Sat. Jun 13th, 2026

ಬಿಡದಿ ಟೌನ್‌ಶಿಪ್ ಭೂಸ್ವಾಧೀನ ಹಿಂಪಡೆಯದಿದ್ದರೆ ಕಾಂಗ್ರೆಸ್ ಸರ್ಕಾರ ಭಸ್ಮ: ಆರ್. ಅಶೋಕ್ ಆಕ್ರೋಶ

Share this with Friends

ಬೆಂಗಳೂರು:ಬಿಡದಿ ಟೌನ್‌ಶಿಪ್ ಹೆಸರಿನಲ್ಲಿ 499 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಕಬಳಿಸಲು ರಾಜ್ಯ ಸರ್ಕಾರ ಹೊರಡಿಸಿರುವ ಅಂತಿಮ ಅಧಿಸೂಚನೆಯನ್ನು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರವಾಗಿ ಖಂಡಿಸಿದ್ದಾರೆ. “ಅನ್ನದಾತರ ಆಕ್ರೋಶದ ಜ್ವಾಲೆಯಲ್ಲಿ ಕಾಂಗ್ರೆಸ್ ಸರ್ಕಾರ ಭಸ್ಮವಾಗಲಿದೆ” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

‘ಬಿಲ್ಡರ್ ಮಾಫಿಯಾ’ ಪರ ಅಜೆಂಡಾ ಆರೋಪ

ಸುಮಾರು 470 ದಿನಗಳಿಂದ ರೈತರು ನಡೆಸುತ್ತಿರುವ ಕಣ್ಣೀರಿನ ಹೋರಾಟ ಮತ್ತು ಆಕ್ರೋಶವನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಅಶೋಕ್ ಆಪಾದಿಸಿದ್ದಾರೆ. “ರೈತರ ತೀವ್ರ ವಿರೋಧದ ನಡುವೆಯೂ ಇಷ್ಟೊಂದು ಆತುರಾತುರವಾಗಿ ಭೂಮಿ ಕಬಳಿಸಲು ಹೊರಟಿರುವುದರ ಹಿಂದೆ ಬಿಲ್ಡರ್ ಮಾಫಿಯಾದ ಜೇಬು ತುಂಬಿಸುವ ರಿಯಲ್ ಎಸ್ಟೇಟ್ ಅಜೆಂಡಾ ಅಡಗಿದೆ. ಬೆಂಗಳೂರಿನ ಕಸದ ಟೆಂಡರ್‌ನಲ್ಲೂ ಸಾವಿರಾರು ಕೋಟಿ ಕಮಿಷನ್ ವಾಸನೆ ಹೊಡೆದ ಈ ಸರ್ಕಾರ, ಈಗ ಅನ್ನದಾತರ ಜಮೀನಿನಲ್ಲೂ ರಿಯಲ್ ಎಸ್ಟೇಟ್ ಬಂಗಾರ ಹುಡುಕಲು ಹೊರಟಿದೆ” ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಉಪಮುಖ್ಯಮಂತ್ರಿಗಳ ವಿರುದ್ಧ ವೀಕ್ಷಕ ಲೇವಡಿ

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ನೇರ ವೀಕ್ಷಕ ಪ್ರಹಾರ ನಡೆಸಿರುವ ಅವರು, “ನಿಮ್ಮ ಆಡಳಿತದಲ್ಲಿ CM ಎಂದರೆ ‘Chief Minister’ ಅಲ್ಲ, ಅದು ‘Commission Minister’ ಮತ್ತು ‘Corruption Minister’ ಎಂಬ ಹೆಸರನ್ನು ನೀವೇ ಸಂಪಾದಿಸಿಕೊಂಡಿದ್ದೀರಿ. ರೈತರ ಜಮೀನಿನ ಮೇಲೆ ಬುಲ್ಡೋಜರ್ ಓಡಿಸಿ ರಿಯಲ್ ಎಸ್ಟೇಟ್ ಸಾಮ್ರಾಜ್ಯ ಕಟ್ಟಲು ಹೊರಟಿರುವ ಈ ನಡೆ ಅಭಿವೃದ್ಧಿಯಲ್ಲ, ಅದು ರೈತರ ಭವಿಷ್ಯದ ಸಮಾಧಿ” ಎಂದು ಆಕ್ರೋಶ ಹೊರಹಾಕಿದ್ದಾರೆ.

2028ರಲ್ಲಿ ಪ್ರಕ್ರಿಯೆ ರದ್ದುಪಡಿಸುವ ಭರವಸೆ

ರಾಜ್ಯದ ರೈತರನ್ನು ದುರ್ಬಲರೆಂದು ಭಾವಿಸುವುದು ಸರ್ಕಾರದ ದೊಡ್ಡ ತಪ್ಪು ಎಂದಿರುವ ಅವರು, ಇನ್ನು ಕೇವಲ ಒಂದೂವರೆ ವರ್ಷದಲ್ಲಿ ಈ ಜನವಿರೋಧಿ ಸರ್ಕಾರ ಇತಿಹಾಸದ ಪುಟ ಸೇರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. “2028ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಈ ಇಡೀ ಅಕ್ರಮ ಭೂಸ್ವಾಧೀನ ಪ್ರಕ್ರಿಯೆಯನ್ನು ಅಧಿಕೃತವಾಗಿ ರದ್ದುಪಡಿಸಲಾಗುವುದು. ರೈತರಿಗೆ ಕೊಟ್ಟಿರುವ ಮಾತನ್ನು ನಾವು ಖಂಡಿತ ಉಳಿಸಿಕೊಳ್ಳುತ್ತೇವೆ” ಎಂದು ಅಶೋಕ್ ಭರವಸೆ ನೀಡಿದ್ದಾರೆ. ಇದು ಕೇವಲ ಜಮೀನಿಗಾಗಿ ಅಲ್ಲ, ರೈತರ ಹಕ್ಕು ಮತ್ತು ಗೌರವದ ಹೋರಾಟವಾಗಿದ್ದು, ಸರ್ಕಾರ ತಕ್ಷಣವೇ ಅಧಿಸೂಚನೆಯನ್ನು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

 

 

 


Share this with Friends

Related Post