Sat. Jul 11th, 2026

ಅನುಮತಿಯಿಲ್ಲದೆ ಡಬ್ಬಿಂಗ್, ಬಾಕಿ ಸಂಭಾವನೆ: ‘ಕರಾವಳಿ’ ಚಿತ್ರದ ವಿವಾದಕ್ಕೆ ನಟ ಪ್ರಜ್ವಲ್ ದೇವರಾಜ್ ಅಧಿಕೃತ ಸ್ಪಷ್ಟನೆ!

Share this with Friends

ಬೆಂಗಳೂರು: “ಕರಾವಳಿ ಚಿತ್ರದ ಟ್ರೈಲರ್ ಬಿಡುಗಡೆಯಾದ ಸಂದರ್ಭದಲ್ಲಿ, ನನ್ನ ಯಾವುದೇ ಪೂರ್ವ ಮಾಹಿತಿ, ಅನುಮತಿ ಅಥವಾ ಒಪ್ಪಿಗೆಯಿಲ್ಲದೆ ನನ್ನ ಪಾತ್ರಕ್ಕೆ ಮತ್ತೊಬ್ಬರಿಂದ ಡಬ್ಬಿಂಗ್ ಮಾಡಿಸಿರುವ ವಿಚಾರ ನನಗೆ ತಿಳಿಯಿತು,” ಎಂದು ನಟ ಪ್ರಜ್ವಲ್ ದೇವರಾಜ್ ಅವರು ಚಿತ್ರತಂಡದ ವಿರುದ್ಧ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಚಿತ್ರದ ನಿರ್ಮಾಣ ಸಂಸ್ಥೆ ಹಾಗೂ ನಿರ್ದೇಶಕರು ಸಾರ್ವಜನಿಕವಾಗಿ ನೀಡುತ್ತಿರುವ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ ನಟ ಕೊನೆಗೂ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.

ಟ್ರೈಲರ್ ಲಾಂಚ್‌ಗೆ ಗೈರಾಗಲು ಅಸಲಿ ಕಾರಣವೇನು?

ತಮ್ಮ ಪ್ರಕಟಣೆಯಲ್ಲಿ ವಾಸ್ತವಾಂಶಗಳನ್ನು ಬಿಚ್ಚಿಟ್ಟ ಪ್ರಜ್ವಲ್, “ಟ್ರೈಲರ್ ಬಿಡುಗಡೆ ಕಾರ್ಯಕ್ರಮದ ವೇಳೆಗೆ ನನಗೆ ಒಪ್ಪಿಗೆಯಾಗಿದ್ದ ಸಂಭಾವನೆಯೂ ಸಂಪೂರ್ಣವಾಗಿ ಪಾವತಿಯಾಗಿರಲಿಲ್ಲ. ಡಬ್ಬಿಂಗ್ ವಿಚಾರದಲ್ಲಿ ಆದ ಅನ್ಯಾಯ ಮತ್ತು ಸಂಭಾವನೆ ಬಾಕಿ ಉಳಿಸಿಕೊಂಡಿದ್ದೇ ನಾನು ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗವಹಿಸದಿರಲು ಪ್ರಮುಖ ಕಾರಣ,” ಎಂದು ಸ್ಪಷ್ಟಪಡಿಸಿದ್ದಾರೆ. ಟ್ರೈಲರ್ ಬಿಡುಗಡೆಯಾದ ಮರುದಿನವಷ್ಟೇ ಜಿಎಸ್‌ಟಿ ಮೊತ್ತವನ್ನು ಹೊರತುಪಡಿಸಿ ನನ್ನ ಬಾಕಿ ಸಂಭಾವನೆಯನ್ನು ಚಿತ್ರತಂಡ ಪಾವತಿಸಿದೆ ಎಂದು ಅವರು ತಿಳಿಸಿದ್ದಾರೆ.

ದೈಹಿಕ ರೂಪಾಂತರದ ಆರೋಪಕ್ಕೆ ತಿರುಗೇಟು

ಸಂಭಾವನೆ ತಡೆಹಿಡಿಯಲು ನಟನ ‘ಸಿಕ್ಸ್ ಪ್ಯಾಕ್’ ಅಥವಾ ದೈಹಿಕ ರೂಪಾಂತರದ ಒಪ್ಪಂದದ ಉಲ್ಲಂಘನೆ ಕಾರಣ ಎಂಬ ಚಿತ್ರತಂಡದ ವಾದವನ್ನು ಪ್ರಜ್ವಲ್ ದೇವರಾಜ್ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. “ಚಿತ್ರದ ಮೊದಲ ದಿನದಿಂದಲೂ ನನ್ನ ನಿಲುವು ಒಂದೇ ಆಗಿತ್ತು. ಆದರೆ ಈ ವಿವಾದಕ್ಕೆ ನನ್ನ ದೈಹಿಕ ರೂಪಾಂತರ ಅಥವಾ ಸಿಕ್ಸ್-ಪ್ಯಾಕ್ ಲುಕ್ ಕಾರಣ ಎಂಬ ರೀತಿಯಲ್ಲಿ ಸಾರ್ವಜನಿಕವಾಗಿ ನೀಡಿರುವ ತಪ್ಪು ಹೇಳಿಕೆಗಳು ನನ್ನ ಗಮನಕ್ಕೆ ಬಂದಿವೆ,” ಎಂದು ಅವರು ಆಕ್ಷೇಪಿಸಿದ್ದಾರೆ. ಜೊತೆಗೆ, ತಮ್ಮ ಧ್ವನಿ ಈ ಪಾತ್ರಕ್ಕೆ ಸೂಕ್ತವಲ್ಲ ಎಂಬ ಚಿತ್ರತಂಡದ ಸಾರ್ವಜನಿಕ ಹೇಳಿಕೆಗಳಿಗೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

“ಸಿನಿಮಾ ಎಲ್ಲಕ್ಕಿಂತ ದೊಡ್ಡದು” – ಚಿತ್ರಕ್ಕೆ ಶುಭಹಾರೈಕೆ

ವಿವಾದ ಏನೇ ಇದ್ದರೂ ಒಬ್ಬ ಕಲಾವಿದನಾಗಿ ಸಿನಿಮಾ ಮತ್ತು ಚಿತ್ರರಂಗ ತಮಗೆ ಮುಖ್ಯ ಎಂಬುದನ್ನು ಪ್ರಜ್ವಲ್ ಸಾಬೀತುಪಡಿಸಿದ್ದಾರೆ. “ನನ್ನ ಮೊದಲ ಆದ್ಯತೆ ಯಾವಾಗಲೂ ಕನ್ನಡ ಸಿನಿಮಾ. ಆದ್ದರಿಂದ, ನನ್ನ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ‘ಕರಾವಳಿ’ ಚಿತ್ರದ ಸಂಪೂರ್ಣ ತಂಡಕ್ಕೆ ನನ್ನ ಹೃತೂರ್ವಕ ಶುಭಹಾರೈಕೆಗಳನ್ನು ತಿಳಿಸುತ್ತೇನೆ,” ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ಕಷ್ಟದ ಸಮಯದಲ್ಲಿ ತಮಗೆ ಬೆಂಬಲವಾಗಿ ನಿಂತ ಅಭಿಮಾನಿಗಳು, ಮಾಧ್ಯಮ ಮಿತ್ರರು ಹಾಗೂ ಚಿತ್ರರಂಗದ ಗಣ್ಯರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

 

 


Share this with Friends

Related Post