ಬೆಂಗಳೂರು: ಚುನಾವಣಾ ಆಯೋಗದ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಲ್ಲಿನ ಅಕ್ರಮಗಳನ್ನು ಖಂಡಿಸಿ, ಕೇಂದ್ರ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಮತ್ತು ‘ಜನತಾ ನ್ಯಾಯಮಂಡಳಿ’ (People’s Tribunal) ಕಾರ್ಯಕ್ರಮ ಜರುಗಿತು.
ಈ ಪ್ರತಿಭಟನೆಯಲ್ಲಿ ನಟ ಪ್ರಕಾಶ್ ರಾಜ್ ಮತ್ತು ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ಭಾಗವಹಿಸಿ ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ಮತದಾರರ ಪಟ್ಟಿಯಿಂದ ಲಕ್ಷಾಂತರ ಅರ್ಹ ಮತದಾರರ ಹೆಸರುಗಳನ್ನು ಕಾನೂನುಬಾಹಿರವಾಗಿ ಕೈಬಿಡಲಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಆಯೋಗದ ವಿರುದ್ಧ ‘ವೋಟ್ ಚೋರ್, ಗಾದಿ ಚೋಡ್’ ಎಂಬ ಘೋಷಣೆಗಳನ್ನು ಕೂಗಿದರು. ಸಾಂಕೇತಿಕವಾಗಿ ‘ಚಪ್ಪಲಿ ಪ್ರತಿಭಟನೆ’ಯನ್ನೂ ನಡೆಸಲಾಯಿತು.
“ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ, ಮೊದಲು ‘ಎಸ್‌ಐಆರ್’ ರದ್ದುಮಾಡಿ” – ನಟ ಪ್ರಕಾಶ್ ರಾಜ್
ವೇದಿಕೆಯಲ್ಲಿ ಮಾತನಾಡಿದ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್, ಚುನಾವಣಾ ಆಯೋಗದ ಸ್ವಾಯತ್ತತೆಯನ್ನು ಕಟುವಾಗಿ ಪ್ರಶ್ನಿಸಿದರು. “ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಆಜ್ಞೆಯಂತೆ ಕೆಲಸ ಮಾಡುತ್ತಿದ್ದಾರೆ. ನಮ್ಮ ಮತದಾನದ ಹಕ್ಕನ್ನು ಕಿತ್ತುಕೊಳ್ಳಲು ಇವರು ಯಾರು? ಯಾರಿಗೆ ನೋಟಿಸ್ ನೀಡದೆ, ಆಕ್ಷೇಪಣೆಗೆ ಅವಕಾಶ ನೀಡದೆ ಬದುಕಿರುವವರ ಹೆಸರುಗಳನ್ನೇ ಪಟ್ಟಿಯಿಂದ ಅಳಿಸಿಹಾಕಲಾಗಿದೆ. ಕೇವಲ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಿದರೆ ಸಾಲದು, ಜ್ಞಾನೇಶ್ ಹೋದರೆ ಮತ್ತೊಬ್ಬ ಅಜ್ಞಾನೇಶ್ ಬರುತ್ತಾನೆ. ಆದ್ದರಿಂದ ಮೊದಲು ಈ ದೋಷಪೂರಿತ ಎಸ್‌ಐಆರ್ (SIR) ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು” ಎಂದು ಅವರು ಒತ್ತಾಯಿಸಿದರು.
“ಚುನಾವಣಾ ಆಯೋಗದಲ್ಲಿ ಪಾರದರ್ಶಕತೆ ಶೂನ್ಯವಾಗಿದೆ” – ಯೂಟ್ಯೂಬರ್ ಧ್ರುವ್ ರಾಠಿ
ಬೆಂಗಳೂರಿನ ಸಾರ್ವಜನಿಕ ಪ್ರತಿಭಟನೆಯಲ್ಲಿ ಮೊದಲ ಬಾರಿಗೆ ಭಾಗವಹಿಸಿದ ರಾಜಕೀಯ ವಿಶ್ಲೇಷಕ ಹಾಗೂ ಯೂಟ್ಯೂಬರ್ ಧ್ರುವ್ ರಾಠಿ ಮಾತನಾಡಿ, “ಪ್ರಸ್ತುತ ಭಾರತೀಯ ಚುನಾವಣಾ ಆಯೋಗದಲ್ಲಿ ಶೂನ್ಯ ಪಾರದರ್ಶಕತೆ ಮತ್ತು ಶೂನ್ಯ ಉತ್ತರದಾಯಿತ್ವ ಕಂಡುಬರುತ್ತಿದೆ. ಎಸ್‌ಐಆರ್ ಹೆಸರಿನಲ್ಲಿ ಯುವ ಮತದಾರರನ್ನು ಮತ್ತು ಸರ್ಕಾರದ ವಿರುದ್ಧ ಧ್ವನಿ ಎತ್ತುವವರನ್ನು ವ್ಯವಸ್ಥಿತವಾಗಿ ಮತದಾನದ ಹಕ್ಕಿನಿಂದ ವಂಚಿಸಲಾಗುತ್ತಿದೆ. ನಾನು ಇಲ್ಲಿ ಯಾವುದೇ ಸರ್ಕಾರದ ಬದಲಾವಣೆಗಾಗಿ (Regime Change) ಬಂದಿಲ್ಲ, ಬದಲಿಗೆ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೂಲ ಹಕ್ಕಾದ ಮತದಾನದ ಹಕ್ಕನ್ನು ರಕ್ಷಿಸಲು ಸಾಂವಿಧಾನಿಕ ಹೋರಾಟಕ್ಕೆ ಬೆಂಬಲ ನೀಡಲು ಬಂದಿದ್ದೇನೆ” ಎಂದು ಸ್ಪಷ್ಟಪಡಿಸಿದರು.
“ಮೋದಿ ಸರ್ಕಾರದಿಂದ ಪ್ರಜಾಪ್ರಭುತ್ವದ ಕೊಲೆ ಮತ್ತು ಮತಗಳ್ಳತನ” – ಅಭಿಜೀತ್ ದೀಪ್ಕೆ (ಸಿಜೆಪಿ ಸಂಸ್ಥಾಪಕ)
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ ಒಟ್ಟಾಗಿ ದೇಶದಲ್ಲಿ ಪ್ರಜಾಪ್ರಭುತ್ವದ ಕೊಲೆ ಮಾಡುತ್ತಿವೆ ಮತ್ತು ಬಹಿರಂಗವಾಗಿ ಮತಗಳ್ಳತನಕ್ಕೆ ಇಳಿದಿವೆ. ಬಿಜೆಪಿಯನ್ನು ವಿರೋಧಿಸುವವರನ್ನು ಗುರಿಯಾಗಿಸಿಕೊಂಡು ಮತದಾರರ ಪಟ್ಟಿಯಿಂದ ಹೆಸರುಗಳನ್ನು ಡಿಲೀಟ್ ಮಾಡಲಾಗುತ್ತಿದೆ. ಯಾರೆಲ್ಲರನ್ನು ಸತ್ತಿದ್ದಾರೆ ಎಂದು ಆಯೋಗ ಘೋಷಿಸಿದೆಯೋ, ಅವರೆಲ್ಲರೂ ಇಂದು ಇಲ್ಲಿ ಬಂದು ತಾವು ಬದುಕಿದ್ದೇವೆ ಎಂದು ಜನತಾ ನ್ಯಾಯಾಲಯದ ಮುಂದೆ ಸಾಬೀತುಪಡಿಸುತ್ತಿದ್ದಾರೆ. ಚುನಾವಣಾ ಆಯುಕ್ತರು ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಅಕ್ಟೋಬರ್ 10 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಮತ್ತಷ್ಟು ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ” ಎಂದು ಎಚ್ಚರಿಕೆ ನೀಡಿದರು.

