ಬೆಂಗಳೂರು: ರಾಜಧಾನಿಯ ಹೊರವಲಯದ ಹೆಸರಘಟ್ಟ ಸಮೀಪದ ಮತ್ಕೂರು ಗ್ರಾಮದಲ್ಲಿ ಹಕ್ಕಿಜ್ವರ (H5N1) ಕಾಣಿಸಿಕೊಂಡಿದ್ದು, ಸರ್ಕಾರವು ತಕ್ಷಣದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಪರಿಸ್ಥಿತಿ ಪ್ರಸ್ತುತ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಸಚಿವರು, ಮತ್ಕೂರು ಗ್ರಾಮದ ಕೋಳಿ ಸಾಕಾಣಿಕೆ ತರಬೇತಿ ಕೇಂದ್ರದಲ್ಲಿ ಹಕ್ಕಿಜ್ವರ ದೃಢಪಟ್ಟ ಬೆನ್ನಲ್ಲೇ ಆರೋಗ್ಯ ಮತ್ತು ಪಶುಸಂಗೋಪನಾ ಇಲಾಖೆಯ ಕ್ಷಿಪ್ರ ಪ್ರತಿಕ್ರಿಯೆ ತಂಡಗಳು (RRT) ಕಾರ್ಯಾಚರಣೆಗಿಳಿದಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಈವರೆಗೆ ಸುಮಾರು 7,444 ಕೋಳಿಗಳು ಹಾಗೂ 14,788 ಮೊಟ್ಟೆಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದೆ. ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ 10 ಸಿಬ್ಬಂದಿಗಳನ್ನು ಮುನ್ನೆಚ್ಚರಿಕೆಯಾಗಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ ಎಂದರು.
ಸೋಂಕಿತ ಮತ್ತು ಕಣ್ಗಾವಲು ವಲಯ:
ಸೋಂಕು ಪತ್ತೆಯಾದ ಸ್ಥಳದಿಂದ 3 ಕಿ.ಮೀ ವ್ಯಾಪ್ತಿಯನ್ನು ‘ಸೋಂಕಿತ ವಲಯ’ ಮತ್ತು 10 ಕಿ.ಮೀ ವ್ಯಾಪ್ತಿಯನ್ನು ‘ಕಣ್ಗಾವಲು ವಲಯ’ ಎಂದು ಘೋಷಿಸಲಾಗಿದೆ. ಮುಂದಿನ 10 ದಿನಗಳ ಕಾಲ ಸುತ್ತಮುತ್ತಲಿನ 19 ಗ್ರಾಮಗಳಲ್ಲಿ ಆರೋಗ್ಯ ಕಾರ್ಯಕರ್ತರು ಮನೆ-ಮನೆಗೆ ಭೇಟಿ ನೀಡಿ ಜ್ವರದ ಲಕ್ಷಣಗಳ ಬಗ್ಗೆ ನಿಗಾ ವಹಿಸಲಿದ್ದಾರೆ ಎಂದರು.
ಆಸ್ಪತ್ರೆಗಳಲ್ಲಿ ಸಿದ್ಧತೆ:
ಹೆಸರಘಟ್ಟ ಹಾಗೂ ಸೊನ್ನೆನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯವಿರುವ PPE ಕಿಟ್‌ಗಳು, ಮಾಸ್ಕ್ ಹಾಗೂ ಔಷಧಿಗಳನ್ನು ದಾಸ್ತಾನು ಮಾಡಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕರಿಗೆ ಮಾರ್ಗಸೂಚಿ:
ಸತ್ತ ಅಥವಾ ಅಸಹಜವಾಗಿ ವರ್ತಿಸುವ ಹಕ್ಕಿಗಳನ್ನು ಮುಟ್ಟಬೇಡಿ.
ಕೋಳಿ ಮಾಂಸ ಮತ್ತು ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿ ಸೇವಿಸುವುದು ಸುರಕ್ಷಿತ.
ಹಕ್ಕಿಗಳಲ್ಲಿ ಅಸಹಜ ಸಾವು ಕಂಡುಬಂದಲ್ಲಿ ತಕ್ಷಣ ಸ್ಥಳೀಯ ಪಶು ಚಿಕಿತ್ಸಾಲಯಕ್ಕೆ ಮಾಹಿತಿ ನೀಡಿ.

