ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ಪುನಾರಚನೆಯ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿದ್ದು, ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರು ತಮಗೂ ಸಚಿವ ಸ್ಥಾನ ನೀಡಬೇಕೆಂದು ಬಹಿರಂಗವಾಗಿ ಆಗ್ರಹಿಸಿದ್ದಾರೆ.
ಅಶೋಕ್ ಪಟ್ಟಣ್ ನೇತೃತ್ವದಲ್ಲಿ ದೆಹಲಿಗೆ ತೆರಳುತ್ತಿರುವ ಸುಮಾರು 20ಕ್ಕೂ ಹೆಚ್ಚು ಹಿರಿಯ ಶಾಸಕರ ತಂಡದಲ್ಲಿ ಜಯಚಂದ್ರ ಅವರೂ ಗುರುತಿಸಿಕೊಂಡಿದ್ದು, ಹೈಕಮಾಂಡ್ ಮೇಲೆ ಒತ್ತಡ ಹೇರಲು ಸಜ್ಜಾಗಿದ್ದಾರೆ.ಈ ಸಂಬಂಧ ಮಾತನಾಡಿದ ಜಯಚಂದ್ರ,ಸಂಪುಟದಲ್ಲಿ ಹೊಸ ಮುಖಗಳಿಗೆ ಮತ್ತು ದೀರ್ಘಕಾಲದಿಂದ ಪಕ್ಷಕ್ಕಾಗಿ ಶ್ರಮಿಸಿದ ಹಿರಿಯರಿಗೆ ಆದ್ಯತೆ ನೀಡುವ ಸಮಯ ಬಂದಿದೆ ಎಂದು ಜಯಚಂದ್ರ ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ಸಚಿವರಾಗಿರುವವರು ಮೂರು ವರ್ಷ ಪೂರೈಸಿದ್ದಾರೆ. ಈಗ ಎರಡನೇ ಹಂತದಲ್ಲಿ ಹಿರಿಯ ಶಾಸಕರಿಗೂ ಆಡಳಿತದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಬೇಕು. ಹಲವು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡಿರುವ ಹಿರಿಯರನ್ನು ಕಡೆಗಣಿಸಬಾರದು ಎಂದರು.
ದೆಹಲಿ ವರಿಷ್ಠರ ಭೇಟಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅನುಮತಿಯ ಮೇರೆಗೆ ನಾವು ದೆಹಲಿಗೆ ತೆರಳಿ ಎಐಸಿಸಿ (AICC) ನಾಯಕರನ್ನು ಭೇಟಿಯಾಗುತ್ತಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಚಿವ ಸ್ಥಾನದ ಆಕಾಂಕ್ಷಿಗಳ ಈ ದಿಢೀರ್ ದೆಹಲಿ ಪ್ರವಾಸವು ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದು ಈಗ ಕಾದು ನೋಡಬೇಕಿದೆ.

