Sat. Jun 13th, 2026

ಅತಿ ದೀರ್ಘಕಾಲ ಆಳಿದ ಪ್ರಧಾನಿ ಮೋದಿ, ಇತಿಹಾಸ ತಿಳಿಯದ ಕಾಂಗ್ರೆಸ್ಸಿಗರು ಅವಿವೇಕಿಗಳು: ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ

Share this with Friends

ಕೋಲಾರ: ದೇಶವನ್ನು ಅತಿ ದೀರ್ಘಕಾಲ ಆಳಿದ ಪ್ರಧಾನಿಗಳ ವಿಷಯದಲ್ಲಿ ಕಾಂಗ್ರೆಸ್ ನಾಯಕರಿಗೆ ಯಾವುದೇ ಸ್ಪಷ್ಟತೆ ಇಲ್ಲ ಎಂದು ವಿಧಾನ ಪರಿಷತ್ತಿನ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆ ಬಂದ ನಂತರ ಸತತವಾಗಿ ಚುನಾವಣೆ ಎದುರಿಸಿ, ಗೆಲುವು ಸಾಧಿಸಿ ದೀರ್ಘಕಾಲ ದೇಶವನ್ನಾಳಿದ ದಾಖಲೆ ನರೇಂದ್ರ ಮೋದಿ ಅವರ ಹೆಸರಲ್ಲಿದೆ. ಮೊದಲು ಕಾಂಗ್ರೆಸ್ ಪಕ್ಷದವರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸುವುದನ್ನು ಕಲಿಯಲಿ ಎಂದು ಅವರು ಆಗ್ರಹಿಸಿದ್ದಾರೆ.

ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅಥವಾ ಮನಮೋಹನ್ ಸಿಂಗ್ ಅವರಿಗಿಂತಲೂ ಹೆಚ್ಚು ದಿನ ಮೋದಿ ಅವರು ಪ್ರಜಾಸತ್ತಾತ್ಮಕವಾಗಿ ಆಡಳಿತ ನಡೆಸಿದ ದಾಖಲೆ ಹೊಂದಿದ್ದಾರೆ. ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಕೆಪಿಸಿಸಿ ನಾಯಕರು ಸೇರಿದಂತೆ ಹಲವರು ರಾಜಕೀಯ ಟೀಕೆ ಮಾಡುತ್ತಿದ್ದಾರೆ. ಈ ವಿಷಯದಲ್ಲಿ ಕಾಂಗ್ರೆಸ್ ನಾಯಕರು ತಮ್ಮ ಅವಿವೇಕತನ ಪ್ರದರ್ಶಿಸುವುದನ್ನು ನಿಲ್ಲಿಸಲಿ ಎಂದು ತಿರುಗೇಟು ನೀಡಿದರು.

ಬ್ರಿಟಿಷರ ಪ್ರೀತಿಯಿಂದ ನೆಹರು ಪ್ರಧಾನಿಯಾದರು:

ನೆಹರು ಅವರ ಆಡಳಿತದ ಇತಿಹಾಸವನ್ನು ಕೆದಕಿದ ಛಲವಾದಿ ನಾರಾಯಣಸ್ವಾಮಿ, “ನೆಹರು ಅವರು ದೇಶದ ಮೊದಲ ಪ್ರಧಾನಿ ಎಂಬುದು ನಿಜ. ಆದರೆ ಅವರು ಅಧಿಕಾರ ವಹಿಸಿಕೊಂಡಾಗ ದೇಶದಲ್ಲಿ ಪ್ರಜಾಪ್ರಭುತ್ವವಾಗಲಿ, ಸಂವಿಧಾನವಾಗಲಿ ಜಾರಿಯಲ್ಲಿರಲಿಲ್ಲ. ಅವರು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಪ್ರಧಾನಿಯಾದವರಲ್ಲ. ಬ್ರಿಟಿಷ್ ಸರ್ಕಾರ ಅವರನ್ನು ನೇಮಕ ಮಾಡಿತ್ತು. ಅವರ ಆಯ್ಕೆಗೆ ಒಮ್ಮತದ ತೀರ್ಮಾನವೂ ಇರಲಿಲ್ಲ. ಕೇವಲ ಕೆಲವರ ಆಶೀರ್ವಾದ ಮತ್ತು ಬ್ರಿಟಿಷರ ಮೇಲಿನ ಪ್ರೀತಿಯಿಂದಾಗಿ ನೆಹರು ಪ್ರಧಾನಿಯಾದರು. ಅದು ಅಧಿಕೃತ ಕಾಂಗ್ರೆಸ್ ಸರ್ಕಾರವೂ ಆಗಿರಲಿಲ್ಲ, ಬದಲಿಗೆ ಸ್ವಾತಂತ್ರ್ಯ ಹೋರಾಟಗಾರರ ತಾತ್ಕಾಲಿಕ ವ್ಯವಸ್ಥೆಯಷ್ಟೇ ಆಗಿತ್ತು. ಈ ಸತ್ಯ ತಿಳಿಯದೆ ಕಾಂಗ್ರೆಸ್ ಸುಳ್ಳು ಹೇಳುತ್ತಿದೆ” ಎಂದು ಆಪಾದಿಸಿದರು.

ಇಂದಿರಾ ಆಡಳಿತ ಪ್ರಜಾಪ್ರಭುತ್ವ ವಿರೋಧಿ:

ಇಂದಿರಾ ಗಾಂಧಿ ಅವರ ಅಧಿಕಾರಾವಧಿಯ ಕುರಿತು ಮಾತನಾಡಿದ ಅವರು, “ಇಂದಿರಾ ಗಾಂಧಿ ಅವರು ದೀರ್ಘಕಾಲ ಆಡಳಿತ ನಡೆಸಿದ್ದು ನಿಜ. ಆದರೆ ತಮ್ಮ ಅಧಿಕಾರದ ಅವಧಿಯಲ್ಲಿ ಎರಡೂವರೆ ವರ್ಷಗಳ ಕಾಲ ಸಂವಿಧಾನವನ್ನು ತಿರುಚಿ, ದ್ರೋಹ ಬಗೆದರು. ದೇಶದ ಮೇಲೆ ತುರ್ತು ಪರಿಸ್ಥಿತಿ (ಎಮರ್ಜೆನ್ಸಿ) ಹೇರಿ, ವಿರೋಧಪಕ್ಷದ ನಾಯಕರನ್ನು ಜೈಲಿಗೆ ತಳ್ಳಿ ಸರ್ವಾಧಿಕಾರ ನಡೆಸಿದರು. ಅದನ್ನು ಪ್ರಜಾಪ್ರಭುತ್ವ ಎನ್ನಲು ಸಾಧ್ಯವಿಲ್ಲ. ಹೀಗಾಗಿ ಅವರ ಆಡಳಿತದ ಅವಧಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳಲು ಬರುವುದಿಲ್ಲ. ದೇಶಕ್ಕೆ ಕಳಂಕ ತರುವ ಕೆಲಸವನ್ನು ನೆಹರು ಮತ್ತು ಇಂದಿರಾ ಗಾಂಧಿ ಮಾಡಿದ್ದಾರೆ” ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ನರೇಂದ್ರ ಮೋದಿ ಅವರು ಸಂಪೂರ್ಣವಾಗಿ ಸಂವಿಧಾನಾತ್ಮಕವಾಗಿ, ಚುನಾವಣೆಯಲ್ಲಿ ಸಾರ್ವಜನಿಕರ ಬಹುಮತ ಪಡೆದು ಗೆದ್ದು ಅತ್ಯಂತ ಹೆಚ್ಚು ದಿನ ದೇಶವನ್ನು ಆಳಿದ್ದಾರೆ. ಹೀಗಿರುವಾಗ ಇದನ್ನು ಪ್ರಶ್ನೆ ಮಾಡಲು ಕಾಂಗ್ರೆಸ್‌ನವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಸ್ಪಷ್ಟಪಡಿಸಿದರು.

ಇನ್ನು ಎರಡು ಅವಧಿಗೆ ಮೋದಿ ಅವರೇ ಪ್ರಧಾನಿ: 

ಆರ್ಥಿಕತೆ ಮತ್ತು ಆಡಳಿತದ ವಿಷಯದಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರಗಳಿಗೂ ಹಾಗೂ ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂದು ವಿಧಾನ ಪರಿಷತ್ತಿನ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ಕಾಂಗ್ರೆಸ್ ತನ್ನ ಆಡಳಿತಾವಧಿಯಲ್ಲಿ ದೇಶಕ್ಕೆ ಭ್ರಷ್ಟಾಚಾರದ ವ್ಯವಸ್ಥೆಯನ್ನು ಕೊಡುಗೆಯಾಗಿ ನೀಡಿತ್ತು ಎಂದು ಅವರು ಗಂಭೀರ ಆರೋಪ ಮಾಡಿದರು.

ಜಾಗತಿಕ ಯುದ್ಧದ ವಾತಾವರಣದಿಂದಾಗಿ ವಿಶ್ವಮಟ್ಟದಲ್ಲಿ ಅಡುಗೆ ಅನಿಲದ ಸಮಸ್ಯೆ ಎದುರಾಗುತ್ತಿದೆ. ಆದರೆ ಇತಿಹಾಸ ನೋಡುವುದಾದರೆ, ಮನಮೋಹನ್ ಸಿಂಗ್ ಅವರ ಅಧಿಕಾರಾವಧಿಯಲ್ಲಿ ವರ್ಷಕ್ಕೆ ಕೇವಲ ಆರು ಸಿಲಿಂಡರ್ ಮಾತ್ರ ನೀಡಲು ತೀರ್ಮಾನಿಸಲಾಗಿತ್ತು. ಅದನ್ನು ಅವರದೇ ಪಕ್ಷದ ರಾಹುಲ್ ಗಾಂಧಿ ಸಹಿಸಿಕೊಳ್ಳಲಾಗದೆ ಸರ್ಕಾರದ ಆದೇಶದ ಪ್ರತಿಯನ್ನು ಹರಿದು ಬಿಸಾಕಿದ್ದರು. ಪ್ರಸ್ತುತ ಜಾಗತಿಕ ಯುದ್ಧದ ವಾತಾವರಣ ತಿಳಿಯಾದ ನಂತರ ಅಡುಗೆ ಅನಿಲದ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಆಡಳಿತದ ಕಪ್ಪು ದಿನಗಳು:

ಸ್ವಾತಂತ್ರ್ಯ ಬಂದ ನಂತರ ದೇಶದಲ್ಲಿ 2000ನೇ ಇಸವಿಯವರೆಗಿನ ಕಾಲಘಟ್ಟವು ಅಧಿಕಾರದ ಕಪ್ಪು ದಿನಗಳಾಗಿದ್ದವು ಎಂದು ಬಣ್ಣಿಸಿದ ಅವರು, “ಆಗ ಜನರಿಗೆ ರಾಜಕೀಯ ಪ್ರಜ್ಞೆ ಇರಲಿಲ್ಲ. ಇಂದಿರಾ ಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರ ಆಡಳಿತಾವಧಿಯಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳ ಭ್ರಷ್ಟಾಚಾರ ನಡೆದಿತ್ತು. ಆದರೆ ಇಂದು ದೇಶದಲ್ಲಿ ನರೇಂದ್ರ ಮೋದಿ ಅವರು ಪಾರದರ್ಶಕ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿದ್ದಾರೆ. ಇಂದು ಜನರಲ್ಲಿ ಸಾಮಾಜಿಕ ಪ್ರಜ್ಞೆ ಹೆಚ್ಚಾಗಿದ್ದು, ದೇಶದಲ್ಲಿ ನಡೆಯುವ ಪ್ರತಿಯೊಂದು ವ್ಯವಹಾರವೂ ಜನರಿಗೆ ತಿಳಿಯುತ್ತಿದೆ” ಎಂದರು.

11ನೇ ಸ್ಥಾನದಿಂದ 4ನೇ ಸ್ಥಾನಕ್ಕೇರಿದ ಭಾರತೀಯ ಆರ್ಥಿಕತೆ:

ಕಾಂಗ್ರೆಸ್ ಆಡಳಿತಾವಧಿಯಲ್ಲಿ ಜಾಗತಿಕ ಆರ್ಥಿಕತೆಯಲ್ಲಿ 11ನೇ ಸ್ಥಾನದಲ್ಲಿದ್ದ ಭಾರತ, ಇಂದು ಮೋದಿ ಅವರ ಸಮರ್ಥ ನಾಯಕತ್ವದಿಂದಾಗಿ 4ನೇ ಸ್ಥಾನಕ್ಕೆ ಜಿಗಿದಿದೆ. ದೇಶದಲ್ಲಿ ರಸ್ತೆ ಮತ್ತು ರೈಲ್ವೆ ಸಂಪರ್ಕ ಜಾಲ ಅಭೂತಪೂರ್ವವಾಗಿ ಸುಧಾರಣೆಯಾಗಿದೆ. ಕಾಂಗ್ರೆಸ್ ಪಕ್ಷವು ದೇಶದ ಅಭಿವೃದ್ಧಿಯನ್ನು ಹಳ್ಳಕ್ಕೆ ತಳ್ಳಿತ್ತು, ಅದನ್ನು ಮೇಲೆ ತರಲು ಬಿಜೆಪಿಗೆ ಇಷ್ಟು ವರ್ಷಗಳು ಬೇಕಾಯಿತು. ಒಂದು ವೇಳೆ ಆರಂಭದಿಂದಲೂ ಬಿಜೆಪಿ ಅಧಿಕಾರದಲ್ಲಿದ್ದಿದ್ದರೆ ದೇಶದ ಅಭಿವೃದ್ಧಿಯ ವೇಗ ಇನ್ನೂ ಹೆಚ್ಚಿರುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟರು.

2047ಕ್ಕೆ ಭಾರತ ನಂಬರ್ ಒನ್:

ಮುಂದಿನ ದಿನಗಳಲ್ಲೂ ನರೇಂದ್ರ ಮೋದಿ ಅವರೇ ದೇಶದ ನಾಯಕರಾಗಿ ಮುಂದುವರಿಯಲಿದ್ದಾರೆ ಎಂದ ಅವರು, “ದೇಶದ ಉನ್ನತಿಗಾಗಿ ನರೇಂದ್ರ ಮೋದಿ ಅವರು ಇನ್ನೂ ಎರಡು ಅವಧಿಗೆ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ. ಅವರಿಗೆ ಇನ್ನಷ್ಟು ಶಕ್ತಿ ಸಿಗಲಿ ಎಂದು ನಾವೆಲ್ಲರೂ ಪ್ರಾರ್ಥಿಸುತ್ತಿದ್ದೇವೆ. ಅವರ ನಾಯಕತ್ವದಲ್ಲಿ 2047ರ ವೇಳೆಗೆ ಭಾರತವು ಜಗತ್ತಿನ ನಂಬರ್ ಒನ್ ಆರ್ಥಿಕತೆಯಾಗಿ ಹೊರಹೊಮ್ಮಲಿದೆ” ಎಂದು ದೃಢ ವಿಶ್ವಾಸ ವ್ಯಕ್ತಪಡಿಸಿದರು.

 


Share this with Friends

Related Post