Sat. Jun 6th, 2026

ಭ್ರೂಣಹತ್ಯೆ ತಡೆಗೆ ಎಲ್ಲ ಜಿಲ್ಲೆಗಳಲ್ಲಿ ಪ್ರತ್ಯೇಕ ನೋಡಲ್ ಅಧಿಕಾರಿ ನೇಮಕ: ದಿನೇಶ್ ಗುಂಡೂರಾವ್

Share this with Friends

ಬೆಳಗಾವಿ:ಹೆಣ್ಣುಭ್ರೂಣ ಹತ್ಯೆ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು,ರಾಜ್ಯದಲ್ಲಿ 3 ಭ್ರೂಣಹತ್ಯೆ ಪ್ರಕರಣ ದಾಖಲಿಸಿ 13 ಜನರ ಬಂಧಿಸಲಾಗಿದೆ, ಎಲ್ಲ ಜಿಲ್ಲೆಗಳಲ್ಲಿ ಪ್ರತ್ಯೇಕ ನೋಡಲ್ ಅಧಿಕಾರಿಗಳನ್ನು ನೇಮಿಸಿ ಭ್ರೂಣ ಹತ್ಯೆ ತಡೆಗೆ ಕ್ರಮಗಳನ್ನು ಬಿಗಿಗೊಳಿಸುತ್ತಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗಂಡೂರಾವ್ ಹೇಳಿದರು.

ಪರಿಷತ್ತಿನಲ್ಲಿ ಸದಸ್ಯ ಸಿ.ಟಿ.ರವಿ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದ ಕೆಲ ಜಿಲ್ಲೆಗಳಲ್ಲಿ, ಕೆಲ ಆಸ್ಪತ್ರೆಗಳಲ್ಲಿಯೇ ಗಂಡು ಸಂತಾನವು ಗರಿಷ್ಟ ಪ್ರಮಾಣದಲ್ಲಿ ದಾಖಲಾಗುತ್ತಿರುವುದನ್ನು ಗುಪ್ತಚರ ದಾಳಿಯ ಮೂಲಕ ಕಂಡುಕೊಳ್ಳಲಾಗುತ್ತಿದೆ. ಯಾವ ತಾಲೂಕಿನಲ್ಲಿ ಗಂಡು ಹೆಣ್ಣಿನ ಅನುಪಾತ ಹೆಚ್ಚುತ್ತಿದೆ? ಯಾವ ಆಸ್ಪತ್ರೆಯಲ್ಲಿ ಏನಾಗುತ್ತಿದೆ? ಎನ್ನುವಂತಹ ಅಂಶಗಳ ಮೇಲೆ ಮೇಲ್ವಿಚಾರಣೆ ನಡೆಸಿ, ಅಂತಹ ಜಾಲವನ್ನು ಹತ್ತಿಕ್ಕಲು ಸೂಕ್ತ ಕ್ರಮವಹಿಸುವುದಾಗಿ ಸಚಿವರು ತಿಳಿಸಿದರು.

ಪಿ.ಸಿ. & ಪಿ.ಎನ್.ಡಿ.ಟಿ. ಕಾಯ್ದೆಯ ಪರಿಣಾಮಕಾರಿ ಅನುಷ್ಠಾಕ್ಕಾಗಿ 2024-25 ನೇ ಸಾಲಿನಲ್ಲಿ ಬಸ್ ಬ್ರ್ಯಾಡಿಂಗ್, ಟ್ರೈನ್ ಬ್ರ್ಯಾಡಿಂಗ್, ರ್ಹೋಡಿಂಗ್ಸ್ ಗೋಡೆ ಬರಹ, ರೇಡಿಯೋ ಜಿಂಗಲ್ಸ್, ಟಿ.ವಿ. ಸ್ಪಾಟ್ಸ್ ಮುಖಾಂತರ ಸಾರ್ವಜನಿಕರಿಗೆ ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆಯ ಕುರಿತು ಅರಿವು ಮೂಡಿಸಲಾಗುತ್ತಿದೆ. ಪಿ.ಸಿ. & ಪಿ.ಎನ್.ಡಿ.ಟಿ. ಕಾಯ್ದೆಯ ಬಗ್ಗೆ ರಾಜ್ಯ ಮಟ್ಟದಿಂದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕಾಲಕಾಲಕ್ಕೆ ಅರಿವು ಮೂಡಿಸುವ ಕಾರ್ಯಾಗಾರವನ್ನು ನಡೆಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

ರಾಜ್ಯದಲ್ಲಿ ಎರಡು ವರ್ಷಗಳಲ್ಲಿ ಮೂರು ಭ್ರೂಣಹತ್ಯೆ ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಲ್ಲಿ 13 ಜನರನ್ನು ಬಂಧಿಸಲಾಗಿದೆ.ಬೆಂಗಳೂರ ಗ್ರಾಮಾಂತರ ಜಿಲ್ಲೆಯ ಎಸ್ ಪಿ ಜಿ ಆಸ್ಪತ್ರೆಯ 6 ಜನರನ್ನು, ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸರ್ಕಾರಿ ವಸತಿ ಗೃಹದ 6 ಜನರನ್ನು ಮತ್ತು ಬೆಂಗಳೂರ ನಗರ ಜಿಲ್ಲೆಯ ದ್ಯಾನಿ ಪಾಲಿ ಕ್ಲಿನಿಕ್ ಆಸ್ಪತ್ರೆಯ ಒಬ್ಬರನ್ನು ಬಂಧಿಸಲಾಗಿದೆ. ಈ ಪ್ರಕರಣಗಳ ತನಿಖೆಯು ನ್ಯಾಯಾಲಯಗಳಲ್ಲಿ ಬಾಕಿ ಇರುತ್ತದೆ ಎಂದು ಸಚಿವರು ತಿಳಿಸಿದರು.

ಸೇವೆಯಿಂದ ಅಮಾನತು: ಈ ಹಿಂದೆ ಬೆಳಕಿಗೆ ಬಂದಿದ್ದ ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮವಹಿಸಲಾಗಿದ್ದು, ರಾಮನಗರ ಜಿಲ್ಲಾ ಆಸ್ಪತ್ರೆಯಲ್ಲಿ ಭ್ರೂಣ ಲಿಂಗ ಪತ್ತೆಗೆ ಸಂಬಂಧಿಸಿದ ಪ್ರಕರಣದಲ್ಲಿ ಶಾಮೀಲಾಗಿರಬೇಕೆಂಬ ಹಿನ್ನೆಲೆಯಲ್ಲಿ ಡಾ.ಶಶಿ ಎಸ್.ಎಲ್., ರೇಡಿಯಾಲಜಿಸ್ಟ್ ಇವರನ್ನು ದಿನಾಂಕ: 03-09-2025ರಂದು ಸೇವೆಯಿಂದ ಅಮಾನತ್ತುಗೊಳಿಸಿದೆ ಎಂದು ಸಚಿವರು ಮಾಹಿತಿ ನೀಡಿದರು.

ರಾಜ್ಯದಲ್ಲಿ ಇಲಿ ಜ್ವರ ನಿಯಂತ್ರಣ: 

ಪ್ರಸಕ್ತ ಸಾಲಿನ ನವೆಂಬರ್ ಅಂತ್ಯದವರೆಗೆ ರಾಜ್ಯಾದ್ಯಂತ ಒಟ್ಟು 2,134 ಧೃಡೀಕೃತ ಇಲಿ ಜ್ವರ ಪ್ರಕರಣಗಳು ವರದಿಯಾಗಿದ್ದು ಕಳೆದ ಸಾಲಿನಲ್ಲಿ (2024ರ) ಇದೇ ಅವಧಿಯಲ್ಲಿ 2,164 ಧೃಡೀಕೃತ ಪ್ರಕರಣಗಳು ವರದಿಯಾಗಿರುತ್ತವೆ. ಕಳೆದ ಸಾಲಿಗೆ ಹೋಲಿಸಿದಲ್ಲಿ ಶೇ.1 ರಷ್ಟು ಪ್ರಕರಣಗಳು ಕಡಿಮೆಯಾಗಿದ್ದು, ನಿಯಂತ್ರಣದಲ್ಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ವಿಧಾನ ಪರಿಷತ್‍ನಲ್ಲಿ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು,ಇಲಿ ಜ್ವರ ರೋಗದ ನಿರ್ದಿಷ್ಟ ಮತ್ತು ಆರಂಭಿಕ ಪತ್ತೆಗಾಗಿ ದ. ಕನ್ನಡ ಜಿಲ್ಲೆಯ ಜಿಲ್ಲಾ ಸಾರ್ವಜನಿಕ ಅರೋಗ್ಯ ಪ್ರಯೋಗಾಲಯವನ್ನು, “ಪ್ರಾದೇಶಿಕ ಲೆಪ್ರೊಸ್ಪೆರಾ ಪ್ರಯೋಗಾಲಯ” ಎಂದು ಎನ್.ಸಿ.ಡಿ.ಸಿ. ದೆಹಲಿ, ಕೇಂದ್ರ ಸರ್ಕಾರ, ಇವರು ಗುರುತಿಸಿ, ಈ ಪ್ರಯೋಗಾಲಯದಲ್ಲಿ ಎಲೈಸಾ ಆಧಾರಿತ IgM, ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಜೊತೆಗೆSerological analysis  ಗಾಗಿ ಉನ್ನತ ಪರೀಕ್ಷೆಯಾದ MAT (Microscopic agglutination test) IgG ಪರೀಕ್ಷೆಗಳನ್ನೂ ಸಹ ಮಾಡಲಾಗುತ್ತಿದೆ.ಈ ಪ್ರಯೋಗಾಲಯವು ಪ್ರಾದೇಶಿಕ ಪ್ರಯೋಗಾಲಯವಾಗಿದ್ದು, ರಾಜ್ಯದ ಇತರೆ ಜಿಲ್ಲೆಗಳಿಂದ ಲೆಪ್ರೋ ಸ್ಪೇರೋಸಿಸ್ ಮಾದರಿಗಳನ್ನು ಸ್ವೀಕರಿಸಿ, ಅವುಗಳನ್ನೂ ಸಹ ಪರೀಕ್ಷಿಸಲಾಗುತ್ತಿದೆ.ಪರೀಕ್ಷೆಗಾಗಿ ಅಗತ್ಯವಿರುವ ಎಲೈಸಾ ಮತ್ತು ಒಂಖಿ ಕಿಟ್ಟುಗಳನ್ನು ಅಗತ್ಯ ಪ್ರಮಾಣದಲ್ಲಿ ಖರೀದಿಸಿ ಕಿಟ್ಟುಗಳ ಕೊರತೆಯಾಗದಂತೆ ಕ್ರಮವಹಿಸಲಾಗಿದೆ.ಇಲಿ ಜ್ವರಕ್ಕೆ ರೋಗ ಲಕ್ಷಣಗಳಿಗೆ ಅನುಗುಣವಾಗಿ ಔಷಧಿಯನ್ನು ಶಿಷ್ಟಾಚಾರದಂತೆ (Treatment protocol)ನೀಡಲಾಗುತ್ತಿದೆ ಹಾಗೂ ಸದರಿ ಔಷಧಿಗಳನ್ನು ಅಗತ್ಯ ಪ್ರಮಾಣದಲ್ಲಿ ದಾಸ್ತಾನು ಇಡಲಾಗಿದ್ದು ಔಷಧಿ ಕೊರತೆಯಾಗದಂತೆ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

 


Share this with Friends

Related Post