Sat. Jun 6th, 2026

ಡಿ.8 ರ ಸರ್ವಪಕ್ಷ‌ ಸಭೆ ಮುಂದೂಡಿಕೆ: ಡಿಸಿಎಂ ಡಿ.ಕೆ.ಶಿವಕುಮಾರ್

Share this with Friends

ದೆಹಲಿ:ನೀರಾವರಿ ಯೋಜನೆಗಳು ಹಾಗು ಕೇಂದ್ರದ ಅನುದಾನ ಬಾಕಿ ವಿಚಾರ ಕುರಿತು ದೆಹಲಿಯಲ್ಲಿ ಡಿ.8 ರಂದು ಕರೆಯಲುದ್ದೇಶಿಸಿದ್ದ ರಾಜ್ಯದ ಸರ್ವಪಕ್ಷ ಸಂಸದರ ಸಭೆಯನ್ನ ಮುಂದೂಡಿಕೆ ಮಾಡಿರುವುದಾಗಿ ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ದೆಹಲಿಯ ಕರ್ನಾಟಕ ಭವನದಲ್ಲಿ ಮಾತನಾಡಿದ ಅವರು, “ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಸೋಮಣ್ಣ ಅವರಿಗೆ ಪರಿಶೀಲನಾ ಸಭೆ ಇರುವ ಕಾರಣಕ್ಕೆ ಭಾಗವಹಿಸಲು ಆಗುತ್ತಿಲ್ಲ. ನಿರ್ಮಲಾ ಸೀತರಾಮನ್ ಅವರಿಗೆ ಸಂಸತ್ ನಲ್ಲಿ ಬಿಲ್ ಮಂಡನೆ ಮಾಡಬೇಕಾದ ಕಾರಣಕ್ಕೆ ಭಾಗವಹಿಸಲು ಆಗುತ್ತಿಲ್ಲ. ನಾನು ಪ್ರಹ್ಲಾದ್ ಜೋಶಿ ಅವರ ಬಳಿ ಮಾತನಾಡಿದೆ. ಆಗ ಅವರು ಪ್ರಧಾನಿಯವರು ಭಾಗವಹಿಸುವ ಕಾರಣಕ್ಕೆ ಆಗುವುದಿಲ್ಲ ಎಂದಿದ್ದಾರೆ” ಹಾಗಾಗಿ “ಡಿಸೆಂಬರ್ 8 ರಂದು ದೆಹಲಿಯಲ್ಲಿ ನಡೆಸಲು ತೀರ್ಮಾನಿಸಲಾಗಿದ್ದ ಸರ್ವಪಕ್ಷ ಸಭೆಯನ್ನು ಮುಂದೂಡಲಾಗಿದೆ ಎಂದರು.

ವಿರೋಧ ಪಕ್ಷದ ನಾಯಕರು, ಕೇಂದ್ರ ಸಚಿವರು, ರಾಜ್ಯದ ಸಂಸದರ ಬಳಿ ಮಾತನಾಡಿ ಸೂಕ್ತ ದಿನಾಂಕವನ್ನು ಮುಂದೆ ತಿಳಿಸಲಾಗುವುದು”.”ವಿರೋಧ‌ ಪಕ್ಷದ ನಾಯಕರು, ಸಂಸದರು, ಕೇಂದ್ರ ಸಚಿವರುಗಳ ಸಭೆಯನ್ನು ಒಟ್ಟಿಗೆ ಮಾಡಬೇಕು. ಏಕೆಂದರೆ ರಾಜ್ಯದ ಹಿತಕ್ಕೆ ಒಂದು ದನಿಯಾಗಿ ಹೋರಾಟ ಮಾಡಬೇಕು, ಅದಕ್ಕಾಗಿ ಈ ತಯಾರಿ””ಮುಂದಿನ ಸಭೆಯಲ್ಲಿ ನಮ್ಮ ಸಂಸದರು ಕೈಗೆತ್ತಿಕೊಳ್ಳಬೇಕಾದ ವಿಚಾರಗಳ ಬಗ್ಗೆ ತಿಳಿಸಲಾಗುವುದು. ಯಾರು ನೇತೃತ್ವ ವಹಿಸಬೇಕು ಎಂಬುದು ಮುಖ್ಯ” ಎಂದರು.

ಸಿದ್ದರಾಮಯ್ಯ ಅವರು ತೊಟ್ಟಿದ್ದ ವಾಚ್ ನ‌ ಬೆಲೆ 43‌ ಲಕ್ಷ ‌ಎಂದು ಬಿಜೆಪಿ ಟೀಕೆ ಮಾಡಿರುವ ಬಗ್ಗೆ ಕೇಳಿದಾಗ, “ಯಾರು ಹೇಳಿದ್ದು ಆ ವಾಚಿನ ಬೆಲೆ 43 ಲಕ್ಷ ಎಂದು. ನಾನು 7-8 ವರ್ಷದ ಹಿಂದೆ ತೆಗೆದುಕೊಂಡಾಗ 24 ಲಕ್ಷದಷ್ಟಿತ್ತು. ಅದು ಹೇಗೆ 43 ಲಕ್ಷವಾಗುತ್ತದೆ. ಉಪಹಾರ ಸಭೆಯ ದಿನ ನಾವಿಬ್ಬರು ಕಾಕತಾಳೀಯವಾಗಿ ಒಂದೇ ಕಂಪೆನಿಯ ವಾಚ್ ಧರಿಸಿದ್ದೇವೆ ಎಂದು ಆನಂತರ ತಿಳಿಯಿತು” ಎಂದರು.

ಬ್ರೇಕ್ ಫಾಸ್ಟ್ ಮೀಟಿಂಗ್ ಅನ್ನು ಬೀಗತನ ಎಂದು ಕೆ.ಎನ್.ರಾಜಣ್ಣ ಅವರು ಕರೆದಿರುವ ಬಗ್ಗೆ ಕೇಳಿದಾಗ “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆ.ಎನ್.ರಾಜಣ್ಣ ಅವರ ಮನೆಗೆ ಊಟಕ್ಕೆ ಹೋಗಿದ್ದರು. ನಾನು ಅವರ ಹುಟ್ಟುಹಬ್ಬದ ದಿನ ಹೋಗಿದ್ದೆ. ಹಾಗಾದರೆ ನಮ್ಮದೂ ಬೀಗತನ ತಾನೇ?” ಎಂದು ತಿವಿದರು.

ಈಗ ಸರ್ಕಾರದಲ್ಲಿ ಗೊಂದಲ ಪರಿಹಾರವಾಯಿತೆ ಎಂದಾಗ, “ಗೊಂದಲವೇ ಇರಲಿಲ್ಲ. ನೀವೇ ಗೊಂದಲ ಸೃಷ್ಟಿಸಿದವರು” ಎಂದರು.ಸಂಪುಟ ವಿಸ್ತರಣೆ ಬಗ್ಗೆ ಕೇಳಿದಾಗ, “ಇದರ ಬಗ್ಗೆ ಮುಖ್ಯಮಂತ್ರಿಯವರ ಬಳಿ ವಿಚಾರಿಸಿ” ಎಂದರು.


Share this with Friends

Related Post