Sat. Jun 6th, 2026

ಗ್ಯಾರಂಟಿ ಹೆಸರಲ್ಲಿ ಬಡವರ ಹೊಟ್ಟೆಗೆ ಬರೆ; 12 ಬಗೆಯ ಪಿಂಚಣಿ, ಕೋಟ್ಯಂತರ ರೂ. ಅನುದಾನ ಬಾಕಿ: ಸರ್ಕಾರದ ವಿರುದ್ಧ ಆರ್. ಅಶೋಕ್ ಚಾರ್ಜ್‌ಶೀಟ್!

Share this with Friends

ಬೆಂಗಳೂರು: “ರಾಜ್ಯದಲ್ಲಿ ಅನಾಥರು, ವೃದ್ಧರು, ವಿಧವೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ಒಟ್ಟು 81.88 ಲಕ್ಷ ಅಸಹಾಯಕ ಫಲಾನುಭವಿಗಳಿಗೆ ನೀಡಬೇಕಾದ ಮಾಸಿಕ ಪಿಂಚಣಿಯನ್ನು ಕಳೆದ ಮೂರು ತಿಂಗಳುಗಳಿಂದ ಸ್ಥಗಿತಗೊಳಿಸಲಾಗಿದೆ. ಇಡೀ ಸರ್ಕಾರಿ ಖಜಾನೆಯನ್ನು ಖಾಲಿ ಮಾಡಿ ಬಡವರನ್ನು ಶೋಷಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಸಾಧನಾ ಸಮಾವೇಶ ಹಮ್ಮಿಕೊಳ್ಳಲು ಯಾವ ಯೋಗ್ಯತೆ ಇದೆ?” ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಕಟುವಾಗಿ ಪ್ರಶ್ನಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸರ್ಕಾರದ ಆಡಳಿತ ವೈಫಲ್ಯಗಳ ಅಂಕಿ-ಅಂಶಗಳ ಪಟ್ಟಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ತಾನು ಎಸಗಿರುವ ಆಡಳಿತಾತ್ಮಕ ಪಾಪಗಳನ್ನು ಮುಚ್ಚಿಕೊಳ್ಳಲು ಸಮಾವೇಶದ ನಾಟಕವಾಡುತ್ತಿದೆ ಎಂದು ಹರಿಹಾಯ್ದರು. ಕಂದಾಯ ಇಲಾಖೆಯ ವ್ಯಾಪ್ತಿಯಡಿ ಬರುವ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನ ಸೇರಿದಂತೆ ಒಟ್ಟು 12 ವಿಧದ ಪಿಂಚಣಿಗಳಿಗೆ ಪ್ರತಿ ತಿಂಗಳು ₹894 ಕೋಟಿ ರೂಪಾಯಿಗಳ ಅಗತ್ಯವಿದೆ. ವಾರ್ಷಿಕ ಬಜೆಟ್‌ನಲ್ಲಿ ಇದಕ್ಕಾಗಿ ₹10,736 ಕೋಟಿ ಮೀಸಲಿಟ್ಟಿದ್ದರೂ, ಈ ಹಣ ಅರ್ಹ ಬಡ ಫಲಾನುಭವಿಗಳ ಕೈಸೇರಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಯಾವ ಯಾವ ಯೋಜನೆಗಳು ಬಾಕಿ? (ಅಶೋಕ್ ಬಿಡುಗಡೆ ಮಾಡಿದ ಅಂಕಿ-ಅಂಶಗಳು):

ಗೃಹಲಕ್ಷ್ಮಿ ಯೋಜನೆ: ಮಹಿಳೆಯರಿಗೆ ನೀಡಬೇಕಾದ ₹5,000 ಕೋಟಿ ರೂಪಾಯಿ ಹಣ ಬಾಕಿ ಉಳಿದಿದೆ.

ಅನ್ನಭಾಗ್ಯ ಯೋಜನೆ: ಫಲಾನುಭವಿಗಳಿಗೆ ತಲುಪಬೇಕಾದ ₹700 ಕೋಟಿ ರೂಪಾಯಿ ಬಿಡುಗಡೆಯಾಗಿಲ್ಲ.

ಅನಾಥ ಮಕ್ಕಳ ನಿಧಿ: ಅನಾಥಾಶ್ರಮ ಹಾಗೂ ಮಕ್ಕಳ ಕಲ್ಯಾಣದ ₹73 ಕೋಟಿ ರೂಪಾಯಿ ಅನುದಾನ ಸ್ಥಗಿತಗೊಂಡಿದೆ.

ಪರಿಶಿಷ್ಟ ಜಾತಿ/ಪಂಗಡಗಳ ನಿಧಿ: ಪರಿಶಿಷ್ಟ ವರ್ಗಗಳಿಗೆ ಸೇರಿದ ₹45,000 ಕೋಟಿ ರೂಪಾಯಿಗಳ ಹಣವನ್ನು ಲೂಟಿ ಮಾಡಲಾಗಿದೆ.

ರೈತರ ಪರಿಹಾರ: ಕೇವಲ ಸಮೀಕ್ಷೆಯ ನೆಪವೊಡ್ಡಿ ಇಂದಿಗೂ ರೈತರಿಗೆ ಬರ ಹಾಗೂ ಬೆಳೆ ಹಾನಿ ಪರಿಹಾರ ವಿತರಿಸಿಲ್ಲ.

ನುಡಿದಂತೆ ನಡೆಯದ ಸರ್ಕಾರ:

ತಾವು ಸಚಿವರಾಗಿದ್ದ ಅವಧಿಯಲ್ಲಿ ಆಸಿಡ್ ದಾಳಿಗೆ ಒಳಗಾದ ಸಂತ್ರಸ್ತ ಮಹಿಳೆಯರ ನೆರವಿಗಾಗಿ ಮಾಸಿಕ ₹10,000 ಸಹಾಯಧನ ನೀಡುವ ಐತಿಹಾಸಿಕ ಕಾನೂನು ತಂದಿದ್ದನ್ನು ಸ್ಮರಿಸಿದ ಅಶೋಕ್, ಪ್ರಸ್ತುತ ಸರ್ಕಾರ ಆ ಹಣವನ್ನೂ ನಿಯಮಿತವಾಗಿ ನೀಡದೆ ಸಂತ್ರಸ್ತರನ್ನು ಸತಾಯಿಸುತ್ತಿದೆ ಎಂದು ದೂರಿದರು. ದೇವದಾಸಿಯರ ₹2,000 ಹಾಗೂ ಸ್ವಾತಂತ್ರ್ಯ ಹೋರಾಟಗಾರರ ₹10,000 ಗೌರವಧನಕ್ಕೂ ಕುತ್ತು ತರಲಾಗಿದೆ. ಚುನಾವಣೆಗೂ ಮುನ್ನ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹10,000 ಗೌರವಧನ ನೀಡುವುದಾಗಿ ಆಶ್ವಾಸನೆ ನೀಡಿದ್ದ ಸಿದ್ದರಾಮಯ್ಯ ಅವರು ಈಗ ನುಡಿದಂತೆ ನಡೆಯದೇ ಮಾತಿಗೆ ತಪ್ಪಿದ್ದಾರೆ. ಸಾರಿಗೆ ನೌಕರರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸದ ಕಾರಣ ನೌಕರರು ಪದೇ ಪದೆ ಮುಷ್ಕರಕ್ಕೆ ಇಳಿಯುವಂತಹ ಗಂಭೀರ ಪರಿಸ್ಥಿತಿಯನ್ನು ಸರ್ಕಾರವೇ ಸೃಷ್ಟಿಸಿದೆ ಎಂದು ಆರ್. ಅಶೋಕ್ ತೀವ್ರವಾಗಿ ಟೀಕಿಸಿದರು.

ಸಚಿವರು ಕಮಿಷನ್‌ಗೆ ಸ್ಪಂದಿಸುತ್ತಿದ್ದಾರೆ:

“ರಾಜ್ಯದಲ್ಲಿ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಜನಸ್ಪಂದನ ನಡೆಸುವಂತೆ ಸೂಚನೆ ನೀಡುತ್ತಿದ್ದಾರೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಬದಲು ಕೇವಲ ‘ಕಮಿಷನ್’ ಪಡೆಯುವುದಕ್ಕಷ್ಟೇ ಸ್ಪಂದಿಸುತ್ತಿದ್ದಾರೆ” ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

 “ಪ್ರತಿ 15 ದಿನಗಳಿಗೊಮ್ಮೆ ಬೆಂಗಳೂರು ನಗರ ಪ್ರದಕ್ಷಿಣೆ ನಡೆಸಿ ಅಭಿವೃದ್ಧಿ ಪರಿಶೀಲಿಸುತ್ತೇನೆ ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಈಗ ಕಮಿಷನ್ ಬೆನ್ನಟ್ಟುವ ಕೆಲಸದಲ್ಲಿ ನಿರತರಾಗಿದ್ದಾರೆ. ಇನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಗರದಲ್ಲಿ ಜಾರಿಗೆ ತಂದಿರುವ ಇ-ಖಾತಾ ಅಭಿಯಾನ ಹಾಗೂ ‘ಬಿ’ ಖಾತಾದಿಂದ ‘ಎ’ ಖಾತಾ ವರ್ಗಾವಣೆ ಪ್ರಕ್ರಿಯೆಗಳು ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಮುಚ್ಚಿದಂತಾಗಿದೆ. ಈ ಅಭಿಯಾನಗಳ ನೆಪದಲ್ಲಿ ಬಿಬಿಎಂಪಿ ಮತ್ತು ಕಂದಾಯ ಅಧಿಕಾರಿಗಳು ಸಾರ್ವಜನಿಕರನ್ನು ಪೀಡಿಸುತ್ತಿದ್ದು, ಫೋನ್ ಪೇ ಮೂಲಕವೇ ಬಹಿರಂಗವಾಗಿ ಲಂಚ ವಸೂಲಿ ಮಾಡುತ್ತಿದ್ದಾರೆ. ಈ ಆನ್‌ಲೈನ್ ಲಂಚಾವತಾರದ ಬಗ್ಗೆ ನಾನು ನಿಯಮಾವಳಿಗಳ ಅಡಿಯಲ್ಲಿ ಇತ್ತೀಚಿನ ಅಧಿವೇಶನದಲ್ಲಿ ಸಾಕ್ಷ್ಯ ಸಮೇತ ದಾಖಲೆಗಳನ್ನು ಮಂಡಿಸಿದ್ದರೂ, ಸರ್ಕಾರ ಭ್ರಷ್ಟ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಸದ ಟೆಂಡರ್ ನೆಪದಲ್ಲಿ ₹600 ಕೋಟಿ ಲೂಟಿ:

ಗ್ರೇಟರ್ ಬೆಂಗಳೂರು ಅಥಾರಿಟಿ (GBA) ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಟೆಂಡರ್‌ಗಳಿಗೆ ಶೇಕಡಾ 14 ರಷ್ಟು ತೆರಿಗೆಯನ್ನು ಹೆಚ್ಚಳ ಮಾಡುವ ಮೂಲಕ ಸರ್ಕಾರ ಭ್ರಷ್ಟಾಚಾರಕ್ಕೆ ಹೊಸ ಹಾದಿ ಹುಡುಕಿದೆ ಎಂದು ಅಶೋಕ್ ದೂರಿದರು. ಈ ತೆರಿಗೆ ಏರಿಕೆಯಿಂದಾಗಿ ಈ ಹಿಂದೆ ₹1 ಕೋಟಿ ಮೊತ್ತದಲ್ಲಾಗುತ್ತಿದ್ದ ಕಸದ ಟೆಂಡರ್ ಪ್ರಕ್ರಿಯೆಯು ಇದೀಗ ನೇರವಾಗಿ ₹1.40 ಕೋಟಿ ರೂಪಾಯಿಗಳಿಗೆ ಏರಿಕೆಯಾಗಲಿದೆ. ಇದರಿಂದಾಗಿ ರಾಜಧಾನಿಯ ನಾಗರಿಕರ ಮೇಲೆ ಒಟ್ಟಾರೆಯಾಗಿ ₹600 ಕೋಟಿ ರೂಪಾಯಿಗಳ ಭಾರಿ ತೆರಿಗೆ ಹೊರೆ ಬೀಳಲಿದೆ. ಇದರ ಬೆನ್ನಲ್ಲೇ ಸಾರ್ವಜನಿಕರು ಪಾವತಿಸುವ ಕಸದ ಸೆಸ್ (Cess) ಕೂಡ ದುಪ್ಪಟ್ಟಾಗಲಿದ್ದು, ಜನಸಾಮಾನ್ಯರ ಬದುಕು ದುಸ್ತರವಾಗಲಿದೆ ಎಂದು ಅವರು ಎಚ್ಚರಿಸಿದರು.

ರಾಜ್ಯದಲ್ಲಿ ಪ್ರಸ್ತುತ ಜನರ ಭೂಮಿ ಹಾಗೂ ಆಸ್ತಿಗಳು ಕಾಂಗ್ರೆಸ್ ನಾಯಕರ ಸ್ವಂತ ಹಕ್ಕು ಎನ್ನುವಂತಹ ಅರಾಜಕತೆಯ ವಾತಾವರಣ ಸೃಷ್ಟಿಯಾಗಿದೆ. ಕಾಂಗ್ರೆಸ್ ಸರ್ಕಾರದ ಈ ಲೂಟಿ ಕೋರ ಆಡಳಿತ ಹಾಗೂ ಕಮಿಷನ್ ದಂಧೆಗೆ ಮುಂಬರುವ ದಿನಗಳಲ್ಲಿ ತಕ್ಕ ತಿಲಾಂಜಲಿ ನೀಡುವ ಜವಾಬ್ದಾರಿಯನ್ನು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸಮರ್ಥವಾಗಿ ನಿಭಾಯಿಸಲಿದೆ ಎಂದು ಆರ್. ಅಶೋಕ್ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

 


Share this with Friends

Related Post