ಬೆಂಗಳೂರು: ಸಾರ್ವಜನಿಕರ ಸುರಕ್ಷತೆ, ಆರೋಗ್ಯ ಮತ್ತು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿರುವ ಬೆಂಗಳೂರು ಪೂರ್ವ ವಲಯದ ಕಮಿಷನರ್ ಡಿ.ಎಸ್. ರಮೇಶ್ ಅವರು, ವಲಯದಾದ್ಯಂತ ಇರುವ ಪೇಯಿಂಗ್ ಗೆಸ್ಟ್ (ಪಿಜಿ) ವಸತಿಗಳು, ಹಾಸ್ಟೆಲ್ಗಳು, ಹೋಟೆಲ್ಗಳು ಹಾಗೂ ರೆಸ್ಟೋರೆಂಟ್ಗಳ ಮೇಲೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಜಂಟಿ ಪರಿಶೀಲನಾ ದಾಳಿ ನಡೆಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ನಿಯಮ ಉಲ್ಲಂಘಿಸುವ ಮತ್ತು ಸಾರ್ವಜನಿಕರ ಆರೋಗ್ಯದ ಜೊತೆ ಆಟವಾಡುವ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಈ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ.
ಪಿಜಿ ಮತ್ತು ಹಾಸ್ಟೆಲ್ಗಳ ಮೇಲೆ ಹದ್ದಿನ ಕಣ್ಣು:
ಈ ತಪಾಸಣಾ ದಳವು ಪ್ರಮುಖವಾಗಿ ಕೆಳಕಂಡ ಅಂಶಗಳ ಆಧಾರದ ಮೇಲೆ ಪಿಜಿಗಳನ್ನು ಪರಿಶೀಲಿಸಲಿದೆ:
ಕಟ್ಟಡ ನಿಯಮಗಳ ಉಲ್ಲಂಘನೆ: ಅನುಮೋದಿತ ನಕ್ಷೆ ಮೀರಿ ಹೆಚ್ಚುವರಿ ಮಹಡಿಗಳ ನಿರ್ಮಾಣ, ಸೆಟ್ಬ್ಯಾಕ್ ನಿಯಮಗಳ ಉಲ್ಲಂಘನೆ ಹಾಗೂ ವಾಣಿಜ್ಯ ಬಳಕೆಯ ಪರವಾನಗಿ ಪರಿಶೀಲನೆ.
ಸುರಕ್ಷತೆ ಮತ್ತು ಲೈಸೆನ್ಸ್: ಟ್ರೇಡ್ ಲೈಸೆನ್ಸ್ (ವ್ಯಾಪಾರ ಪರವಾನಗಿ), ಅಗತ್ಯ ಮುನ್ಸಿಪಲ್ ಅನುಮತಿಗಳು ಮತ್ತು ಕಡ್ಡಾಯ ಅಗ್ನಿಶಾಮಕ ಸುರಕ್ಷತಾ ಕ್ರಮಗಳ ಲಭ್ಯತೆ.
ಮೂಲಸೌಕರ್ಯ: ಶುದ್ಧ ಕುಡಿಯುವ ನೀರು, ಶೌಚಾಲಯಗಳ ನಿರ್ವಹಣೆ, ಒಳಚರಂಡಿ ವ್ಯವಸ್ಥೆ ಮತ್ತು ಘನತ್ಯಾಜ್ಯ ವಿಲೇವಾರಿ.
ಸಾರ್ವಜನಿಕ ರಸ್ತೆ ಒತ್ತುವರಿ: ಪಾದಚಾರಿ ಮಾರ್ಗ, ಚರಂಡಿ ಒತ್ತುವರಿ ಹಾಗೂ ನಿಯಮಬಾಹಿರ ಪಾರ್ಕಿಂಗ್ ವ್ಯವಸ್ಥೆ.
ಹೋಟೆಲ್, ರೆಸ್ಟೋರೆಂಟ್ ಮತ್ತು ಧಾಬಾಗಳ ಆಹಾರ ಸುರಕ್ಷತೆ ತಪಾಸಣೆ:
ಆಹಾರದ ಗುಣಮಟ್ಟ ಕಾಪಾಡಲು ಆರೋಗ್ಯ ಅಧಿಕಾರಿಗಳು ಹೋಟೆಲ್ಗಳ ಕಿಚನ್ಗಳಿಗೆ ಭೇಟಿ ನೀಡಿ ಈ ಕೆಳಗಿನ ಪ್ರಮುಖ ಅಂಶಗಳನ್ನು ಪರಿಶೀಲಿಸಲಿದ್ದಾರೆ:
ಅವಧಿ ಮುಗಿದ (Expired) ಆಹಾರ ಪದಾರ್ಥಗಳ ಬಳಕೆ ಮತ್ತು ದಾಸ್ತಾನು.
ಅಡುಗೆ ಮನೆ ಹಾಗೂ ಆವರಣದ ಸ್ವಚ್ಛತೆ, ಕೀಟನಾಶಕ (Pest control) ಕ್ರಮಗಳು.
ಆಹಾರ ತಯಾರಕ ಸಿಬ್ಬಂದಿಯ ವೈಯಕ್ತಿಕ ನೈರ್ಮಲ್ಯ ಮತ್ತು ಸುರಕ್ಷಿತ ನೀರಿನ ಬಳಕೆ.
ಆಹಾರ ಸಂಗ್ರಹಣೆ ಮತ್ತು ತಾಪಮಾನದ (Temperature control) ನಿರ್ವಹಣೆ.
7 ದಿನಗಳಲ್ಲಿ ವರದಿ ಸಲ್ಲಿಕೆಗೆ ಗಡುವು:
ಗೇರ್ ಸ್ಕೂಲ್ ರಸ್ತೆ, ನ್ಯೂ ಹೊರೈಜನ್ ಕಾಲೇಜು ಸುತ್ತಮುತ್ತಲಿನ ಪ್ರದೇಶ ಹಾಗೂ ತೂಬರಹಳ್ಳಿ ಭಾಗಗಳಲ್ಲಿ ವಿಶೇಷ ಹದ್ದಿನ ಕಣ್ಣು ಇಡಲಾಗುವುದು. ಪ್ರತಿ ಆಸ್ತಿಯನ್ನು ಪ್ರತ್ಯೇಕವಾಗಿ ಪರಿಶೀಲಿಸಿ, ಜಿಯೋ-ಟ್ಯಾಗ್ಡ್ (Geo-tagged) ಫೋಟೋಗಳ ಮೂಲಕ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತದೆ. ಮುಂದಿನ 7 ದಿನಗಳ ಒಳಗೆ ಈ ಸಂಪೂರ್ಣ ಪ್ರಕ್ರಿಯೆಯನ್ನು ಮುಗಿಸಿ ಸಮಗ್ರ ವರದಿ ಸಲ್ಲಿಸುವಂತೆ ಕಮಿಷನರ್ ಆದೇಶಿಸಿದ್ದಾರೆ.
ಅಧಿಕಾರಿಗಳಿಗೂ ಎಚ್ಚರಿಕೆ:
ನಿಯಮ ಉಲ್ಲಂಘಿಸುವ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದರ ಜೊತೆಗೆ, ತಪಾಸಣೆ ವೇಳೆ ಕರ್ತವ್ಯ ಲೋಪ ಎಸಗುವ ಅಥವಾ ನಿರ್ಲಕ್ಷ್ಯ ತೋರುವ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧವೂ ಇಲಾಖಾ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಡಿ.ಎಸ್. ರಮೇಶ್ ಎಚ್ಚರಿಸಿದ್ದಾರೆ.

