ಬೆಂಗಳೂರು: ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸದ ಕಾಂಗ್ರೆಸ್ ಸರ್ಕಾರ, ಕೇವಲ ಅಧಿಕಾರ ಮದ ಮತ್ತು ರಿಯಲ್ ಎಸ್ಟೇಟ್ ಲಾಭಕ್ಕಾಗಿ ರೈತರ ಫಲವತ್ತಾದ ಭೂಮಿಯನ್ನು ಕಸಿದುಕೊಳ್ಳಲು ಸಂಚು ರೂಪಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಿಡದಿ ಟೌನ್ ಶಿಪ್ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಬಿಡದಿ ಭಾಗದಲ್ಲಿ ಟೌನ್‌ಶಿಪ್ ನಿರ್ಮಾಣದ ಹೆಸರಿನಲ್ಲಿ ರೈತರ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುವ ಸರ್ಕಾರದ ನಿರ್ಧಾರವನ್ನು ತಕ್ಷಣವೇ ಕೈಬಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಹೈಕಮಾಂಡ್‌ಗೆ ಕಪ್ಪ ಕಾಣಿಕೆ ಆರೋಪ
“ಸರ್ಕಾರದ ಬಳಿ ಸಾಕಷ್ಟು ಕಂದಾಯ ಭೂಮಿ ಲಭ್ಯವಿದ್ದರೂ, ಕೇವಲ ರಿಯಲ್ ಎಸ್ಟೇಟ್ ದಂಧೆಕೋರರ ಹಿತರಕ್ಷಣೆಗಾಗಿ ಮತ್ತು ಕಾಂಗ್ರೆಸ್ ಹೈಕಮಾಂಡ್‌ಗೆ ಕಪ್ಪ ಕಾಣಿಕೆ ಸಲ್ಲಿಸಲು ಬಡ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ” ಎಂದು ಬಿಎಸ್‌ವೈ ಗಂಭೀರ ಆರೋಪ ಮಾಡಿದರು.
ಎರಡನೇ ವಿಮಾನ ನಿಲ್ದಾಣದ ಹೆಸರಲ್ಲಿ ರಾಜಕೀಯ
ಬೆಂಗಳೂರಿನ 2ನೇ ವಿಮಾನ ನಿಲ್ದಾಣದ ವಿಚಾರವಾಗಿಯೂ ಮಾತನಾಡಿದ ಅವರು, “ವಿಮಾನ ನಿಲ್ದಾಣವನ್ನು ಬೆಂಗಳೂರಿನ ಪೂರ್ವ ಭಾಗದಲ್ಲಿ ನಿರ್ಮಿಸಿದರೆ ಮಧ್ಯ ಹಾಗೂ ಉತ್ತರ ಕರ್ನಾಟಕದ ಜನರಿಗೆ ಅನುಕೂಲವಾಗುತ್ತದೆ. ಅಲ್ಲಿ ಸರ್ಕಾರಿ ಜಮೀನುಗಳಿದ್ದರೂ, ರಿಯಲ್ ಎಸ್ಟೇಟ್ ಲಾಭದ ಉದ್ದೇಶದಿಂದ ಅದನ್ನು ಕನಕಪುರ ಭಾಗಕ್ಕೆ ಕೊಂಡೊಯ್ಯಲು ಸರ್ಕಾರ ತಂತ್ರ ರೂಪಿಸುತ್ತಿದೆ” ಎಂದರು.
ದೆಹಲಿ ಪ್ರದಕ್ಷಿಣೆ ವರ್ಸಸ್ ಜನರ ಕಷ್ಟ
ರಾಜ್ಯದ ಜಲಾಶಯಗಳು ಬತ್ತಿ ಹೋಗಿ ಕುಡಿಯುವ ನೀರಿಗಾಗಿ ಜನ ತತ್ತರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ಮುಖ್ಯಮಂತ್ರಿ ಹಾಗೂ ಸಚಿವರು ಜನರ ಕಷ್ಟ ಕೇಳುವ ಬದಲು, ಮಂತ್ರಿಮಂಡಲ ವಿಸ್ತರಣೆಯ ಹಪಾಹಪಿಯಿಂದ ವಾರಕ್ಕೆರಡು ಬಾರಿ ದೆಹಲಿಗೆ ಓಡಾಡುತ್ತಿದ್ದಾರೆ ಎಂದು ಕಿಡಿಕಾರಿದರು.
24 ಗಂಟೆಗಳ ಗಡುವು
ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದ ರೈತರು ಮತ್ತು ಮಹಿಳೆಯರ ಮೇಲೆ ದರ್ಪದಿಂದ ದಾಖಲಿಸಿರುವ ಸುಳ್ಳು ಮೊಕದ್ದಮೆಗಳನ್ನು ಮುಂದಿನ 24 ಗಂಟೆಗಳಲ್ಲಿ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಬಿಜೆಪಿ-ಜೆಡಿಎಸ್ ಜಂಟಿ ಹೋರಾಟ
“ಜನರ ಹಿತವನ್ನು ಮರೆತು ತೊಘಲಕ್ ದರ್ಬಾರ್ ನಡೆಸುತ್ತಿರುವ ಈ ಭ್ರಷ್ಟ ಸರ್ಕಾರಕ್ಕೆ ಸಾರ್ವಜನಿಕರು ತಕ್ಕ ಪಾಠ ಕಲಿಸಲಿದ್ದಾರೆ. ಈ ರೈತ ವಿರೋಧಿ ಸರ್ಕಾರವನ್ನು ಕಿತ್ತೊಗೆಯಲು ಬಿಜೆಪಿ ಮತ್ತು ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರು ಒಟ್ಟಾಗಿ ಹೋರಾಟಕ್ಕೆ ಸಿದ್ಧರಾಗಿದ್ದೇವೆ” ಎಂದು ಯಡಿಯೂರಪ್ಪ ಗುಡುಗಿದರು.
ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಜನಪರ ಆಡಳಿತವನ್ನು ಶ್ಲಾಘಿಸಿದ ಅವರು, ಈ ಜಂಟಿ ಹೋರಾಟ ಕೇವಲ ಬೆಂಗಳೂರಿಗೆ ಸೀಮಿತವಾಗಿರದೆ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.

