಡುತ್ತಾರೆ. ಆದರೆ, ಈ ಸರಕಾರ ಜನತೆಗೆ ನ್ಯಾಯ ಕೊಟ್ಟಿಲ್ಲ.ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಾರೆ. ಕಳೆದ  ಎರಡೂವರೆ ವರ್ಷಗಳಲ್ಲಿ ಜನರು ಬಳಸುವ ವಸ್ತುಗಳ ಬೆಲೆ ಏರಿಕೆಯನ್ನು ಯಾವ ರೀತಿ ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ ಎಂದು ಕೇಳಿದರು.

ರೈತರ ವಿಚಾರದಲ್ಲಿ ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ರೈತರ ಬಗ್ಗೆ ಇಷ್ಟೊಂದು ನಿರ್ಲಕ್ಷ್ಯ ತೋರಿದ ಮತ್ತೊಂದು ಸರಕಾರ ಯಾವುದೂ ಇಲ್ಲ ಎಂದು ಆರೋಪಿಸಿದರು. ಕಬ್ಬು ಬೆಳೆಗಾರರ ಹೋರಾಟ ಗಮನಿಸಿದ್ದೀರಿ; ಹೋರಾಟ ಐದಾರು ದಿನವಾದರೂ ಬೆಳಗಾವಿ, ಬಾಗಲಕೋಟೆ, ಗದಗ ಮೊದಲಾದ ಜಿಲ್ಲೆಗಳಲ್ಲಿ ಹೋರಾಟ ನಡೆಸುತ್ತಿದ್ದರೆ, ಅಲ್ಲಿಯೇ ಇದ್ದ ಉಸ್ತುವಾರಿ ಸಚಿವರು ಸ್ಥಳಕ್ಕೆ ಹೋಗಿಲ್ಲ; ಸಕ್ಕರೆ ಸಚಿವರು ಎಲ್ಲಿದ್ದಾರೆಂದು ಜನರು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಚಿವರಿಗೆ ತಾಕೀತು ಮಾಡಬೇಕಾದ ಮುಖ್ಯಮಂತ್ರಿಗಳೂ ತಲೆ ಕೆಡಿಸಿಕೊಂಡಿಲ್ಲ ಎಂದು ದೂರಿದರು.

ಯಡಿಯೂರಪ್ಪ ಬಗ್ಗೆ ಏಕವಚನ ಬೇಡ- ಯತ್ನಾಳ್‍ಗೆ ಎಚ್ಚರಿಕೆ

ಬಸನಗೌಡ ಪಾಟೀಲ ಯತ್ನಾಳರ ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ನನ್ನ ಬಗ್ಗೆ ವೈಯಕ್ತಿಕವಾಗಿ ಏನು ಬೇಕಾದರೂ ಟೀಕೆ ಮಾಡಲಿ. ಆದರೆ, ಒಬ್ಬ ಹೋರಾಟಗಾರ, ರೈತ ನಾಯಕ ಯಡಿಯೂರಪ್ಪನವರ ಬಗ್ಗೆ ಮಾತನಾಡುವಾಗ ಏಕವಚನದಲ್ಲಿ ಮಾತನಾಡದೇ, ಗೌರವದಿಂದ ಮಾತನಾಡುವುದನ್ನು ಕಲಿತರೆ ಒಳ್ಳೆಯದು. ಭ್ರಷ್ಟಾಚಾರದ ಬಗ್ಗೆ ಉದ್ದುದ್ದ ಭಾಷಣ ಬಿಗಿದದ್ದನ್ನು ನೋಡಿದ್ದೇನೆ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಅವಿಶ್ವಾಸ ನಿರ್ಣಯದಲ್ಲಿ ಇವರು ಹೇಗೆ ನಡೆದುಕೊಂಡಿದ್ದಾರೆ ಎಂಬುದನ್ನು ಇತ್ತೀಚೆಗೆ ಒಬ್ಬರು ಸಚಿವರು ಸುದ್ದಿವಾಹಿನಿಯಲ್ಲಿ ಹೇಳಿದ್ದಾರೆ. ಅದರ ಬಗ್ಗೆ ಉಲ್ಲೇಖಿಸಲು ಹೋಗುವುದಿಲ್ಲ ಎಂದು ನುಡಿದರು. ಯತ್ನಾಳರು ಭ್ರಷ್ಟಾಚಾರದ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ; ಯಡಿಯೂರಪ್ಪನವರ ಬಗ್ಗೆ ಮಾತನಾಡುವಾಗ ಇನ್ನೂ ಹೆಚ್ಚು ಎಚ್ಚರ ವಹಿಸಲಿ ಎಂದು ತಿಳಿಸಿದರು.


Share this with Friends

Related Post