Tue. Nov 24th, 2026

ಬೆಂಗಳೂರಿನಲ್ಲಿ ಮುಂದಿನ ಮೂರು ದಿನ ಮಳೆ..!

Share this with Friends

ಬೆಂಗಳೂರು: ನಗರದಲ್ಲಿ ಮುಂದಿನ ಮೂರು ದಿನಗಳ ಕಾಲ (ನವೆಂಬರ್ 24ರಿಂದ 27ರವರೆಗೆ) ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಹಾಗೂ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಮುನ್ಸೂಚನೆ ನೀಡಿವೆ. ಈ ಹಿನ್ನೆಲೆಯಲ್ಲಿ ನಗರವಾಸಿಗಳು ಜಾಗರೂಕರಾಗಿರುವಂತೆ ಹಾಗೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಆಡಳಿತವು ಮನವಿ ಮಾಡಿದೆ.

ಹವಾಮಾನ ಇಲಾಖೆಯ ನಕ್ಷೆಯ ಅನ್ವಯ, ನವೆಂಬರ್ 24ರ ಬೆಳಗ್ಗೆ 8:30ರಿಂದ ನ. 25ರ ಬೆಳಗ್ಗೆ 8:30ರವರೆಗೆ ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಕೇಂದ್ರ ವಲಯಗಳ ಬಹುತೇಕ ಕಡೆಗಳಲ್ಲಿ ಸಾಧಾರಣ ಮಳೆಯಾಗಲಿದೆ (15.6 ಮಿ.ಮೀ.ನಿಂದ 64.4 ಮಿ.ಮೀ.). ನ. 25ರಿಂದ 26ರ ಅವಧಿಯಲ್ಲಿ ನಗರದ ಹಲವೆಡೆ ಹಗುರ ಮಳೆಯಾಗಲಿದ್ದು (2.5 ಮಿ.ಮೀ.ನಿಂದ 15.5 ಮಿ.ಮೀ.), ನ. 26ರಿಂದ 27ರವರೆಗೆ ಪಶ್ಚಿಮ, ದಕ್ಷಿಣ, ಪೂರ್ವ ಮತ್ತು ಕೇಂದ್ರ ಭಾಗಗಳಲ್ಲಿ ಮತ್ತೆ ಸಾಧಾರಣ ಮಳೆ ಮುಂದುವರಿಯುವ ನಿರೀಕ್ಷೆಯಿದೆ.

ಮಳೆಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಹವಾಮಾನ ಮುನ್ಸೂಚನೆ ಮತ್ತು ಅಧಿಕೃತ ಎಚ್ಚರಿಕೆಗಳತ್ತ ಗಮನಹರಿಸಬೇಕು. ನೀರು ನಿಂತಿರುವ ರಸ್ತೆಗಳು ಹಾಗೂ ತಗ್ಗು ಪ್ರದೇಶಗಳಲ್ಲಿ ಸಂಚರಿಸುವುದನ್ನು ತಪ್ಪಿಸಬೇಕು. ಜೋರು ಮಳೆಯಾಗುವ ವೇಳೆ ಮರಗಳು, ವಿದ್ಯುತ್ ಕಂಬಗಳು ಹಾಗೂ ಶಿಥಿಲಗೊಂಡ ಕಟ್ಟಡಗಳ ಬಳಿ ನಿಲ್ಲಬಾರದು ಎಂದು ಜಿಬಿಎ ಸಲಹೆ ನೀಡಿದೆ.

ಮರಗಳು ಧರೆಗುರುಳುವುದು, ರಸ್ತೆಗಳಲ್ಲಿ ನೀರು ನಿಲ್ಲುವುದು, ರಸ್ತೆ ಗುಂಡಿಗಳು ಸೇರಿದಂತೆ ಮಳೆ ಸಂಬಂಧಿತ ಯಾವುದೇ ತುರ್ತು ಪರಿಸ್ಥಿತಿ ಹಾಗೂ ನಾಗರಿಕ ಸಮಸ್ಯೆಗಳು ಎದುರಾದಲ್ಲಿ ಸಾರ್ವಜನಿಕರು ತಕ್ಷಣವೇ ದೂರು ದಾಖಲಿಸಬಹುದು. ಇದಕ್ಕಾಗಿ ಗ್ರೇಟರ್ ಬೆಂಗಳೂರು ಅಥಾರಿಟಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ನಿಯಂತ್ರಣ ಕೊಠಡಿಯನ್ನು ತೆರೆದಿದ್ದು, ಸಹಾಯವಾಣಿ ಸಂಖ್ಯೆ 1533ಕ್ಕೆ ಕರೆ ಮಾಡುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 


Share this with Friends

Related Post