Tue. Sep 29th, 2026

ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: ₹10.96 ಕೋಟಿ ಮಾರುಕಟ್ಟೆ ಮೌಲ್ಯದ ಡ್ರಗ್ಸ್ ಜಪ್ತಿ, ಕೋಟ್ಯಂತರ ರೂ. ಮೌಲ್ಯದ ಆಭರಣ ವಶ!

Share this with Friends

ಬೆಂಗಳೂರು: ₹10.96 ಕೋಟಿ ಮಾರುಕಟ್ಟೆ ಮೌಲ್ಯದ ಡ್ರಗ್ಸ್ ಜಪ್ತಿ, ಕೋಟ್ಯಂತರ ರೂ. ಮೌಲ್ಯದ ಆಭರಣ ವಶಪಡಿಸಿಕೊಳ್ಳುವ ಮೂಲಕ ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಬೆಂಗಳೂರು ನಗರ ಪೊಲೀಸರು ಭಾರಿ ಯಶಸ್ಸು ಸಾಧಿಸಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ (IPS) ಕೋಟ್ಯಂತರ ರೂಪಾಯಿ ಮಾರುಕಟ್ಟೆ ಮೌಲ್ಯದ ಮಾದಕ ದ್ರವ್ಯ ಜಾಲ ಹಾಗೂ ಸರಣಿ ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಕುರಿತು ವಿಸ್ತೃತ ಮಾಹಿತಿ ನೀಡಿದರು.

ಬೆಂಗಳೂರು ಪೊಲೀಸರ ಈ ಹೆಮ್ಮೆಯ ಕಾರ್ಯಾಚರಣೆಯ ಸಂಪೂರ್ಣ ವಿವರ ಇಲ್ಲಿದೆ:

1. #BedaBro ಅಭಿಯಾನ: ₹10.96 ಕೋಟಿ ಮೌಲ್ಯದ ಎಂಡಿಎಂಎ ಜಪ್ತಿ!

ರಾಜ್ಯ ಸರ್ಕಾರದ ‘ರೈಸ್ ಕರ್ನಾಟಕ’ ಮತ್ತು ಬೆಂಗಳೂರು ಪೊಲೀಸರ #BedaBro ಅಭಿಯಾನದ ಅಡಿಯಲ್ಲಿ ಮಾದಕವಸ್ತು ಜಾಲದ ವಿರುದ್ಧದ ಸಮರವನ್ನು ತೀವ್ರಗೊಳಿಸಲಾಗಿದೆ. ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರ ನೇರ ಮಾರ್ಗದರ್ಶನದಲ್ಲಿ, ನಗರದ ಗಿರಿನಗರ, ಹೆಬ್ಬಾಳ ಮತ್ತು ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಂದಾಜು ₹10.96 ಕೋಟಿ ಮೌಲ್ಯದ 5.48 ಕೆಜಿ ನಿಷೇಧಿತ ಎಂಡಿಎಂಎ (MDMA) ಮಾದಕ ವಸ್ತುವನ್ನು ಯಶಸ್ವಿಯಾಗಿ ಜಪ್ತಿ ಮಾಡಿದ್ದಾರೆ.

ಈ ದಂಧೆಯಲ್ಲಿ ತೊಡಗಿದ್ದ ಓರ್ವ ವಿದೇಶಿ ಪ್ರಜೆ, ಹೊರ ರಾಜ್ಯದ ಮೂವರು ಹಾಗೂ ಇಬ್ಬರು ಸ್ಥಳೀಯರು ಸೇರಿದಂತೆ ಒಟ್ಟು 6 ಮಂದಿ ಖತರ್ನಾಕ್ ಡ್ರಗ್ ಪೆಡ್ಲರ್‌ಗಳನ್ನು ಕಂಬಿ ಎಣಿಸುವಂತೆ ಮಾಡಲಾಗಿದೆ. ಮಾದಕ ವಸ್ತುಗಳ ಪಿಡುಗಿನ ವಿರುದ್ಧ ಸಾರ್ವಜನಿಕರು ಜಾಗೃತರಾಗಿರಬೇಕು ಎಂದು ಆಯುಕ್ತರು ಕರೆ ನೀಡಿದ್ದಾರೆ.

2. ಸುಬ್ರಹ್ಮಣ್ಯನಗರ: ₹1.06 ಕೋಟಿ ಮೌಲ್ಯದ ಚಿನ್ನದ ಬಿಸ್ಕತ್, ಆಭರಣ ವಶ

ಸುಬ್ರಹ್ಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಪ್ರತ್ಯೇಕ ಕಳವು ಪ್ರಕರಣಗಳನ್ನು ಪೊಲೀಸರು ಅತ್ಯಂತ ಚಾಣಾಕ್ಷತನದಿಂದ ಭೇದಿಸಿದ್ದಾರೆ. ಚಿನ್ನಾಭರಣ ತಯಾರಿಕಾ ಘಟಕದಲ್ಲಿ ನಡೆದಿದ್ದ ಕಳವು ಹಾಗೂ ಮನೆಯೊಂದರ ಕನ್ನಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ₹1.06 ಕೋಟಿ ಮೌಲ್ಯದ 702 ಗ್ರಾಂ ತೂಕದ ಚಿನ್ನದ ಆಭರಣಗಳು ಮತ್ತು ಚಿನ್ನದ ಬಿಸ್ಕತ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

3. ಪುಟ್ಟೇನಹಳ್ಳಿ: ಸರಣಿ ಕಳ್ಳರ ಗ್ಯಾಂಗ್ ಲಾಕ್; ₹1.18 ಕೋಟಿ ಸ್ವತ್ತು ಜಪ್ತಿ

ಮತ್ತೊಂದು ಮಹತ್ವದ ಕಾರ್ಯಾಚರಣೆಯಲ್ಲಿ ಪುಟ್ಟೇನಹಳ್ಳಿ ಪೊಲೀಸರು ಭಾರಿ ಪ್ರಗತಿ ಸಾಧಿಸಿದ್ದಾರೆ. ನಗರದ ವಿಭಿನ್ನ ಕಡೆ ಕಳವು ಮಾಡುತ್ತಿದ್ದ 11 ಸ್ಥಳೀಯ ಕಳ್ಳರು ಹಾಗೂ ಕಳವು ಮಾಡಿದ ಆಭರಣಗಳನ್ನು ಯಾರಿಗೂ ತಿಳಿಯದಂತೆ ಖರೀದಿಸುತ್ತಿದ್ದ ಇಬ್ಬರು ರಿಸೀವರ್‌ಗಳು ಸೇರಿದಂತೆ ಒಟ್ಟು 13 ಮಂದಿ ಆರೋಪಿಗಳನ್ನು ಸದ್ಯ ಬಂಧಿಸಲಾಗಿದೆ.

ಸೋಲದೇವನಹಳ್ಳಿ ಮತ್ತು ನೆಲಮಂಗಲ ಸೇರಿದಂತೆ ವಿವಿಧ ಪ್ರದೇಶಗಳಿಗೆ ತನಿಖೆಯನ್ನು ವಿಸ್ತರಿಸಿದ್ದ ಪೊಲೀಸರು, ಬಂಧಿತರಿಂದ ಬರೋಬ್ಬರಿ ₹1.18 ಕೋಟಿ ಮೌಲ್ಯದ 731 ಗ್ರಾಂ ಚಿನ್ನ, 859 ಗ್ರಾಂ ಬೆಳ್ಳಿ ಆಭರಣಗಳು, 2 ವಾಹನಗಳು ಹಾಗೂ ₹4.23 ಲಕ್ಷ ನಗದು ಹಣವನ್ನು ಜಪ್ತಿ ಮಾಡಿದ್ದಾರೆ. ಬಂಧಿತರೆಲ್ಲರನ್ನೂ ಸದ್ಯ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ತನಿಖೆ ಮುಂದುವರಿದಿದೆ. ನಗರದ ಸುರಕ್ಷತೆಯ ಹಿತದೃಷ್ಟಿಯಿಂದ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರ ನೇತೃತ್ವದ ಪೊಲೀಸರ ಈ ಭರ್ಜರಿ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗಿದೆ.

 

 


Share this with Friends

Related Post