ಬೆಂಗಳೂರು:ರಾಜಧಾನಿ ಬೆಂಗಳೂರಿನ ಹಳೇ ಏರ್‌ಪೋರ್ಟ್ ರಸ್ತೆಯ ಇಸ್ರೋ ಜಂಕ್ಷನ್ ಬಳಿ ಭಾನುವಾರ ಸಂಜೆ ಹೈಡ್ರಾಮಾವೊಂದು ನಡೆದಿದೆ. ರಾಜ್ಯಪಾಲರ ಬೆಂಗಾವಲು ವಾಹನಗಳ ಸಾಗಣೆಗಾಗಿ ಸಂಚಾರ ಪೊಲೀಸರು ರಸ್ತೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಿದ್ದರಿಂದ, ಸಾರ್ವಜನಿಕರೊಬ್ಬರು ರಸ್ತೆಯ ನಡುವೆಯೇ ಕುಳಿತು ವಿಐಪಿ ಸಂಸ್ಕೃತಿ (VIP Culture) ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಸಂಭವಿಸಿದೆ.
ಈ ಭಾಗದಲ್ಲಿ ಈಗಾಗಲೇ ಅಂಡರ್‌ಪಾಸ್ ನಿರ್ಮಾಣ ಕಾರ್ಯ ನಡೆಯುತ್ತಿರುವುದರಿಂದ ನಿರಂತರ ಟ್ರಾಫಿಕ್ ಜಾಮ್ ಇರುತ್ತದೆ. ಇದರ ನಡುವೆ ರಾಜ್ಯಪಾಲರ ಮೂವ್‌ಮೆಂಟ್‌ಗಾಗಿ ಪೊಲೀಸರು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದರು. ಈ ವೇಳೆ ಗರ್ಭಿಣಿ ಪತ್ನಿಯನ್ನು ತುರ್ತಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವಾಹನ ಚಾಲಕರೊಬ್ಬರು ಟ್ರಾಫಿಕ್‌ನಲ್ಲಿ ಸಿಲುಕಿ ಪರದಾಡಿದ್ದಾರೆ. ರಸ್ತೆ ಬಿಡುಗಡೆಯಾಗದಿದ್ದಾಗ ತಾಳ್ಮೆ ಕಳೆದುಕೊಂಡ ಅವರು, ಕಾರಿನಿಂದ ಇಳಿದು ನೇರವಾಗಿ ರಸ್ತೆಯ ಮಧ್ಯೆ ಕುಳಿತು ಧರಣಿ ಆರಂಭಿಸಿದರು.
ಪೊಲೀಸರೊಂದಿಗೆ ತೀವ್ರ ವಾಕ್ಸಮರ:
ಸ್ಥಳದಲ್ಲಿದ್ದ ಸಂಚಾರ ಪೊಲೀಸ್ ಸಿಬ್ಬಂದಿ ಆತನನ್ನು ರಸ್ತೆಯಿಂದ ಎಬ್ಬಿಸಲು ಪ್ರಯತ್ನಿಸಿದಾಗ ತೀವ್ರ ಮಾತಿನ ಚಕಮಕಿ ನಡೆಯಿತು. “ನನ್ನ ಹೆಂಡತಿ ಗರ್ಭಿಣಿ, ಕಾರಿನ ಒಳಗಡೆ ನೋವಿನಿಂದ ಒದ್ದಾಡುತ್ತಿದ್ದಾಳೆ. ಮೆಡಿಕಲ್ ಎಮರ್ಜೆನ್ಸಿ ಇದ್ದರೂ ನೀವು ಸಿಗ್ನಲ್ ಅನ್ನು ಏಕೆ ನಿರ್ಬಂಧಿಸಿದ್ದೀರಿ? ರಾಜ್ಯಪಾಲರು ವಿಐಪಿ ಆಗಿರುವುದರಿಂದ ಸಾಮಾನ್ಯ ಜನರಿಗೆ ಯಾವುದೇ ಬೆಲೆಯಿಲ್ಲವೇ? ನಮ್ಮ ಸಮಯಕ್ಕೆ ಮೌಲ್ಯವಿಲ್ಲವೇ?” ಎಂದು ಆತ ಪೊಲೀಸರನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ.
ಕೆಲವು ನಿಮಿಷಗಳ ಕಾಲ ನಡೆದ ಈ ಹಠಾತ್ ಪ್ರತಿಭಟನೆಯಿಂದಾಗಿ ಸ್ಥಳದಲ್ಲಿ ಸಾರ್ವಜನಿಕರು ಕೂಡ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ತದನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿ ಆ ವ್ಯಕ್ತಿಯ ವಾಹನ ಸಾಗಲು ದಾರಿ ಮಾಡಿಕೊಟ್ಟ ಬಳಿಕ ರಾಜ್ಯಪಾಲರ ಕಾನ್ವಾಯ್ ಹಾದುಹೋಯಿತು.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಮೆಡಿಕಲ್ ಎಮರ್ಜೆನ್ಸಿ ಮತ್ತು ಆಸ್ಪತ್ರೆಗೆ ತೆರಳುವ ತುರ್ತು ಸಂದರ್ಭಗಳಲ್ಲೂ ಇಂತಹ ಕಟ್ಟುನಿಟ್ಟಿನ ವಿಐಪಿ ಪ್ರೋಟೋಕಾಲ್ ಬಳಸಿ ಸಾರ್ವಜನಿಕರಿಗೆ ತೊಂದರೆ ಕೊಡುವುದು ಎಷ್ಟು ಸರಿ ಎಂದು ಇಂಟರ್ನೆಟ್ ಬಳಕೆದಾರರು ತೀವ್ರವಾಗಿ ಟೀಕಿಸುತ್ತಿದ್ದಾರೆ.

