Fri. Jun 26th, 2026

ಬಿಎನ್‌ಸಿಸಿ ಕಮಿಷನರ್ ‘ಫೋನ್-ಇನ್’ ಜನಪ್ರಿಯತೆ ಹಿಂದಿದೆ ಕಹಿ ಸತ್ಯ; ರಸ್ತೆ ಗುಂಡಿಗಳ ಕಾಟಕ್ಕೆ ಉತ್ತರ ಬೆಂಗಳೂರು ಜನತೆ ಕಂಗಾಲು!

Share this with Friends

ಬೆಂಗಳೂರು: ರಾಜಧಾನಿಯ ಆಡಳಿತ ವಿಕೇಂದ್ರೀಕರಣದ ಮಹತ್ವದ ಹೆಜ್ಜೆಯಾಗಿ ಮೂಡಿಬಂದಿರುವ ಬೃಹತ್ ಬೆಂಗಳೂರು ಉತ್ತರ ನಗರ ಪಾಲಿಕೆ (BNCC) ಕಮಿಷನರ್ ಅವರ ವಾರಾಂತರದ ‘ಫೋನ್-ಇನ್’ ಕಾರ್ಯಕ್ರಮ ನಾಗರಿಕರ ಅಹವಾಲು ಆಲಿಸಲು ಯಶಸ್ವಿ ವೇದಿಕೆಯಾಗುತ್ತಿರುವುದು ನಿಜ. ಆದರೆ, ಪ್ರತಿ ಗುರುವಾರ ದಾಖಲಾಗುತ್ತಿರುವ ದೂರುಗಳ ಅಂಕಿ-ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಉತ್ತರ ಬೆಂಗಳೂರಿನ ಜನತೆ ಅನುಭವಿಸುತ್ತಿರುವ ಮೂಲಸೌಕರ್ಯಗಳ ನರಕಯಾತನೆ ಮತ್ತೊಮ್ಮೆ ನಗ್ನವಾಗಿ ಅನಾವರಣಗೊಂಡಿದೆ.

ಜೂನ್ 26 ರಂದು ಪಾಲಿಕೆ ಕಮಿಷನರ್ ಪೊಮ್ಮಾಲ ಸುನಿಲ್ ಕುಮಾರ್ ನೇತೃತ್ವದಲ್ಲಿ ನಡೆದ ನೇರ ಫೋನ್ ಸಂವಾದದಲ್ಲಿ ದಾಖಲಾದ ದೂರುಗಳೇ ಇದಕ್ಕೆ ಸಾಕ್ಷಿ.

ಶೇ. 50 ಕ್ಕೂ ಹೆಚ್ಚು ರಸ್ತೆಗಳದ್ದೇ ರೋದನೆ!

ಈ ಬಾರಿಯ ಫೋನ್-ಇನ್‌ನಲ್ಲಿ ಸಾರ್ವಜನಿಕರಿಂದ ಒಟ್ಟು 49 ಕರೆಗಳ ಮೂಲಕ 67 ವಿಭಿನ್ನ ನಾಗರಿಕ ದೂರುಗಳು ದಾಖಲಾಗಿವೆ. ಇದರಲ್ಲಿ ಆಘಾತಕಾರಿ ವಿಷಯವೆಂದರೆ, ಅರ್ಧಕ್ಕಿಂತಲೂ ಹೆಚ್ಚು ಅಂದರೆ ಬರೋಬ್ಬರಿ 36 ದೂರುಗಳು ಕೇವಲ ರಸ್ತೆ ನಿರ್ವಹಣೆ ಮತ್ತು ರಸ್ತೆ ಗುಂಡಿಗಳಿಗೆ ಸಂಬಂಧಿಸಿದ್ದಾಗಿವೆ! ಹೆದ್ದಾರಿಗಳಂತಿರಬೇಕಾದ ಪ್ರಮುಖ ರಸ್ತೆಗಳು ಹಾಗೂ ಒಳಗಿನ ಲಿಂಕ್ ರಸ್ತೆಗಳು ಸಂಪೂರ್ಣ ಹದಗೆಟ್ಟಿರುವುದು, ಮಳೆಯ ನಡುವೆ ಸವಾರರು ಪ್ರಾಣ ಕೈಯಲ್ಲಿ ಹಿಡಿದು ಸಂಚರಿಸುತ್ತಿರುವುದಕ್ಕೆ ಸಾರ್ವಜನಿಕರು ಕಮಿಷನರ್ ಮುಂದೆ ಆಕ್ರೋಶ ಹೊರಹಾಕಿದ್ದಾರೆ.

ರಸ್ತೆಗಳ ಬೆನ್ನಲ್ಲೇ ಪರಿಸರ ನಾಶ ಹಾಗೂ ಮರಗಳ ಕಟಾವಿಗೆ ಸಂಬಂಧಿಸಿದಂತೆ ಅರಣ್ಯ ವಿಭಾಗಕ್ಕೆ 9 ದೂರುಗಳು, ಕಸದ ಸಮರ್ಪಕ ವಿಲೇವಾರಿ ಆಗದ ಹಿನ್ನೆಲೆಯಲ್ಲಿ ಘನತ್ಯಾಜ್ಯ ನಿರ್ವಹಣೆಗೆ 7 ದೂರುಗಳು ಹಾಗೂ ಇತ್ತೀಚಿನ ತಾಂತ್ರಿಕ ಗೊಂದಲಗಳಿಂದಾಗಿ ತಲೆನೋವಾಗಿರುವ ‘ಇ-ಖಾತಾ’ ವಿತರಣೆ ವಿಳಂಬದ ವಿರುದ್ಧ 4 ದೂರುಗಳು ದಾಖಲಾಗಿವೆ. ಆರೋಗ್ಯ, ಪಾರ್ಕ್‌ಗಳ ದುರಸ್ತಿ ಮತ್ತು ಪ್ಲಾಸ್ಟಿಕ್ ಹಾವಳಿಯ ದೂರುಗಳೂ ಪಟ್ಟಿಯಲ್ಲಿವೆ.

ಕಚೇರಿ ಬಿಟ್ಟು ಹೊರಬರಲಿ ಅಧಿಕಾರಿಗಳು: ಕಮಿಷನರ್ ಖಡಕ್ ವಾರ್ನಿಂಗ್

ಸಾರ್ವಜನಿಕರ ಸಾಲು ಸಾಲು ದೂರುಗಳಿಂದ ಎಚ್ಚೆತ್ತ ಕಮಿಷನರ್ ಪೊಮ್ಮಾಲ ಸುನಿಲ್ ಕುಮಾರ್ ಅವರು ತಳಮಟ್ಟದ ಅಧಿಕಾರಿಗಳಿಗೆ ಗಂಭೀರ ಎಚ್ಚರಿಕೆ ನೀಡಿದ್ದಾರೆ. “ದೂರುಗಳು ಕೇವಲ ಕಡತದಲ್ಲೇ ಉಳಿಯಬಾರದು. ವಲಯ ಮಟ್ಟದ ಇಂಜಿನಿಯರ್‌ಗಳು ಮತ್ತು ಅಧಿಕಾರಿಗಳು ಹವಾನಿಯಂತ್ರಿತ ಕಚೇರಿಗಳನ್ನು ಬಿಟ್ಟು ಖುದ್ದಾಗಿ ಕ್ಷೇತ್ರ ಪರಿಶೀಲನೆ (Field Inspection) ನಡೆಸಬೇಕು. ನಿಗದಿಪಡಿಸಿದ ಕಾಲಮಿತಿಯೊಳಗೆ ರಸ್ತೆ ಗುಂಡಿ ಮುಚ್ಚುವ ಹಾಗೂ ಕಸ ವಿಲೇವಾರಿ ಸಮಸ್ಯೆಗಳನ್ನು ಯುದ್ಧೋಪಾದಿಯಲ್ಲಿ ಬಗೆಹರಿಸಿ ಪಾರದರ್ಶಕ ವರದಿ ನೀಡಬೇಕು” ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ಕಾಗದದ ಮೇಲಿನ ಪ್ರಗತಿಯೋ? ನಿಜವಾದ ಪರಿಹಾರವೋ?

ಕಳೆದ 2025ರ ಸೆಪ್ಟೆಂಬರ್ 26 ರಿಂದ ಆರಂಭವಾದ ಈ ವಿನೂತನ ಜನಸಂಪರ್ಕ ವೇದಿಕೆಯಲ್ಲಿ ಈವರೆಗೆ ಒಟ್ಟು 1,853 ಕರೆಗಳ ಮೂಲಕ 2,387 ದೂರುಗಳನ್ನು ನೋಂದಾಯಿಸಿಕೊಳ್ಳಲಾಗಿದೆ. ಪಾಲಿಕೆಯ ವರದಿಯ ಪ್ರಕಾರ ಇದರಲ್ಲಿ 1,951 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಹೇಳಲಾಗಿದೆ.

ಆದರೆ, ಕಾಗದದ ಮೇಲೆ ‘ದೂರು ಇತ್ಯರ್ಥ’ (Resolved) ಎಂದು ತೋರಿಸಿದರೂ, ವಾಸ್ತವದಲ್ಲಿ ರಸ್ತೆಗಳ ಸ್ಥಿತಿ ಸುಧಾರಿಸಿಲ್ಲ ಎಂಬುದು ಸಾರ್ವಜನಿಕರ ಪ್ರಮುಖ ಆರೋಪವಾಗಿದೆ. ಕೇವಲ ತಾತ್ಕಾಲಿಕ ಮಣ್ಣು ಮುಚ್ಚುವ ಕೆಲಸದ ಬದಲು ಶಾಶ್ವತ ಪರಿಹಾರ ಯಾವಾಗ ಸಿಗಲಿದೆ? ಹೊಸದಾಗಿ ರಚನೆಯಾಗಿರುವ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಮತ್ತು ನಗರಾಭಿವೃದ್ಧಿ ಸಚಿವರು ಉತ್ತರ ಬೆಂಗಳೂರಿನ ಈ ರಸ್ತೆಗಳ ದುಸ್ಥಿತಿಗೆ ಶಾಶ್ವತ ಮುಕ್ತಿ ನೀಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

 

 


Share this with Friends

Related Post