Sat. Jun 6th, 2026

ಪ್ರಧಾನಿ ನಡೆಸಿದ ಯುದ್ಧಪೂರ್ವ ಸಿದ್ಧತಾ ಸಭೆಗೆ ಸಿಎಂ ಗೈರು: ಬಿ.ವೈ. ವಿಜಯೇಂದ್ರ ತೀವ್ರ ವಾಗ್ದಾಳಿ

Share this with Friends

ಬೆಂಗಳೂರು: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧದ ಪರಿಸ್ಥಿತಿಯನ್ನು ಎದುರಿಸುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಕರೆದಿದ್ದ ಮಹತ್ವದ ವಿಡಿಯೋ ಸಂವಾದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೈರಾಗಿರುವುದನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರವಾಗಿ ಖಂಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ವಿಜಯೇಂದ್ರ ಅವರು, “ರಾಷ್ಟ್ರದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿಗಳು ಸಂಕಷ್ಟದ ಸಂದರ್ಭವನ್ನು ಎದುರಿಸುವ ಕುರಿತು ಚರ್ಚಿಸುತ್ತಿದ್ದಾರೆ. ಆದರೆ, ಇಂತಹ ಮಹತ್ವದ ಸಂವಾದದಿಂದ ಸಿದ್ದರಾಮಯ್ಯ ಅವರು ದೂರ ಉಳಿಯುವ ಮೂಲಕ ಕರ್ನಾಟಕದ ಜನತೆಗೆ ದ್ರೋಹ ಬಗೆದಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಟೀಕೆಗಿಂತ ಜನಹಿತ ಮುಖ್ಯ:

ವಿಧಾನಮಂಡಲದಲ್ಲಿ ಹಾಗೂ ಮಾಧ್ಯಮಗಳ ಮುಂದೆ ಕೇಂದ್ರ ಸರ್ಕಾರದ ವಿರುದ್ಧ ಸದಾ ಟೀಕೆ ಮಾಡುವ ಮುಖ್ಯಮಂತ್ರಿಗಳಿಗೆ ನಿಜವಾಗಿಯೂ ಜನಪರ ಕಾಳಜಿ ಇದ್ದಿದ್ದರೆ ಈ ಸಭೆಯಲ್ಲಿ ಭಾಗವಹಿಸಬೇಕಿತ್ತು. ಯುದ್ಧದ ಸಮಯದಲ್ಲಿ ರಾಜ್ಯದ ಜನರಿಗೆ ತೊಂದರೆಯಾಗದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಲು ಇದು ಸೂಕ್ತ ವೇದಿಕೆಯಾಗಿತ್ತು ಎಂದು ವಿಜಯೇಂದ್ರ ಹೇಳಿದ್ದಾರೆ.

ಕಾಂಗ್ರೆಸ್ ವಿರುದ್ಧ ಆಪಾದನೆ:

“ಸಿದ್ದರಾಮಯ್ಯ ಅವರು ರಾಜ್ಯದ 7 ಕೋಟಿ ಕನ್ನಡಿಗರ ಪ್ರತಿನಿಧಿ ಎಂಬುದನ್ನು ಮರೆತು ಕೇವಲ ಕಾಂಗ್ರೆಸ್ ಕಚೇರಿ ಮತ್ತು ಸರ್ಕಾರಿ ಬಂಗಲೆಗೆ ಸೀಮಿತವಾಗಿರುವುದು ಕನ್ನಡಿಗರ ದುರಾದೃಷ್ಟ. ಪ್ರಧಾನಿಗಳ ಜತೆ ಮುಖಾಮುಖಿಯಾಗಲು ಹೆದರಿ ಸಂವಾದದಿಂದ ದೂರ ಉಳಿದಿರುವುದು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರದ ಯೋಗ್ಯತೆಯನ್ನು ಸಾಬೀತುಪಡಿಸಿದೆ” ಎಂದು ಅವರು ಕಿಡಿಕಾರಿದ್ದಾರೆ.

ಕೇಂದ್ರ ಸರ್ಕಾರ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳಿಗೆ ಪೂರಕವಾಗಿ ರಾಜ್ಯದಲ್ಲಿ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬಹುದು ಎಂಬ ಬಗ್ಗೆ ಚರ್ಚಿಸುವ ಅವಕಾಶವನ್ನು ಮುಖ್ಯಮಂತ್ರಿಗಳು ಕೈಚೆಲ್ಲಿದ್ದಾರೆ ಎಂದು ಆರೋಪಿಸಿದರು.

 


Share this with Friends

Related Post