Wed. Jul 15th, 2026

ಕಾಂಗ್ರೆಸ್ ಸರ್ಕಾರದ ವಿರುದ್ಧ ಕಮಲ ಪಾಳಯದ ಬೃಹತ್ ಧರಣಿ: ಬಿಡದಿ ಟೌನ್‌ಶಿಪ್ ವಿರೋಧಿಸಿ ಜೂನ್ 17 ಕ್ಕೆ ಬಿಜೆಪಿ ಪ್ರತಿಭಟನೆ!

Share this with Friends

ಬಳ್ಳಾರಿ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ರೈತರು, ಬಡವರು ಹಾಗೂ ಹಿಂದೂಗಳ ವಿರೋಧಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಇದೇ ಜೂನ್ 17ರ ಶುಕ್ರವಾರದಂದು ಬೆಳಿಗ್ಗೆಯಿಂದ ಸಂಜೆವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ಪ್ರಕಟಿಸಿದ್ದಾರೆ.

ಈ ಧರಣಿಯಲ್ಲಿ ಬಿಜೆಪಿಯ ಎಲ್ಲಾ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ಸೇರಿದಂತೆ ಮಾಜಿ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಮುಖ್ಯವಾಗಿ ರೈತರ ವಿರುದ್ಧ ದಾಖಲಿಸಿರುವ ಎಲ್ಲಾ ಸುಳ್ಳು ಪ್ರಕರಣಗಳನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಈ ವೇಳೆ ಸರ್ಕಾರವನ್ನು ಆಗ್ರಹಿಸಲಾಗುವುದು ಎಂದು ಅವರು ತಿಳಿಸಿದರು.

ಸಿಎಂಗೆ ರಿಯಲ್ ಎಸ್ಟೇಟ್ ಆದ್ಯತೆ, ರೈತರಲ್ಲ!

ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವೈ. ವಿಜಯೇಂದ್ರ, “ಬಿಡದಿ ಸ್ಮಾರ್ಟ್ ಟೌನ್‌ಶಿಪ್ ಯೋಜನೆಯಿಂದ ಸರ್ಕಾರ ತಕ್ಷಣವೇ ಹಿಂದೆ ಸರಿಯಬೇಕು. ಮುಖ್ಯಮಂತ್ರಿಗಳಿಗೆ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಇರುವಷ್ಟು ಆದ್ಯತೆ ಮತ್ತು ಕಾಳಜಿ ದೇಶದ ಬೆನ್ನೆಲುಬಾದ ರೈತರ ಮೇಲಿಲ್ಲ” ಎಂದು ಆಕ್ಷೇಪಿಸಿದರು.

ಹಿಂದೆ ಬೃಹತ್ ನೀರಾವರಿ ಸಚಿವರಾಗಿದ್ದ ಅವಧಿಯಲ್ಲಿ ಹೊಸಪೇಟೆಯ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ದುರಸ್ತಿ ಮಾಡಬೇಕೆಂದು ತಜ್ಞರು ಹೇಳಿದಾಗ, ಅದನ್ನು ಮಾಡಿಸಲು ಇವರು ಬರೋಬ್ಬರಿ 24 ತಿಂಗಳುಗಳನ್ನು ತಗೆದುಕೊಂಡರು. ಇವರ ಈ ವಿಳಂಬ ನೀತಿಯಿಂದಾಗಿ ಕೃಷ್ಣಾ ಮತ್ತು ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಎರಡನೇ ಬೆಳೆ ಬೆಳೆಯಲಾಗದೆ ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸುವಂತಾಯಿತು ಎಂದು ವಿಜಯೇಂದ್ರ ನೆನಪಿಸಿದರು.

ಬಿಡದಿಯಲ್ಲಿ ಮಹಿಳೆಯರು ಪೊರಕೆ ಹಿಡಿದು ಬೀದಿಗಿಳಿದಿದ್ದಾರೆ

ಅದೇ ನಾಯಕರು ಈಗ ಬಿಡದಿ ಟೌನ್‌ಶಿಪ್ ಹೆಸರಿನಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ಬಿಡದಿ ಸುತ್ತಮುತ್ತಲಿನ ರೈತರು ತಮ್ಮ ಜೀವನಾಧಾರವಾದ ಭೂಮಿಯನ್ನು ಉಳಿಸಿಕೊಳ್ಳಲು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಜಮೀನು ಸರ್ವೇ ಮಾಡಲು ಬರುವ ಅಧಿಕಾರಿಗಳನ್ನು ಸ್ಥಳೀಯ ಮಹಿಳೆಯರು ಪೊರಕೆ ಹಿಡಿದು ಬೆನ್ನಟ್ಟುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಈ ಸರ್ಕಾರದ ರೈತವಿರೋಧಿ ನೀತಿಗೆ ಸಾಕ್ಷಿಯಾಗಿದೆ ಎಂದು ವಿವರಿಸಿದರು.

“ಮುಖ್ಯಮಂತ್ರಿಗಳೇ, ರೈತರ ಮೇಲೆ ಇಲಾಖೆಯ ಮೂಲಕ ಮಾಡುತ್ತಿರುವ ದಬ್ಬಾಳಿಕೆಯನ್ನು ತಕ್ಷಣವೇ ನಿಲ್ಲಿಸಿ. ಅನ್ನದಾತರ ಪರವಾಗಿ ಯೋಚಿಸಿ ಅವರ ಹಿತ ಕಾಯುವ ನಿರ್ಧಾರ ತೆಗೆದುಕೊಳ್ಳಿ. ಭೂಮಿ ಉಳಿಸಿಕೊಳ್ಳಲು ಹೋರಾಟ ನಡೆಸಿದ ರೈತರು ಹಾಗೂ ರೈತ ಮುಖಂಡರ ಮೇಲೆ ದಾಖಲಿಸಿರುವ ಪೊಲೀಸ್ ಪ್ರಕರಣಗಳನ್ನು ಯಾವುದೇ ಷರತ್ತಿಲ್ಲದೆ ತಕ್ಷಣವೇ ವಾಪಸ್ ಪಡೆಯಬೇಕು” ಎಂದು ಬಿ.ವೈ. ವಿಜಯೇಂದ್ರ ಕಟ್ಟುನಿಟ್ಟಾಗಿ ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ದೆಹಲಿಯತ್ತ ಶಾಸಕರ ದಂಡು: 

 “ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ನಿನ್ನೆ ಪ್ರಧಾನಮಂತ್ರಿಯವರಿಗೆ ಪತ್ರ ಬರೆದು, ತಕ್ಷಣವೇ ಕೇಂದ್ರದ ಅಧಿಕಾರಿಗಳ ತಂಡವನ್ನು ಕಳುಹಿಸಿ ಬರ ಅಧ್ಯಯನ ನಡೆಸುವಂತೆ ಕೋರಿದ್ದಾರೆ. ಹಾಗಿದ್ದರೆ ಕರ್ನಾಟಕದಲ್ಲಿ ಸದ್ಯಕ್ಕೆ ರಾಷ್ಟ್ರಪತಿ ಆಳ್ವಿಕೆ ನಡೆಯುತ್ತಿದೆಯೇ?” ಎಂದು ವಿಜಯೇಂದ್ರ ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಚುನಾಯಿತ ಸರ್ಕಾರವಿದ್ದರೂ, ಇಂತಹ ಸಂಕಷ್ಟದ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾಗಲಿ ಅಥವಾ ಸಚಿವರಾಗಲಿ ಜಿಲ್ಲಾ ಪ್ರವಾಸ ಕೈಗೊಂಡು ಜನರ ಅಹವಾಲು ಆಲಿಸುತ್ತಿಲ್ಲ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಕೃಷಿ ಸಚಿವರೇ ಇಲ್ಲದಿರುವುದು ದುರಂತ!

ರಾಜ್ಯದಲ್ಲಿ ಇಂತಹ ಭೀಕರ ಪರಿಸ್ಥಿತಿ ಇದ್ದರೂ ಕೃಷಿ ಇಲಾಖೆಗೆ ಪೂರ್ಣ ಪ್ರಮಾಣದ ಸಚಿವರೇ ಇಲ್ಲದಿರುವುದು ಅತ್ಯಂತ ದೊಡ್ಡ ದುರಂತ. ಮುಖ್ಯಮಂತ್ರಿಗಳು ತಕ್ಷಣವೇ ಈ ನಿಟ್ಟಿನಲ್ಲಿ ಗಮನಹರಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು. ಬರಗಾಲದಿಂದ ಕಂಗಾಲಾಗಿರುವ ಅನ್ನದಾತರಿಗೆ ಪ್ರತಿ ಎಕರೆಗೆ ಕನಿಷ್ಠ 50,000 ರೂಪಾಯಿಗಳ ಪರಿಹಾರ ನೀಡಬೇಕು ಎಂದು ವಿಜಯೇಂದ್ರ ಕಟ್ಟುನಿಟ್ಟಾಗಿ ಆಗ್ರಹಿಸಿದರು.

ಅಧಿಕಾರಕ್ಕಾಗಿ ದೆಹಲಿಯತ್ತ ಆಡಳಿತ ಪಕ್ಷದ ಶಾಸಕರು

ಒಂದೆಡೆ ರಾಜ್ಯದ ಜನತೆ ಮಳೆ-ಬೆಳೆಯಿಲ್ಲದೆ ಕಷ್ಟಪಡುತ್ತಿದ್ದರೆ, ಇನ್ನೊಂದೆಡೆ ಆಡಳಿತ ಪಕ್ಷದ ಶಾಸಕರ ದಂಡು ಸಚಿವ ಸಂಪುಟ ವಿಸ್ತರಣೆಯ ಆಕಾಂಕ್ಷೆಯೊಂದಿಗೆ ದೆಹಲಿಯತ್ತ ಪ್ರಯಾಣ ಬೆಳೆಸಲು ಸಜ್ಜಾಗುತ್ತಿದೆ ಎಂದು ವಿಜಯೇಂದ್ರ ಟೀಕಿಸಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ವಿದೇಶ ಪ್ರವಾಸ ಮುಗಿಸಿ ಬಂದಿದ್ದರೂ, ಅವರು ಸುಸ್ತಾಗಿರುವ ಕಾರಣ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಲೇವಡಿ ಮಾಡಿದ ಅವರು, ಸರ್ಕಾರ ಮೊದಲು ಕೃಷಿ ಸಚಿವರನ್ನು ಘೋಷಿಸಿ, ಉಳಿದ ಸಚಿವರಿಗೆ ಜಿಲ್ಲಾ ಪ್ರವಾಸ ಮಾಡುವಂತೆ ಕಟ್ಟುನಿಟ್ಟಿನ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.

ಅಧಿವೇಶನದಲ್ಲಿ ಬಿಜೆಪಿ-ಜೆಡಿಎಸ್ ಜಂಟಿ ಹೋರಾಟ

ಮುಂಬರುವ 6ನೇ ತಾರೀಖಿನಿಂದ ಆರಂಭವಾಗಲಿರುವ ಜಂಟಿ ಸದನ ಅಧಿವೇಶನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಟ್ಟಾಗಿ, ಒಗ್ಗಟ್ಟಿನಿಂದ ಆಡಳಿತ ಪಕ್ಷವನ್ನು ಎದುರಿಸಲಿವೆ. ಕಾಂಗ್ರೆಸ್ ಸರ್ಕಾರದ ರೈತವಿರೋಧಿ ನಿಲುವು ಹಾಗೂ ನೀತಿಗಳ ವಿರುದ್ಧ ಉಭಯ ಪಕ್ಷಗಳ ಶಾಸಕರೊಂದಿಗೆ ಚರ್ಚಿಸಿ ಸದನದ ಒಳಗೂ ಮತ್ತು ಹೊರಗೂ ತಕ್ಕ ಪಾಠ ಕಲಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಕಾವೇರಿ ವಿವಾದದ ಕುರಿತು ಮಾತನಾಡಿದ ಅವರು, “ಕಾವೇರಿ ಕೊಳ್ಳದ ನಮ್ಮದೇ ರಾಜ್ಯದ ರೈತರಿಗೆ ಕೃಷಿ ಇರಲಿ, ಕುಡಿಯಲು ಕೂಡ ಸರಿಯಾಗಿ ನೀರಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಕೇಂದ್ರದಲ್ಲಿರುವ ತಮ್ಮ ಮಿತ್ರ ಪಕ್ಷವನ್ನು ತೃಪ್ತಿಪಡಿಸಲು ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಮುಂದಾಗಿರುವ ಸರ್ಕಾರದ ಕ್ರಮ ಅಕ್ಷಮ್ಯ ಅಪರಾಧವಾಗಿದೆ. ಸರ್ಕಾರ ಮೊದಲು ರಾಜ್ಯದ ರೈತರ ಹಿತರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು” ಎಂದು ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.

 


Share this with Friends

Related Post