Fri. Mar 6th, 2026

ಗ್ರೇಟರ್ ತುಮಕೂರು ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದೆ: ಪರಮೇಶ್ವರ್

Share this with Friends

ತುಮಕೂರು: ಗ್ರೇಟರ್ ತುಮಕೂರು ಕುರಿತ ಬೇಡಿಕೆ ಇದ್ದು, ಈ ಸಂಬಂಧ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರದ ಮಟ್ಟದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.

ತುಮಕೂರು ಮಹಾನಗರ ಪಾಲಿಕೆ ವತಿಯಿಂದ ನಗರದ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ನಡೆದ ನಾಗರಿಕರಿಗೆ ಇ-ಖಾತಾ (ನಮೂನೆ-2) ವಿತರಣೆ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಗರದ ವಿವಿಧ ಕೊಳಗೇರಿ ಪ್ರದೇಶಗಳ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಹಾಗೂ ಕಲ್ಯಾಣ ಕಾರ್ಯಕ್ರಮಗಳಡಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಪ್ರೋತ್ಸಾಹ ಧನ ಸೌಲಭ್ಯಗಳನ್ನು ವಿತರಿಸಿ ಮಾತನಾಡಿದ ಅವರು, ಗ್ರೇಟರ್ ತುಮಕೂರು ಘೋಷಣೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ. ಗ್ರೇಟರ್ ತುಮಕೂರು ಘೋಷಣೆಯಿಂದ ನಗರಕ್ಕೆ ಹೆಚ್ಚಿನ ಅನುದಾನ ಲಭ್ಯವಾಗುತ್ತದೆ. ರಸ್ತೆ, ಕುಡಿಯುವ ನೀರು, ಒಳಚರಂಡಿ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿ ಸುಧಾರಣೆಗೊಳ್ಳುತ್ತದೆ. ಕೈಗಾರಿಕೆ, ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ. ಯೋಜಿತ ನಗರ ಅಭಿವೃದ್ಧಿ ಹೊಂದಿ ಜನರ ಜೀವನಮಟ್ಟ ಉತ್ತಮಗೊಳಿಸುವ ಉದ್ದೇಶದಿಂದ ಈ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಎತ್ತಿನಹೊಳೆ ಪರಿಹಾರ:

ಕೊರಟಗೆರೆ ತಾಲ್ಲೂಕಿನ ಜಟ್ಟಿ ಅಗ್ರಹಾರ ಗ್ರಾಮ ಪಂಚಾಯಿತಿ ಆವರಣದಲ್ಲಿ ಎತ್ತಿನಹೊಳೆ ಯೋಜನೆಗೆ ಭೂಸ್ವಾಧೀನ ಪಡಿಸಿಕೊಂಡ ಜಮೀನುಗಳ ರೈತರಿಗೆ 5.53 ಕೋಟಿ ರೂ. ಪರಿಹಾರ ಚೆಕ್ ವಿತರಣೆ ಹಾಗೂ ಇ ಸ್ವತ್ತು ಅಭಿಯಾನಕ್ಕೆ ಪರಮೇಶ್ವರ್ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು,ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರವು ನುಡಿದಂತೆ ನಡೆದಿದೆ. ಅದರಂತೆ ತಾಲ್ಲೂಕಿನಲ್ಲಿ ಎತ್ತಿನಹೊಳೆ ಯೋಜನೆಯಿಂದ ಜಮೀನು ಕಳೆದುಕೊಂಡ ರೈತರಿಗೆ ಪರಿಹಾರ ನೀಡುವುದರ ಜೊತೆಗೆ ಯೋಜನೆ ಕಾಮಗಾರಿ ಭಾಗಶಃ ಪೂರ್ಣಗೊಳಿಸಿದ್ದೇವೆ ಎಂದರು.

ತಾಲ್ಲೂಕಿನ 70 ಕೆರೆಗಳಿಗೆ ಎತ್ತಿನಹೊಳೆ ನೀರು ಹರಿಸುವ ಯೋಜನೆ ಕಾಮಗಾರಿ ಬಾಗಶಃ ಪೂರ್ಣಗೊಂಡಿದೆ. 800 ಕೋಟಿ ರೂ. ಪರಿಹಾರವನ್ನು ಈಗಾಗಲೇ ನೀಡಲಾಗಿದೆ. 180 ಕೋಟಿ ರೂ. ಪರಿಹಾರ ನೀಡುವುದು ಮಾತ್ರ ಬಾಕಿ ಇದ್ದು, ಕೆಲವೇ ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಎತ್ತಿನಹೊಳೆ ಯೋಜನೆ ಬಫರ್ ಡ್ಯಾಂ ನಮ್ಮ ತಾಲ್ಲೂಕು ವ್ಯಾಪ್ತಿಯಲ್ಲಿ ಆಗಬೇಕಿತ್ತು. ಆದರೆ ಇಲ್ಲಿನ ರೈತರಿಗೆ ತಪ್ಪು ಮಾಹಿತಿ ನೀಡಿ ಅದು ನಮ್ಮ ಕೈತಪ್ಪುವಂತೆ ಮಾಡಲಾಯಿತು ಎಂದರು.


Share this with Friends

Related Post