Thu. Aug 13th, 2026

ಮೇಕೆದಾಟು ಕೇವಲ ನೀರಾವರಿಯಲ್ಲ, ಭವಿಷ್ಯದ ಕುಡಿಯುವ ನೀರಿನ ಆಸರೆ: ಸಚಿವ ಎನ್.ಚಲುವರಾಯಸ್ವಾಮಿ

Share this with Friends

ಬೆಂಗಳೂರು: ಮೇಕೆದಾಟು ಯೋಜನೆ ಕೇವಲ ಒಂದು ಸಾಮಾನ್ಯ ನೀರಾವರಿ ಯೋಜನೆಯಲ್ಲ; ಇದು ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರ ಪ್ರದೇಶಗಳ ಮುಂದಿನ ಹಲವು ದಶಕಗಳ ಕುಡಿಯುವ ನೀರಿನ ಭವಿಷ್ಯಕ್ಕೆ ಸಂಬಂಧಿಸಿದ ಜೀವನಾಡಿಯಾಗಿದೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಅವರು ದೃಢವಾಗಿ ಪ್ರತಿಪಾದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯೋಜನೆಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳನ್ನು ಕಾನೂನುಬದ್ಧ ಹಾಗೂ ವೈಜ್ಞಾನಿಕವಾಗಿ ಮುಂದುವರಿಸಿಕೊಂಡು ಹೋಗಬೇಕು ಎಂದು ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು, “ಕರ್ನಾಟಕದ ಜನರ ಕುಡಿಯುವ ನೀರಿನ ಹಕ್ಕು ಮತ್ತು ರಾಜ್ಯದ ಹಿತಾಸಕ್ತಿಯನ್ನು ಯಾವುದೇ ಕಾರಣಕ್ಕೂ ಕಡೆಗಣಿಸಲು ಅಥವಾ ಬಿಟ್ಟುಕೊಡಲು ಸಾಧ್ಯವಿಲ್ಲ. ಯೋಜನೆಯ ಪ್ರತಿಯೊಂದು ಹಂತದಲ್ಲೂ ಕಾನೂನು ಮತ್ತು ತಾಂತ್ರಿಕ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಿಕೊಂಡು, ಕೇಂದ್ರದಿಂದ ಅಗತ್ಯವಿರುವ ಪರಿಸರ ಮತ್ತು ಇತರೆ ಅನುಮತಿಗಳನ್ನು ಪಡೆಯುವ ಪ್ರಕ್ರಿಯೆಗೆ ವೇಗ ನೀಡಬೇಕು” ಎಂದು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.

ಅಧಿಕಾರಿಗಳಿಂದ ಸಮಗ್ರ ಪ್ರಸ್ತಾವನೆಗೆ ಸೂಚನೆ

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಇದುವರೆಗೆ ಕೈಗೊಂಡಿರುವ ಕ್ರಮಗಳು, ಪರಿಸರ ಇಲಾಖೆ ಸೇರಿದಂತೆ ವಿವಿಧ ಹಂತಗಳಲ್ಲಿ ಬಾಕಿ ಇರುವ ಅನುಮತಿಗಳು ಹಾಗೂ ಮುಂದಿನ ದಿನಗಳಲ್ಲಿ ಇಡಬೇಕಾದ ಹೆಜ್ಜೆಗಳ ಕುರಿತು ಸಮಗ್ರ ಪ್ರಸ್ತಾವನೆಯನ್ನು ತಕ್ಷಣವೇ ಸಿದ್ಧಪಡಿಸಿ ನೀಡುವಂತೆ ಸಚಿವರು ಸೂಚಿಸಿದರು. ಯೋಜನೆಗೆ ಸಂಬಂಧಿಸಿದ ಜಲಸಂಪನ್ಮೂಲ, ಅರಣ್ಯ ಸೇರಿದಂತೆ ಎಲ್ಲಾ ಇಲಾಖೆಗಳ ನಡುವೆ ಉತ್ತಮ ಸಮನ್ವಯ ಸಾಧಿಸಬೇಕು. ಕೇಂದ್ರ ಸರ್ಕಾರದ ಸಂಬಂಧಿತ ಇಲಾಖೆಗಳು ಹಾಗೂ ಪ್ರಾಧಿಕಾರಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕಾವೇರಿ ಕೊಳ್ಳದಲ್ಲಿ ಕರ್ನಾಟಕದ ಕಾನೂನುಬದ್ಧ ನಿಲುವನ್ನು ಪರಿಣಾಮಕಾರಿಯಾಗಿ ಮಂಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಕುಡಿಯುವ ನೀರಿಗೆ ಮೊದಲ ಆದ್ಯತೆ

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರ ಪ್ರದೇಶಗಳಲ್ಲಿ ಜನಸಂಖ್ಯೆ ತೀವ್ರವಾಗಿ ಹೆಚ್ಚುತ್ತಿರುವುದರಿಂದ ಭವಿಷ್ಯದ ಕುಡಿಯುವ ನೀರಿನ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಈಗಿನಿಂದಲೇ ದೀರ್ಘಾವಧಿಯ ಯೋಜನೆಗಳನ್ನು ರೂಪಿಸಬೇಕಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು. ಮೇಕೆದಾಟು ಯೋಜನೆಯಂತಹ ಮಹತ್ವದ ಯೋಜನೆಗಳನ್ನು ಕೇವಲ ಇಂದಿನ ಅಗತ್ಯಕ್ಕಾಗಿ ಮಾತ್ರವಲ್ಲದೆ ಮುಂದಿನ ಹಲವು ದಶಕಗಳ ನೀರಿನ ಬೇಡಿಕೆಯನ್ನು ಮುನ್ಸೂಚನೆಯಾಗಿಟ್ಟುಕೊಂಡು ಪರಿಗಣಿಸಬೇಕಾಗಿದೆ.

“ನೀರು ಜನರ ಮೂಲಭೂತ ಅಗತ್ಯವಾಗಿದ್ದು, ಕುಡಿಯುವ ನೀರಿನ ವಿಚಾರದಲ್ಲಿ ಯಾವುದೇ ರಾಜಕೀಯ ಭಿನ್ನಾಭಿಪ್ರಾಯಗಳಿಗಿಂತ ಜನರ ಹಿತವೇ ಮುಖ್ಯ. ಮೇಕೆದಾಟು ಯೋಜನೆಯ ವಿಚಾರದಲ್ಲಿ ರಾಜ್ಯದ ಕಾನೂನುಬದ್ಧ ಹಕ್ಕುಗಳನ್ನು ಗಟ್ಟಿಯಾಗಿ ರಕ್ಷಿಸಿಕೊಂಡು, ಯೋಜನೆ ಮುಂದುವರಿಸಲು ಸರ್ಕಾರ ಅಗತ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಲಿದೆ” ಎಂದು ಎನ್.ಚಲುವರಾಯಸ್ವಾಮಿ ಅವರು ಭರವಸೆ ನೀಡಿದರು.

ಮೇಕೆದಾಟು ಯೋಜನೆಗೆ ಗಡುವು:

ಮೇಕೆದಾಟು ಯೋಜನೆಯ ಪ್ರಸ್ತುತ ಸ್ಥಿತಿಗತಿ, ಎದುರಾಗಿರುವ ಕಾನೂನು ತೊಡಕುಗಳು ಹಾಗೂ ಬಾಕಿ ಇರುವ ಪ್ರಮುಖ ವಿಷಯಗಳ ನಿವಾರಣೆಗೆ ತಕ್ಷಣವೇ ಅನ್ವಯವಾಗುವಂತೆ ಸ್ಪಷ್ಟ ಕಾಲಮಿತಿಯ (ಟೈಮ್‌ಲೈನ್) ಕಾರ್ಯಯೋಜನೆಯನ್ನು ರೂಪಿಸಬೇಕು ಎಂದು ಅಧಿಕಾರಿಗಳಿಗೆ ಸಚಿವ ಎನ್.ಚಲುವರಾಯಸ್ವಾಮಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು, ಕಾಗದದ ಮೇಲಿರುವ ಪ್ರಕ್ರಿಯೆಗಳನ್ನು ವೇಗವಾಗಿ ಮುಗಿಸಿ ಪ್ರಾಯೋಗಿಕ ಹಂತಕ್ಕೆ ತರಲು ಅಧಿಕಾರಿಗಳು ಸನ್ನದ್ಧರಾಗಬೇಕು. ಜಲಸಂಪನ್ಮೂಲ ಇಲಾಖೆಯ ಉನ್ನತ ಅಧಿಕಾರಿಗಳು ಯೋಜನೆಯ ಎಲ್ಲಾ ತಾಂತ್ರಿಕ, ಆಡಳಿತಾತ್ಮಕ ಮತ್ತು ಕಾನೂನುಬದ್ಧ ಅಂಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು. ಮುಂದಿನ ಹಂತದಲ್ಲಿ ಇಡಬೇಕಾದ ಹೆಜ್ಜೆಗಳ ಕುರಿತು ಶೀಘ್ರವಾಗಿ ಸಮಗ್ರ ವರದಿಯನ್ನು ಸಿದ್ಧಪಡಿಸಿ ಸಲ್ಲಿಸಬೇಕು ಎಂದು ಅವರು ಜಲಸಂಪನ್ಮೂಲ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಿದರು.

ಯೋಜನೆಗೆ ಹೊಸ ಚೈತನ್ಯ: ಉನ್ನತ ಅಧಿಕಾರಿಗಳ ಭಾಗಿ

ಮೇಕೆದಾಟು ಯೋಜನೆಯನ್ನು ಕೇವಲ ಕಾವೇರಿ ಕೊಳ್ಳದ ವಿವಾದವಾಗಿ ನೋಡದೆ, ರಾಜ್ಯದ ಪ್ರಮುಖ ನಗರಗಳ ಕುಡಿಯುವ ನೀರಿನ ಭದ್ರತೆಯ ದೃಷ್ಟಿಯಿಂದ ಪರಿಗಣಿಸಿ ಆಡಳಿತಾತ್ಮಕ ಪ್ರಕ್ರಿಯೆಗಳಿಗೆ ವೇಗ ನೀಡಲು ಈ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆಮೆಗತಿಯಲ್ಲಿ ಸಾಗುತ್ತಿದ್ದ ಆಡಳಿತಾತ್ಮಕ ಪ್ರಕ್ರಿಯೆಗಳಿಗೆ ಈ ಸಭೆಯ ಮೂಲಕ ಹೊಸ ಚೈತನ್ಯ ನೀಡುವ ಪ್ರಯತ್ನವನ್ನು ಸಚಿವರು ಮಾಡಿದ್ದಾರೆ.

ಈ ಅತ್ಯುನ್ನತ ಮಟ್ಟದ ಸಭೆಯಲ್ಲಿ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಸೇರಿದಂತೆ ಕಾವೇರಿ ನೀರಾವರಿ ನಿಗಮ ಹಾಗೂ ನೀರಾವರಿ ಇಲಾಖೆಯ ಇತರೆ ಹಿರಿಯ ತಾಂತ್ರಿಕ ಅಧಿಕಾರಿಗಳು ಮತ್ತು ಮುಖ್ಯ ಎಂಜಿನಿಯರ್‌ಗಳು ಭಾಗವಹಿಸಿ, ಯೋಜನೆಗೆ ಎದುರಾಗಿರುವ ಪ್ರಮುಖ ಸವಾಲುಗಳ ಕುರಿತು ಚರ್ಚಿಸಿದರು.


Share this with Friends

Related Post