ಬೆಂಗಳೂರು:ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಬೆಂಗಳೂರು ದಕ್ಷಿಣ ನಗರ ಪಾಲಿಕೆಯು (BSCC) ತನ್ನ ವ್ಯಾಪ್ತಿಯಲ್ಲಿ ಹೆಚ್ಚು ದಕ್ಷ, ಉತ್ತರದಾಯಿತ್ವವುಳ್ಳ ಹಾಗೂ ಸುಸ್ಥಿರ ಘನತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ರೂಪಿಸುವ ನಿಟ್ಟಿನಲ್ಲಿ ‘ಸಾಹಸ್’ (Saahas) ಸಂಸ್ಥೆಯೊಂದಿಗೆ ಮಹತ್ವದ ತಿಳಿವಳಿಕೆ ಒಪ್ಪಂದಕ್ಕೆ (MoU) ಸಹಿ ಹಾಕಿದೆ.
ನವೆಂಬರ್ 19ರಂದು ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತ ಕೆ.ಎನ್. ರಮೇಶ್ (ಐಎಎಸ್) ಹಾಗೂ ‘ಸಾಹಸ್’ ಸಂಸ್ಥೆಯ ಸಿಇಒ ಅರ್ಚನಾ ತ್ರಿಪಾಠಿ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದರು. ಈ ಕಾರ್ಯತಂತ್ರದ ಪಾಲುದಾರಿಕೆಯು ಪಾಲಿಕೆಯ ಸ್ವಚ್ಛತಾ ಕಾರ್ಯಗಳಿಗೆ ತಾಂತ್ರಿಕ ಪರಿಣತಿ ಮತ್ತು ಸಾಂಸ್ಥಿಕ ಸಾಮರ್ಥ್ಯ ವೃದ್ಧಿಯ ಬಲ ನೀಡಲಿದೆ.
ಒಪ್ಪಂದದ 7 ಪ್ರಮುಖ ಕಾರ್ಯಕ್ಷೇತ್ರಗಳು:
ಸುಗಮ ಕಾರ್ಯಾಚರಣೆ: ಕಸ ಸಂಗ್ರಹಣೆ ಮತ್ತು ಸಾಗಾಣಿಕೆಯನ್ನು ವ್ಯವಸ್ಥಿತಗೊಳಿಸಲು ಜಿಬಿಎ, ಬಿಎಸ್ಡಬ್ಲ್ಯೂಎಂಎಲ್ (BSWML), ಗುತ್ತಿಗೆದಾರರು ಹಾಗೂ ಸಂಬಂಧಪಟ್ಟವರ ನಡುವೆ ಸಮನ್ವಯ ಸಾಧಿಸುವುದು.
ವಾರ್ಡ್ ಮಟ್ಟದ ಸೂಕ್ಷ್ಮ ಯೋಜನೆ: ಪ್ರತಿ ಮನೆಗೂ ಸೇವೆ ತಲುಪುವಂತೆ ಸ್ಥಳೀಯ ತ್ಯಾಜ್ಯ ನಿರ್ವಹಣಾ ಯೋಜನೆಗಳನ್ನು ಪರಿಶೀಲಿಸಿ ಉನ್ನತೀಕರಿಸುವುದು.
ಪ್ರಮಾಣಿತ ಕಾರ್ಯವಿಧಾನ (SOP): ಸ್ವಚ್ಛತಾ ಕಾರ್ಯಾಚರಣೆಗಳಿಗೆ ಸ್ಪಷ್ಟ ಮತ್ತು ಏಕರೂಪದ ಮಾರ್ಗಸೂಚಿಗಳನ್ನು ರೂಪಿಸುವುದು.
ಸಾಮರ್ಥ್ಯ ವೃದ್ಧಿ: ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಮುಂಚೂಣಿ ಪೌರಕಾರ್ಮಿಕರಿಗೆ ವಿಶೇಷ ತರಬೇತಿ ನೀಡುವುದು.
ತಂತ್ರಜ್ಞಾನ ಮತ್ತು ಟ್ರ್ಯಾಕಿಂಗ್: ಕಸ ಸಾಗಿಸುವ ವಾಹನಗಳ ಕಾರ್ಯಕ್ಷಮತೆ ಅಳೆಯಲು ಜಿಪಿಎಸ್ (GPS) ಟ್ರ್ಯಾಕಿಂಗ್ ಮತ್ತು ಡಿಜಿಟಲ್ ಮೇಲ್ವಿಚಾರಣೆ ಅಳವಡಿಸಿಕೊಳ್ಳುವುದು.
ಮೇಲ್ವಿಚಾರಣೆ ಮತ್ತು ಉತ್ತರದಾಯಿತ್ವ: ಉತ್ತಮ ಸೇವಾ ಗುಣಮಟ್ಟ ಖಚಿತಪಡಿಸಿಕೊಳ್ಳಲು ಕಟ್ಟುನಿಟ್ಟಿನ ಮಾನದಂಡ (KPI) ಹಾಗೂ ಪರಿಶೀಲನಾ ವ್ಯವಸ್ಥೆ ಜಾರಿಗೊಳಿಸುವುದು.
ನಾಗರಿಕರ ಸಹಭಾಗಿತ್ವ: ಜಾಗೃತಿ ಅಭಿಯಾನಗಳ ಮೂಲಕ ಮನೆಮನೆಗಳಲ್ಲೇ ಕಸ ವಿಂಗಡಣೆ ಮಾಡಲು ಸಾರ್ವಜನಿಕರನ್ನು ಪ್ರೇರೇಪಿಸುವುದು.
ಬಲಿಷ್ಠ ಆಡಳಿತ ಮತ್ತು ತಳಮಟ್ಟದ ತಾಂತ್ರಿಕ ಪರಿಣತಿಯನ್ನು ಒಗ್ಗೂಡಿಸುವ ಮೂಲಕ ದಕ್ಷಿಣ ಬೆಂಗಳೂರಿನ ಪ್ರತಿಯೊಬ್ಬ ನಿವಾಸಿಗೂ ಸ್ವಚ್ಛ ಪರಿಸರ ಹಾಗೂ ಹಸಿರು ಭವಿಷ್ಯ ನೀಡಲು ಪಾಲಿಕೆ ಬದ್ಧವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

