ಬೆಂಗಳೂರು: ಆರ್ಥಿಕ ಸಂಕಷ್ಟದ ನಡುವೆಯೂ ಶಿಕ್ಷಣದ ಮೂಲಕ ಬದುಕನ್ನು ರೂಪಿಸಿಕೊಳ್ಳಲು ಹಠಕ್ಕೆ ಬಿದ್ದಿದ್ದ ಉತ್ತರ ಕರ್ನಾಟಕದ ಹೆಣ್ಣುಮಗಳೊಬ್ಬಳ ಕನಸಿಗೆ ಸಚಿವ ಬೈರತಿ ಸುರೇಶ್ ಆಸರೆಯಾಗಿದ್ದಾರೆ. ಆರ್ಥಿಕ ಅಡಚಣೆಯಿಂದ ಓದು ನಿಲ್ಲುವ ಆತಂಕದಲ್ಲಿದ್ದ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕುರುಬಕೇಲಾಗಿ ಗ್ರಾಮದ ನಿವಾಸಿಯಾದ ಅಂಬಿಕಾ ಎಂಬ ವಿದ್ಯಾರ್ಥಿನಿಯ ನೆರವಿಗೆ ಧಾವಿಸಿ, ಆಕೆಯ ಕಾಲೇಜು ಶುಲ್ಕವನ್ನು ಸಚಿವರು ತಮ್ಮ ಸ್ವಂತ ಹಣದಿಂದ ಭರಿಸಿದ್ದಾರೆ.
ಬೀದರ್‌ನ ಶಹೀನ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಅಂಬಿಕಾ, ಕಡು ಬಡತನದ ಹಿನ್ನೆಲೆಯಿಂದ ಬಂದವರು. ಹಳ್ಳಿಯ ಸೌಲಭ್ಯಗಳ ಕೊರತೆ ಮತ್ತು ಕೌಟುಂಬಿಕ ಆರ್ಥಿಕ ಮುಗ್ಗಟ್ಟಿನ ನಡುವೆಯೂ ಆಕೆ ಓದಿನಲ್ಲಿ ಸದಾ ಮುಂಚೂಣಿಯಲ್ಲಿದ್ದರು. ಆದರೆ ಈ ವರ್ಷ ಕಾಲೇಜಿನ ಶುಲ್ಕ ಪಾವತಿಸಲು ತಂದೆ-ತಾಯಿಯ ಬಳಿ ಹಣವಿಲ್ಲದಿದ್ದಾಗ, ಶಿಕ್ಷಣ ಅರ್ಧಕ್ಕೆ ನಿಲ್ಲುವ ಭೀತಿ ಎದುರಾಗಿತ್ತು. ಯಾರದಾದರೂ ಸಹಾಯ ಸಿಗಬಹುದು ಎಂಬ ಆಸೆಯಿಂದ ಅಂಬಿಕಾ ಬೆಂಗಳೂರಿನಲ್ಲಿರುವ ಸಚಿವರ ಗೃಹ ಕಚೇರಿಗೆ ಬಂದು ತಮ್ಮ ಅಳಲನ್ನು ತೋಡಿಕೊಂಡಿದ್ದರು.
ವಿದ್ಯಾರ್ಥಿನಿಯ ಕಣ್ಣೀರ ಕಥೆ ಮತ್ತು ಓದಿನ ಮೇಲಿದ್ದ ಅಪಾರ ಆಸಕ್ತಿಯನ್ನು ಗಮನಿಸಿದ ಸಚಿವ ಬೈರತಿ ಸುರೇಶ್ ಅವರು ಕ್ಷಣವೂ ಯೋಚಿಸದೆ ಮಾನವೀಯತೆ ಮೆರೆದರು. ಸರ್ಕಾರದ ಪ್ರಕ್ರಿಯೆಗಳಿಗೆ ಕಾಯದೆ, ತಕ್ಷಣವೇ ತಮ್ಮ ವೈಯಕ್ತಿಕ ಖಾತೆಯಿಂದ ಕಾಲೇಜು ಶುಲ್ಕದ ಮೊತ್ತದ ಚೆಕ್ ಅನ್ನು ಸಿದ್ಧಪಡಿಸಿ ಅಂಬಿಕಾ ಕೈಗಿಟ್ಟರು. ಸಚಿವರ ಈ ದಿಢೀರ್ ಸ್ಪಂದನೆ ಮತ್ತು ಸಹೃದಯತೆಯಿಂದ ಅಂಬಿಕಾ ಅವರ ಕಣ್ಣಾಲಿಗಳು ಆನಂದಬಾಷ್ಪದಿಂದ ತುಂಬಿಬಂದವು.
“ಹಣದ ಕೊರತೆಯಿಂದಾಗಿ ಯಾವುದೇ ಹೆಣ್ಣುಮಗಳು ಶಿಕ್ಷಣದಿಂದ ವಂಚಿತಳಾಗಬಾರದು. ಹಳ್ಳಿಗಾಡಿನ ಪ್ರತಿಭೆಗಳು ಉನ್ನತ ಮಟ್ಟಕ್ಕೆ ಬೆಳೆಯಬೇಕು” ಎಂದು ಹೇಳಿದ ಸಚಿವರು, ಚೆಕ್ ಹಸ್ತಾಂತರಿಸಿ ಅಂಬಿಕಾ ಅವರ ಮುಂದಿನ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು. ರಾಜಕಾರಣ ಹಾಗೂ ಆಡಳಿತದ ಸದಾ ಬ್ಯುಸಿ ವೇಳೆಯ ನಡುವೆಯೂ ಬಡ ವಿದ್ಯಾರ್ಥಿನಿಯೊಬ್ಬಳ ಶೈಕ್ಷಣಿಕ ಬದುಕಿಗೆ ಬೆಳಕಾದ ಸಚಿವರ ಈ ನಡೆ ಸಾರ್ವಜನಿಕ ವಲಯದಲ್ಲಿ ತೀವ್ರ ಮೆಚ್ಚುಗೆಗೆ ಪಾತ್ರವಾಗಿದೆ.

