Fri. Aug 14th, 2026

ಧ್ವಜಾರೋಹಣ ಜವಾಬ್ದಾರಿಯಿಂದ ಜಮೀರ್ ವಿನಾಯಿತಿ ಕೋರಿದ ಪತ್ರದ ವಿವಾದ: ವಿಧಾನಸಭೆಯಲ್ಲಿ ತೀವ್ರ ಗದ್ದಲ

Share this with Friends

ಬೆಂಗಳೂರು: ವಿಜಯನಗರ ಜಿಲ್ಲೆಯಲ್ಲಿ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣದ ಜವಾಬ್ದಾರಿಯಿಂದ ತಮಗೆ ವಿನಾಯಿತಿ ನೀಡುವಂತೆ ಕೋರಿ ಸಚಿವ ಬಿ.ಝೆಡ್. ಜಮೀರ್ ಅಹಮದ್ ಖಾನ್ ಅವರು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದ ವಿಚಾರ ಇಂದು ವಿಧಾನಸಭೆ ಕಲಾಪದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಪ್ರತಿಪಕ್ಷ ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಮುಗಿಬಿದ್ದರೆ, ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಸದನದಲ್ಲಿ ಗಟ್ಟಿಯಾಗಿ ಸಮರ್ಥಿಸಿಕೊಂಡರು.

ರಾಷ್ಟ್ರಧ್ವಜಕ್ಕೆ ಅವಮಾನ – ಪ್ರತಿಪಕ್ಷಗಳ ಆಕ್ರೋಶ:

ವಿಧಾನಸಭಾ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿಯ ಸುನೀಲ್, ಕುಮಾರ್ ,ಡಾ.ಅಶ್ವತ್ಥನಾರಾಯಣ ಸಚಿವ ಜಮೀರ್ ಅಹಮದ್ ಖಾನ್ ಅವರ ನಿಲುವನ್ನು ತೀವ್ರವಾಗಿ ಖಂಡಿಸಿದರು. “ದೇಶದ ಅತ್ಯಂತ ಪವಿತ್ರವಾದ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಧ್ವಜಾರೋಹಣ ಮಾಡುವುದಕ್ಕಿಂತ ಒಬ್ಬ ಸಚಿವರಿಗೆ ಬೇರೆ ಯಾವ ಪ್ರಮುಖ ರಾಜಕೀಯ ಕೆಲಸವಿರಲು ಸಾಧ್ಯ? ಚುನಾವಣೆ ಮತ್ತು ಪಕ್ಷದ ಸಂಘಟನೆಯ ನೆಪವೊಡ್ಡಿ ರಾಷ್ಟ್ರೀಯ ಹಬ್ಬದ ಜವಾಬ್ದಾರಿಯಿಂದ ಹಿಂದೆ ಸರಿಯುವುದು ಸಾಂವಿಧಾನಿಕ ಹುದ್ದೆಯಲ್ಲಿರುವ ಸಚಿವರಿಗೆ ಶೋಭೆ ತರುವುದಿಲ್ಲ. ಇದು ದೇಶಕ್ಕೆ ಮತ್ತು ಸಂವಿಧಾನಕ್ಕೆ ಮಾಡುವ ಅಪಚಾರ” ಎಂದು ಕಿಡಿಕಾರದಿರು.  ಸಚಿವರ ಈ ಬೇಜವಾಬ್ದಾರಿ ತನಕ್ಕೆ ಸರ್ಕಾರ ತಕ್ಷಣವೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಡಿಸಿಎಂ ಸಮರ್ಥನೆ:

ಪ್ರತಿಪಕ್ಷಗಳ ಈ ತೀವ್ರ ವಾಗ್ದಾಳಿಗೆ ತಕ್ಷಣವೇ ಎದ್ದು ನಿಂತು ತಿರುಗೇಟು ನೀಡಿದ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು, ಸಚಿವ ಜಮೀರ್ ಅಹಮದ್ ಖಾನ್ ಅವರ ನಡೆಯನ್ನು ಬಲವಾಗಿ ಸಮರ್ಥಿಸಿಕೊಂಡರು. “ಸಚಿವರು ರಾಷ್ಟ್ರಧ್ವಜಕ್ಕೆ ಎಲ್ಲೂ ಅಪಚಾರ ಮಾಡಿಲ್ಲ ಅಥವಾ ಧ್ವಜಾರೋಹಣವನ್ನೇ ನಿಲ್ಲಿಸಿ ಎಂದು ಹೇಳಿಲ್ಲ. ಅನಾರೋಗ್ಯದ ಕಾರಣದಿಂದಾಗಿ ಜಿಲ್ಲೆಯ ಜನತೆಗೆ ಹಾಗೂ ಹಬ್ಬದ ಆಚರಣೆಗೆ ಯಾವುದೇ ತೊಂದರೆಯಾಗಬಾರದು ಎಂಬ ಪ್ರಾಮಾಣಿಕ ಉದ್ದೇಶದಿಂದಲೇ ಅವರು ಮತ್ತೊಬ್ಬರಿಗೆ ಜವಾಬ್ದಾರಿ ವಹಿಸಲು ಪತ್ರ ಬರೆದಿದ್ದಾರೆ. ಇದರಲ್ಲಿ ಯಾವುದೇ ತಪ್ಪು ಅಥವಾ ದೇಶದ್ರೋಹದ ನಡೆ ಇಲ್ಲ” ಎಂದು ಸ್ಪಷ್ಟಪಡಿಸಿದರು.

ಸದನದಲ್ಲಿ ತೀವ್ರ ಗದ್ದಲ – ಕಲಾಪ ಮುಂದೂಡಿಕೆ:

ಡಿಸಿಎಂ ಅವರ ಈ ಸಮರ್ಥನೆಯಿಂದ ಮತ್ತಷ್ಟು ಆಕ್ರೋಶಗೊಂಡ ವಿರೋಧ ಪಕ್ಷದ ಸದಸ್ಯರು, “ಕಾಂಗ್ರೆಸ್ ಸರ್ಕಾರಕ್ಕೆ ದೇಶಪ್ರೇಮಕ್ಕಿಂತ ಸ್ವಪಕ್ಷದ ರಾಜಕಾರಣವೇ ಮುಖ್ಯವಾಗಿದೆ” ಎಂದು ಜರಿದರು. ಈ ವೇಳೆ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಭಾರಿ ವಾಕ್ಸಮರ ನಡೆದು ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ಸ್ಪೀಕರ್ ಅವರು ಎಷ್ಟೇ ಮನವಿ ಮಾಡಿದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಕಲಾಪವನ್ನು ಕೆಲಕಾಲ ಮುಂದೂಡಬೇಕಾಯಿತು. ರಾಷ್ಟ್ರೀಯ ಹಬ್ಬದ ಹಿನ್ನೆಲೆಯಲ್ಲಿ ಸದನದ ಒಳಗೆ ಮತ್ತು ಹೊರಗೆ ಈ ಪತ್ರದ ರಾಜಕೀಯ ವಿವಾದ ಈಗ ಮತ್ತಷ್ಟು ಕಾವು ಪಡೆದುಕೊಂಡಿದೆ.

 

 


Share this with Friends

Related Post