ಬೆಂಗಳೂರು:ಚುನಾವಣಾ ಆಯೋಗದ ನಿಯಮಾವಳಿಗಳ ಅನ್ವಯ ಎಸ್ಐಆರ್ ಫಾರಂ-7 ಸಲ್ಲಿಸುತ್ತಿರುವ ಬಿಜೆಪಿ ಕಾರ್ಯಕರ್ತರ ವಿರುದ್ಧ ಕಾಂಗ್ರೆಸ್ ಸರ್ಕಾರ ಪೊಲೀಸರನ್ನು ದುರುಪಯೋಗಪಡಿಸಿಕೊಂಡು ಎಫ್ಐಆರ್ ದಾಖಲಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈ ವಿಚಾರದಲ್ಲಿ ಹೈಕೋರ್ಟ್ ಚಾಟಿ ಬೀಸಿದ್ದರೂ ಸರ್ಕಾರ ದ್ವೇಷದ ರಾಜಕಾರಣ ಮುಂದುವರಿಸಿದ್ದು, ಇನ್ನು ಮುಂದೆ ಇಂತಹ ಕ್ರಮ ಕೈಗೊಂಡರೆ ರಾಜ್ಯಾದ್ಯಂತ ಸಂಬಂಧಪಟ್ಟ ಪೊಲೀಸ್ ಠಾಣೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (ಎಸ್ಪಿ) ಕಚೇರಿಗಳಿಗೆ ಪಕ್ಷದ ವತಿಯಿಂದ ಬೃಹತ್ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕೌಂಟ್ಡೌನ್:
ರಾಜ್ಯ ಬಿಜೆಪಿ ಸಹ ಉಸ್ತುವಾರಿ ಕಾಸಂ ವೆಂಕಟೇಶ್ ಅವರ ನೇತೃತ್ವದಲ್ಲಿ ನಡೆದ ಮಹತ್ವದ ಕೋರ್ ಕಮಿಟಿ ಸಭೆಯಲ್ಲಿ ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಲು ಕಾರ್ಯತಂತ್ರ ರೂಪಿಸಲಾಗಿದೆ. ಸರ್ಕಾರ ಪ್ರಕಟಿಸಿರುವ ಮೀಸಲಾತಿ ಪಟ್ಟಿಯಲ್ಲಿ ಆಡಳಿತ ಪಕ್ಷಕ್ಕೆ ಅನುಕೂಲ ಮಾಡಿಕೊಡುವ ಗೊಂದಲಗಳಿದ್ದು, ಚುನಾವಣೆ ಮುಂದೂಡುವ ಕುತಂತ್ರ ನಡೆದಿದೆ ಎಂದು ವಿಜಯೇಂದ್ರ ಆರೋಪಿಸಿದರು. ಯಾವುದೇ ನೆಪ ಒಡ್ಡದೆ ಪಾರದರ್ಶಕವಾಗಿ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದ ಅವರು, ಸಭೆಯ ನಿರ್ಧಾರದಂತೆ ಪ್ರತಿ ಜಿಲ್ಲೆಗೂ ತಕ್ಷಣವೇ ಚುನಾವಣಾ ಉಸ್ತುವಾರಿಗಳು ಹಾಗೂ ಚುನಾವಣಾ ನಿರ್ವಹಣಾ ಸಮಿತಿಯನ್ನು ರಚಿಸಲಾಗುವುದು ಎಂದರು.
ಸರ್ಟಿಫಿಕೇಟ್ ಅಧಿಕಾರಕ್ಕೆ ಆಕ್ಷೇಪ, ಉಪಚುನಾವಣೆ ಮೈತ್ರಿ ಸಮಾಲೋಚನೆ:
ಪರ್ಮನೆಂಟ್ ರೆಸಿಡೆಂಟ್ ಸರ್ಟಿಫಿಕೇಟ್ (ಖಾಯಂ ನಿವಾಸಿ ಪ್ರಮಾಣಪತ್ರ) ನೀಡುವ ಅಧಿಕಾರವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಹಾಗೂ ಮುನ್ಸಿಪಲ್ ಕಮಿಷನರ್ಗಳಿಗೆ ನೀಡಿರುವ ಸರ್ಕಾರದ ಕ್ರಮವನ್ನು ಬಿಜೆಪಿ ವಿರೋಧಿಸಿದೆ. ಈ ವಿತರಣಾ ಅಧಿಕಾರವನ್ನು ತಹಶೀಲ್ದಾರ್ ಅಥವಾ ಅದಕ್ಕಿಂತ ಮೇಲಿನ ಹಂತದ ಅಧಿಕಾರಿಗಳಿಗೆ ಮಾತ್ರ ಸೀಮಿತಗೊಳಿಸಬೇಕು ಎಂದು ಆಗ್ರಹಿಸಿದ ಅವರು, ಈ ಬಗ್ಗೆ ಚುನಾವಣಾ ಆಯೋಗದ ಗಮನ ಸೆಳೆಯಲಾಗುವುದು ಎಂದರು. ಇನ್ನು ರಾಜ್ಯದಲ್ಲಿ ಎದುರಾಗಲಿರುವ ಮುಂಬರುವ ಉಪಚುನಾವಣೆಗಳಿಗೆ ಸಂಬಂಧಿಸಿದಂತೆ ಮೈತ್ರಿ ಪಕ್ಷವಾದ ಜೆಡಿಎಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಜಂಟಿ ಸಮನ್ವಯದೊಂದಿಗೆ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕೋರ್ ಕಮಿಟಿಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಸ್ಟಿಂಗ್ ಆಪರೇಷನ್ ಹಾಗೂ ಕೆಪಿಎಸ್ಸಿ ಅಕ್ರಮ:
ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ಗಳ ಹಿಂದೆ ಆಡಳಿತ ಪಕ್ಷದ ಸಚಿವರು ಹಾಗೂ ಶಾಸಕರ ಆಂತರಿಕ ಕಚ್ಚಾಟವೇ ಕಾರಣ ಎಂದು ವಿಜಯೇಂದ್ರ ಲೇವಡಿ ಮಾಡಿದರು. ಇದರ ಸತ್ಯಾಸತ್ಯತೆ ಪೂರ್ಣವಾಗಿ ಹೊರಬಂದ ನಂತರವೇ ಬಿಜೆಪಿ ಅಧಿಕೃತವಾಗಿ ಪ್ರತಿಕ್ರಿಯಿಸಲಿದೆ ಎಂದ ಅವರು, ಸಿಎಂ ಸೇರಿದಂತೆ ಹಲವು ಸಚಿವರ ಮುಖದಲ್ಲಿ ಆತಂಕ ಎದ್ದು ಕಾಣುತ್ತಿದೆ ಎಂದರು. ಇದೇ ವೇಳೆ ಕೆಪಿಎಸ್ಸಿ ನೇಮಕಾತಿ ಅಕ್ರಮದ ಕುರಿತು ಮಾತನಾಡಿದ ಅವರು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎನ್ನುವುದೇ ಬಿಜೆಪಿಯ ನಿಲುವು. ಪ್ರಿಯಾಂಕ್ ಖರ್ಗೆ ಅವರು ಬಿಜೆಪಿಯನ್ನು ಪ್ರಶ್ನಿಸುವ ಮುನ್ನ ಎಸ್ಐಟಿ ತನಿಖೆ ಹಾಗೂ ನ್ಯಾಯಾಲಯದ ಬೆಳವಣಿಗೆಗಳ ಕುರಿತು ತಾವೇ ಸ್ಪಷ್ಟನೆ ನೀಡಲಿ ಎಂದು ಸವಾಲು ಹಾಕಿದರು.

