ಮೈಸೂರು: “ರಾಜ್ಯದಲ್ಲಿ ಅಹಿಂದ ಹೆಸರು ಹೇಳಿಕೊಂಡು ಸಮಾಜದಲ್ಲಿ ವಿಷಬೀಜ ಬಿತ್ತುವ ಮತ್ತು ಜನರನ್ನು ಒಡೆಯುವ ಕಪಟ ನಾಟಕವನ್ನು ಕಾಂಗ್ರೆಸ್ ಸರ್ಕಾರ ಆಡುತ್ತಿದೆ. ದಶಕಗಳ ಕಾಲ ದೇಶ ಆಳಿದ ಕಾಂಗ್ರೆಸ್ಗೆ ಶೋಷಿತ ಮತ್ತು ಪೀಡಿತ ಸಮುದಾಯಗಳ ಕಣ್ಣೀರು ಒರೆಸಲು ಸಾಧ್ಯವಾಗಿಲ್ಲ,” ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
ಮೈಸೂರಿನ ಜಿ.ಕೆ. ಮೈದಾನದಲ್ಲಿ ಕಾಯಕ ಸಮುದಾಯಗಳ ಒಕ್ಕೂಟ ಹಮ್ಮಿಕೊಂಡಿದ್ದ ವಿಧಾನ ಪರಿಷತ್ ನೂತನ ಸದಸ್ಯ ರಘು ಆರ್. ಕೌಟಲ್ಯ ಅವರ ಅಭಿನಂದನಾ ಸಮಾವೇಶದಲ್ಲಿ ಮಾತನಾಡಿದ ಅವರು,12 ನೇ ಶತಮಾನದ ಕ್ರಾಂತಿಪುರುಷ ಬಸವಣ್ಣನವರನ್ನು ಸ್ಮರಿಸಿದ ವಿಜಯೇಂದ್ರ, “ಬಸವಣ್ಣನವರು ಅಂದೇ ಎಲ್ಲಾ ಕಾಯಕ ಸಮಾಜಗಳನ್ನು ಒಂದುಗೂಡಿಸಿ ಸಮಸಮಾಜದ ಕನಸು ಕಂಡಿದ್ದರು. ಅವರ ಆಶಯದಂತೆ ಮುಂದಿನ ದಿನಗಳಲ್ಲಿ ಕರ್ನಾಟಕದ ಎಲ್ಲಾ ಶ್ರಮಿಕ ಮತ್ತು ಕಾಯಕ ಸಮುದಾಯಗಳಿಗೆ ರಾಜಕೀಯ ಹಾಗೂ ಸಾಮಾಜಿಕ ಶಕ್ತಿ ತುಂಬಲು ಬಿಜೆಪಿ ಬದ್ಧವಾಗಿದೆ,” ಎಂದರು.
“ಅಂಬೇಡ್ಕರ್ ಹೆಸರಲ್ಲಿ ಕೇವಲ ವೋಟ್ ಬ್ಯಾಂಕ್ ರಾಜಕಾರಣ”
ಕಾಂಗ್ರೆಸ್ ಪಕ್ಷಕ್ಕೆ ಬಾಬಾಸಾಹೇಬ್ ಅಂಬೇಡ್ಕರ್, ಮಹಾತ್ಮಾ ಗಾಂಧಿ ಹಾಗೂ ದೇವರಾಜು ಅರಸು ಅವರ ಹೆಸರು ಹೇಳುವ ಯಾವುದೇ ನೈತಿಕತೆ ಇಲ್ಲ ಎಂದು ವಿಜಯೇಂದ್ರ ಆಕ್ಷೇಪಿಸಿದರು.
ಪ್ರಧಾನಿ ಮಾಡುವ ಅವಕಾಶವಿತ್ತು: “ಕಾಂಗ್ರೆಸ್ ಮನಸ್ಸು ಮಾಡಿದ್ದರೆ ಅಂದೇ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ದೇಶದ ಪ್ರಧಾನಿ ಮಾಡಬಹುದಿತ್ತು. ಆದರೆ ಅದನ್ನು ಮಾಡದ ಕಾಂಗ್ರೆಸ್, ಕೇವಲ ದಲಿತರ ಮತ್ತು ಹಿಂದುಳಿದವರ ಹೆಸರು ಹೇಳಿಕೊಂಡು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಾ ಬಂದಿದೆ. ದೇಶದಲ್ಲಿ ಬಡವರು ಇಂದಿಗೂ ಬಡವರಾಗಿಯೇ ಉಳಿಯಲು ಕಾಂಗ್ರೆಸ್ನ ತಪ್ಪು ನೀತಿಗಳೇ ಕಾರಣ,” ಎಂದು ದೂರಿದರು.
ಮೋದಿ ಆಡಳಿತದ ಶ್ಲಾಘನೆ: ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಅಧಿಕಾರ ಹಿಡಿದು ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎಂಬ ತತ್ವದಡಿ ಪ್ರತಿಯೊಂದು ವರ್ಗಕ್ಕೂ ನ್ಯಾಯ ಒದಗಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
“ಇದು ನರಸತ್ತ ಮತ್ತು ನಾಲಾಯಕ್ ಸರ್ಕಾರ”
ರಾಜ್ಯ ಸರ್ಕಾರದ ವಿರುದ್ಧ ಕಠಿಣ ಪದ ಬಳಸಿ ಆಕ್ರೋಶ ಹೊರಹಾಕಿದ ಅವರು, “ಅಹಿಂದ ಜಪ ಮಾಡಿಕೊಂಡು ಅಧಿಕಾರ ಅನುಭವಿಸುತ್ತಿರುವ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಸರ್ಕಾರದಲ್ಲಿ ದಲಿತರ ಹತ್ಯೆಗಳಾದರೂ ಯಾವುದೇ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಅಹಿಂದ ವರ್ಗಕ್ಕೆ ಅನ್ಯಾಯವಾದರೆ ಧ್ವನಿ ಎತ್ತದ ಈ ನರಸತ್ತ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಕಾಯಕ ಸಮುದಾಯಗಳು ತಕ್ಕ ಪಾಠ ಕಲಿಸಲಿವೆ. ಕೇವಲ ಅಲ್ಪಸಂಖ್ಯಾತರ ಓಲೈಕೆಯಲ್ಲಿ ನಿರತರಾಗಿರುವ ಕಾಂಗ್ರೆಸ್ನ ಈ ನಡೆಯನ್ನು ಭಗವಂತನೂ ಮೆಚ್ಚುವುದಿಲ್ಲ,” ಎಂದು ವಾಗ್ದಾಳಿ ನಡೆಸಿದರು.

