Wed. Nov 18th, 2026

ಕೊರೆಯುವ ಚಳಿಯಲ್ಲೂ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ: ಮಾಸಿಕ 15,000 ಗೌರವಧನಕ್ಕೆ ಪಟ್ಟು

Share this with Friends

ಬೆಂಗಳೂರು: ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ರಾಜ್ಯಾದ್ಯಂತ ಸಾವಿರಾರು ಆಶಾ ಕಾರ್ಯಕರ್ತೆಯರು ನವೆಂಬರ್ 17ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ. ಕೊರೆಯುವ ಚಳಿಯನ್ನು ಲೆಕ್ಕಿಸದೆ ಅನೇಕ ಆಶಾ ಕಾರ್ಯಕರ್ತೆಯರು ತಮ್ಮ ಪುಟ್ಟ ಮಕ್ಕಳೊಂದಿಗೆ ಫ್ರೀಡಂ ಪಾರ್ಕ್ ಮತ್ತು ಸುತ್ತಮುತ್ತಲಿನ ರಸ್ತೆಗಳಲ್ಲೇ ರಾತ್ರಿ ಕಳೆದು ಹೋರಾಟ ಮುಂದುವರಿಸಿದ್ದಾರೆ.

2025ರ ಜನವರಿಯಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ಗೌರವಧನ ಹೆಚ್ಚಳದ ಭರವಸೆಯನ್ನು ಸರ್ಕಾರ ಈವರೆಗೂ ಈಡೇರಿಸಿಲ್ಲ ಎಂದು ಪ್ರತಿಭಟನಾನಿರತರು ಆರೋಪಿಸಿದ್ದಾರೆ‌.

ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳು:

ನಿಶ್ಚಿತ ಗೌರವಧನ. ಪ್ರತಿ ತಿಂಗಳು 15,000 ನಿಶ್ಚಿತ ಗೌರವಧನ ನಿಗದಿಪಡಿಸುವುದು.

ಬಾಕಿ ಹಣ ಬಿಡುಗಡೆ. 2024–25ನೇ ಸಾಲಿನ ಬಾಕಿ ಇರುವ ಪ್ರೋತ್ಸಾಹಧನ ಹಾಗೂ ಗೌರವಧನವನ್ನು ತಕ್ಷಣ ಪಾವತಿಸುವುದು.

ಮೊಬೈಲ್ ಆಧಾರಿತ ಕೆಲಸಕ್ಕೆ ವಿನಾಯಿತಿ. ಕಡ್ಡಾಯ ಮೊಬೈಲ್ ಆ್ಯಪ್ ಆಧಾರಿತ ಕೆಲಸವನ್ನು ಕೈಬಿಡುವುದು ಅಥವಾ ಪ್ರತ್ಯೇಕ ಮೊಬೈಲ್ ಹಾಗೂ ಭತ್ಯೆ ನೀಡುವುದು.

ನಿವೃತ್ತಿ ಮತ್ತು ಆರೋಗ್ಯ ಸೌಲಭ್ಯ. ನಿವೃತ್ತಿ ಹೊಂದುವ ಕಾರ್ಯಕರ್ತೆಯರಿಗೆ ₹5 ಲಕ್ಷ ಇಡಿಗಂಟು ನೀಡುವುದು ಮತ್ತು ಗಂಭೀರ ಅನಾರೋಗ್ಯದ ಚಿಕಿತ್ಸೆಯ ಅವಧಿಯಲ್ಲಿ ಕನಿಷ್ಠ 3 ತಿಂಗಳ ವೇತನ ಸಹಿತ ರಜೆ ಮಂಜೂರು ಮಾಡುವುದು.

ಸೇವಾ ಭದ್ರತೆ. 2025ರ ಫೆಬ್ರವರಿಯಲ್ಲಿ ಸೇವೆಯಿಂದ ಕೈಬಿಡಲಾದ ಆಶಾ ಸುಗಮಕಾರರನ್ನು (Facilitators) ಮರುನೇಮಕ ಮಾಡಿಕೊಳ್ಳುವುದು.

ಸರ್ಕಾರದ ಪ್ರತಿಕ್ರಿಯೆ ಮತ್ತು ಮುಂದಿನ ನಡೆ:

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಆರೋಗ್ಯ ಸಚಿವ ಯು.ಟಿ ಖಾದರ್ ಅವರು ಮನವಿ ಸ್ವೀಕರಿಸಿದ್ದು, ನವೆಂಬರ್ 18ರಂದು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸುವುದಾಗಿ ಹಾಗೂ ನವೆಂಬರ್ 19ರ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಗೌರವಧನ ಹೆಚ್ಚಳದ ಕುರಿತು ಚರ್ಚಿಸುವುದಾಗಿ ತಿಳಿಸಿದ್ದಾರೆ. ಆದಾಗ್ಯೂ, ಸರ್ಕಾರದಿಂದ ಲಿಖಿತ ಭರವಸೆ ಹಾಗೂ ಅಧಿಕೃತ ಆದೇಶ ಹೊರಬೀಳುವವರೆಗೂ ಧರಣಿ ಹಿಂಪಡೆಯುವುದಿಲ್ಲ ಎಂದು ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಸ್ಪಷ್ಟಪಡಿಸಿದ್ದಾರೆ.

 


Share this with Friends

Related Post