ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಿ.ಕೆ. ಶಿವಕುಮಾರ್ ಅವರಿಗೆ ಮುಂಬರುವ ಎರಡು ವರ್ಷಗಳ ಅವಧಿಯು ಆಡಳಿತಕ್ಕಿಂತ ಹೆಚ್ಚಾಗಿ ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುವ ದೊಡ್ಡ ಸವಾಲಾಗಿರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಯುವಿ. ವಿಜಯೇಂದ್ರ ವಿಶ್ಲೇಷಿಸಿದ್ದಾರೆ. ಪ್ರಸ್ತುತ ಕಾಂಗ್ರೆಸ್ ಸರ್ಕಾರ ಎಷ್ಟು ದಿನ ಇರಲಿದೆ ಎಂಬುದೇ ಸಾರ್ವಜನಿಕರಲ್ಲಿ ಮೂಡಿರುವ ದೊಡ್ಡ ಪ್ರಶ್ನೆಯಾಗಿದ್ದು, ಹೊಸ ಸಿಎಂಗೂ ಯಾವುದೇ ‘ಹನಿಮೂನ್ ಅವಧಿ’ ಸಿಕ್ಕಿಲ್ಲ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗುವ ಮೂಲಕ ತಮ್ಮ ಜೀವನದ ದೊಡ್ಡ ಆಸೆಯನ್ನು ಈಡೇರಿಸಿಕೊಂಡಿದ್ದಾರೆ. ಆದರೆ, ಸಚಿವ ಸಂಪುಟದ ಪಟ್ಟಿಯನ್ನು ನೋಡಿದರೆ ಇದು ಡಿಕೆಶಿ ಕ್ಯಾಬಿನೆಟ್ ಅಲ್ಲ, ಬದಲಾಗಿ ಸಿದ್ದರಾಮಯ್ಯನವರ ಕ್ಯಾಬಿನೆಟ್ ಎಂಬುದು ಸ್ಪಷ್ಟವಾಗುತ್ತದೆ. ಮಾಜಿ ಸಿಎಂ ಸಿದ್ದರಾಮಯ್ಯನವರು ಕುರ್ಚಿಯಿಂದ ಇಳಿಯುವ ಮುನ್ನವೇ ಹಿಂದುಳಿದ ವರ್ಗಗಳ ಜಾತಿ ಜನಗಣತಿ ವರದಿಯನ್ನು ಸ್ವೀಕರಿಸುವ ಮೂಲಕ ನೂತನ ಮುಖ್ಯಮಂತ್ರಿಗಳ ಮುಂದೆ ದೊಡ್ಡ ರಾಜಕೀಯ ಗೂಗ್ಲಿ ಎಸೆದಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಪಾದಯಾತ್ರೆ ಸುಲಭ, ಆಡಳಿತ ಕಷ್ಟ:
ಮೇಕೆದಾಟು ಯೋಜನೆ ಕುರಿತು ಮಾತನಾಡಿದ ವಿಜಯೇಂದ್ರ, ವಿರೋಧ ಪಕ್ಷದಲ್ಲಿದ್ದಾಗ ಮೇಕೆದಾಟು ಹೆಸರಿನಲ್ಲಿ ಪಾದಯಾತ್ರೆ ಮಾಡುವುದು ಅತ್ಯಂತ ಸುಲಭ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು 3 ವರ್ಷಗಳೇ ಕಳೆದಿದ್ದರೂ, ಅವರದೇ ಮಿತ್ರ ಪಕ್ಷವಾದ ಡಿಎಂಕೆ ನೆರೆ ರಾಜ್ಯ ತಮಿಳುನಾಡಿನಲ್ಲಿ ಆಡಳಿತ ನಡೆಸುತ್ತಿದ್ದಾಗಲೂ ಈ ನೀರಾವರಿ ಸಮಸ್ಯೆಯನ್ನು ಬಗೆಹರಿಸಲು ಇವರಿಂದ ಸಾಧ್ಯವಾಗಲಿಲ್ಲ ಎಂದಿದ್ದಾರೆ. ಇನ್ನು ಕಮಿಷನ್ ಆರೋಪಗಳ ಕುರಿತು ಕಾಲವೇ ಉತ್ತರ ನೀಡಲಿದ್ದು, ಈಗ ಸಿಕ್ಕಿರುವ ಅವಕಾಶದಲ್ಲಾದರೂ ಅವರು ಕನಿಷ್ಠ ಒಳ್ಳೆಯ ಆಡಳಿತ ನೀಡಲಿ ಎಂದು ಹಾರೈಸಿದ್ದಾರೆ.
ನನ್ನ ಹೆಸರು ಹೇಳದಿದ್ದರೆ ಕೆಲವರಿಗೆ ತಿಂದಿದ್ದು ಅರಗಲ್ಲ:
ತಮ್ಮ ವಿರುದ್ಧ ಕೇಳಿಬರುತ್ತಿರುವ ರಾಜಕೀಯ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ವಿಜಯೇಂದ್ರ, ಕೆಲವು ನಾಯಕರಿಗೆ ‘ವಿಜಯೇಂದ್ರ’ ಎಂಬ ಹೆಸರು ಹೇಳದಿದ್ದರೆ ತಿಂದ ಅನ್ನ ಅರಗುವುದಿಲ್ಲ ಮತ್ತು ಮಾಧ್ಯಮಗಳಲ್ಲಿ ಅವರಿಗೆ ಪ್ರಚಾರ ಸಿಗುವುದಿಲ್ಲ. ಅಂತಹವರ ಹೇಳಿಕೆಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ರಾಜ್ಯ ಅಧ್ಯಕ್ಷನಾಗಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾರ್ಯಕರ್ತರಿಗೆ ಶಕ್ತಿ ತುಂಬಿ, ಮುಂದೆ ಯಾವಾಗ ವಿಧಾನಸಭೆ ಚುನಾವಣೆ ನಡೆದರೂ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವುದೇ ನನ್ನ ಏಕೈಕ ಕಾರ್ಯತಂತ್ರ ಎಂದು ಸವಾಲು ಹಾಕಿದ್ದಾರೆ.

