Thu. Nov 5th, 2026

ಬೆಲೆ ಎರಿಕೆಗೆ ಖಂಡನೆ: ಬಿಜೆಪಿ ವತಿಯಿಂದ ಭಿಕ್ಷಾಪಾತ್ರೆ ಹಿಡಿದು ವಿನೂತನ ಪ್ರತಿಭಟನೆ

Share this with Friends

ಬೆಂಗಳೂರು:ಹಾಲು,ಮೊಸರು ಮತ್ತು ಬಸ್ ಪ್ರಯಾಣ ದರ ಏರಿಕೆಯನ್ನು ಖಂಡಿಸಿ ಹಾಗೂ ರಾಜ್ಯ ಸರ್ಕಾರದ ನೀತಿಗಳ ವಿರುದ್ಧ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮುಖಂಡರು ನಗರದ ಮೆಜೆಸ್ಟಿಕ್‌ನಲ್ಲಿ ಭಿಕ್ಷಾಪಾತ್ರೆ ಹಿಡಿಯುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ಪ್ರಸ್ತುತ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ತೀವ್ರವಾಗಿ ಟೀಕಿಸಿದರು. ಇದು ದುಷ್ಟ ಮತ್ತು ಜನರನ್ನು ಲೂಟಿ ಮಾಡುವ ಸರ್ಕಾರ ಎಂದು ಅವರು ಆರೋಪಿಸಿದರು.

ತೆರಿಗೆ ಹೊರೆ ಮತ್ತು ಆರ್ಥಿಕ ದಿವಾಳಿತನ

ಉಚಿತ ಗ್ಯಾರಂಟಿ ಯೋಜನೆಗಳನ್ನು ನಿಭಾಯಿಸಲು ಹಣದ ಕೊರತೆ ಎದುರಿಸುತ್ತಿರುವ ಸರ್ಕಾರ, ಆ ಹೊರೆಯನ್ನು ಜನರ ಮೇಲೆ ತೆರಿಗೆ ರೂಪದಲ್ಲಿ ಹೇರುತ್ತಿದೆ ಎಂದು ಅಶೋಕ್ ಆಕ್ಷೇಪಿಸಿದರು. ಗ್ಯಾರಂಟಿ ಸಂಬಂಧ ಐದಾರು ಸಾವಿರ ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದು, ಸಂಪನ್ಮೂಲ ಕ್ರೋಡೀಕರಣ ಮಾಡಲು ಸಾಧ್ಯವಾಗದೆ ಸಾರ್ವಜನಿಕರ ಜೇಬಿಗೆ ಕೈ ಹಾಕಲಾಗುತ್ತಿದೆ ಎಂದರು. ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಿಂದಾಗಿ ಸರ್ಕಾರದ ಖಜಾನೆಗೆ ಈಗಾಗಲೇ ಸಾವಿರಾರು ಕೋಟಿ ರೂಪಾಯಿ ಹರಿದು ಬಂದಿದ್ದರೂ, ಜನರಿಗೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಸರ್ಕಾರ ಸಂಪೂರ್ಣ ದಿವಾಳಿಯಾಗಿದ್ದು, ನೌಕರರಿಗೆ ಸಂಬಳ ನೀಡಲು ಸಹ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಸಾರಿಗೆ ಇಲಾಖೆಯ ದುಸ್ಥಿತಿ

ಹಾಲು, ಮೊಸರು, ತುಪ್ಪ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಾರ್ವಜನಿಕರು ತತ್ತರಿಸಿದ್ದಾರೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಅವಧಿಯಲ್ಲಿ ಸಾರಿಗೆ ಇಲಾಖೆಯು ಮುಚ್ಚುವ ಹಂತಕ್ಕೆ ತಲುಪಿದೆ ಎಂದು ಅವರು ಗಂಭೀರ ಆರೋಪ ಮಾಡಿದರು. ಇಲಾಖೆಯ ಬಸ್‌ಗಳಲ್ಲಿ ಸೂಕ್ತ ಟೈರ್, ಟ್ಯೂಬ್, ಬ್ಯಾಟರಿಗಳಿಲ್ಲದೆ ವಾಹನಗಳು ರಸ್ತೆಗೆ ಇಳಿಯಲಾರದ ಸ್ಥಿತಿಯಲ್ಲಿವೆ. ಹಲವು ಕಡೆ ಬಸ್‌ಗಳನ್ನು ತಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಸಾರ್ವಜನಿಕರನ್ನು ಸುಲಿಗೆ ಮಾಡುತ್ತಿದೆ. ಈ ನೀತಿಗೆಟ್ಟ ಸರ್ಕಾರ ಅಧಿಕಾರದಿಂದ ತೊಲಗಬೇಕು ಎಂದು ಆಗ್ರಹಿಸಿದ ಅವರು, ಸರ್ಕಾರದ ನಿರ್ಧಾರಗಳ ವಿರುದ್ಧ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಹಲವಾರು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

 


Share this with Friends

Related Post