Sun. Nov 15th, 2026

ಮಹಿಳಾ ಸಚಿವರ ಆಯ್ಕೆ ಹೈಕಮಾಂಡ್ ನಿರ್ಧಾರ: ಸಿಎಂ ಡಿ.ಕೆ. ಶಿವಕುಮಾರ್

Share this with Friends

ಬೆಂಗಳೂರು: ರಾಜ್ಯ ಸಚಿವ ಸಂಪುಟಕ್ಕೆ ಮಹಿಳಾ ಸಚಿವರನ್ನು ಆಯ್ಕೆ ಮಾಡುವ ವಿಚಾರವನ್ನು ಈಗಾಗಲೇ ವರಿಷ್ಠರ ಗಮನಕ್ಕೆ ತರಲಾಗಿದ್ದು, ಈ ಕುರಿತು ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ನಗರದ ಸದಾಶಿವನಗರದ ನಿವಾಸದ ಬಳಿ ಹಾಗೂ ಭಾರತಿನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳಾ ಸಚಿವರ ನೇಮಕ ಪ್ರಕ್ರಿಯೆ ನಾಳೆಯೇ ನಡೆಯುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಈ ಬಗ್ಗೆ ಚರ್ಚಿಸಲು ದೆಹಲಿಗೆ ಬರುವಂತೆ ಹೈಕಮಾಂಡ್ ನಾಯಕರು ತಿಳಿಸಿದ್ದಾರೆ. ಸೋನಿಯಾ ಗಾಂಧಿ ಅವರ ಪುಸ್ತಕ ಬಿಡುಗಡೆ ಸಮಾರಂಭ ಇರುವುದರಿಂದ ಸೋಮವಾರ ಮಧ್ಯಾಹ್ನ 12 ಗಂಟೆಗೆ ದೆಹಲಿಗೆ ತೆರಳುತ್ತಿದ್ದೇನೆ ಎಂದು ಮಾಹಿತಿ ನೀಡಿದರು.

ಭಯಮುಕ್ತ ಬೆಂಗಳೂರಿಗೆ ರೌಡಿ ನಿಗ್ರಹ ಪಡೆ:

ರಾಜಧಾನಿಯಲ್ಲಿ ರೌಡಿ ಚಟುವಟಿಕೆಗಳನ್ನು ಸಂಪೂರ್ಣವಾಗಿ ಮಟ್ಟಹಾಕಲು ಸರ್ಕಾರ ಪ್ರತ್ಯೇಕ ‘ರೌಡಿ ನಿಗ್ರಹ ಪಡೆ’ ರಚಿಸಲು ಮುಂದಾಗಿದೆ ಎಂದು ಸಿಎಂ ಘೋಷಿಸಿದರು. ಸ್ಥಳೀಯ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ರೌಡಿಗಳ ಮೇಲೆ ನಿಯಂತ್ರಣ ತಪ್ಪಿಸಿ, ನೇರವಾಗಿ ಪೊಲೀಸ್ ಕಮಿಷನರೇಟ್‌ಗೆ ಇದರ ಜವಾಬ್ದಾರಿ ನೀಡಲಾಗುವುದು. ರೌಡಿಗಳು ಸ್ಥಳೀಯ ಪೊಲೀಸರೊಂದಿಗೆ ಸಂಪರ್ಕದಲ್ಲಿರುವ ಮಾಹಿತಿ ಸರ್ಕಾರಕ್ಕಿದೆ. ಇದಕ್ಕೆ ಕಡಿವಾಣ ಹಾಕಿ ಭಯಮುಕ್ತ ಬೆಂಗಳೂರು ನಿರ್ಮಿಸುವುದು ನಮ್ಮ ಗುರಿ ಎಂದರು. ಅಲ್ಲದೆ, ‘ಡ್ರಗ್ಸ್ ಮುಕ್ತ ಕರ್ನಾಟಕ’ ನಿರ್ಮಾಣಕ್ಕಾಗಿ ಪೊಲೀಸರು ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ಮೇಕೆದಾಟು ಯೋಜನೆ ಹಾಗೂ ಪ್ರಧಾನಿ ಭೇಟಿ ಕುರಿತು ಸ್ಪಷ್ಟನೆ:

ಮೇಕೆದಾಟು ಯೋಜನೆಯ ಕುರಿತು ಪ್ರತಿಕ್ರಿಯಿಸಿದ ಅವರು, ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ತಮಿಳುನಾಡು ಸರ್ಕಾರಕ್ಕೆ ವಾಸ್ತವದ ಅರಿವಿದ್ದರೂ ವಿರೋಧ ವ್ಯಕ್ತಪಡಿಸುತ್ತಿದೆ. ಅದು ಅವರ ಹಕ್ಕು, ಆದರೆ ನಾವು ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಒಡನಾಟದ ಕುರಿತು ಬಿಜೆಪಿ ನಾಯಕರ ಟೀಕೆಗೆ ಉತ್ತರಿಸಿದ ಸಿಎಂ, ಮುಖ್ಯಮಂತ್ರಿಯಾಗಿ ಪ್ರಧಾನಿ ಸ್ಥಾನಕ್ಕೆ ನೀಡಬೇಕಾದ ಗೌರವವನ್ನು ನಾನು ನೀಡುತ್ತಿದ್ದೇನೆ, ಅವರೂ ನನಗೆ ಗೌರವ ನೀಡುತ್ತಾರೆ. ಚುನಾವಣೆ ಬಂದಾಗ ರಾಜಕೀಯ ಮಾಡೋಣ, ಈಗ ಒಟ್ಟಾಗಿ ಅಭಿವೃದ್ಧಿ ಕೆಲಸ ಮಾಡೋಣ ಎಂದು ಹೇಳಿದ್ದೇನೆ ಎಂದರು.

ಉಪಚುನಾವಣೆ ಸಿದ್ಧತೆ ಮತ್ತು ಮಾರ್ಗಸೂಚಿ ದರ:

ಹಿರಿಯೂರು ಉಪಚುನಾವಣೆ. ಉಪಚುನಾವಣೆ ಯಾವಾಗ ಘೋಷಣೆಯಾದರೂ ಎದುರಿಸಲು ಪಕ್ಷ ಸಿದ್ಧವಿದೆ. ಬರುವ ಶನಿವಾರ ಹಿರಿಯೂರಿನಲ್ಲಿ ತಾವೇ ಖುದ್ದು ‘ಪ್ರಜಾಸೇವೆ’ ಕಾರ್ಯಕ್ರಮ ನಡೆಸಿ ಜನರ ಸಮಸ್ಯೆ ಆಲಿಸುವುದಾಗಿ ಸಿಎಂ ಹೇಳಿದರು.

ಮಾರ್ಗಸೂಚಿ ದರ. ಆಸ್ತಿಗಳ ಮಾರ್ಗಸೂಚಿ ದರ (Guidance Value) ಏರಿಕೆ ಕುರಿತು ತಮ್ಮ ಗಮನಕ್ಕೆ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ. ಇಲಾಖೆ ಮಟ್ಟದಲ್ಲಿ ಚರ್ಚೆ ನಡೆಯುತ್ತಿರಬಹುದು, ಕಡತ ತಮ್ಮ ಬಳಿ ಬಂದಾಗ ಪರಿಶೀಲಿಸುವುದಾಗಿ ತಿಳಿಸಿದರು.

ಸುವರ್ಣಸೌಧ ನಿರ್ವಹಣೆ. ಬೆಳಗಾವಿ ಅಧಿವೇಶನಕ್ಕೆ ಸುವರ್ಣಸೌಧದ ನಿರ್ವಹಣೆಯಲ್ಲಿರುವ ಸಮಸ್ಯೆಗಳನ್ನು ವಿಧಾನಸಭಾಧ್ಯಕ್ಷರು ಸರಿಪಡಿಸಲಿದ್ದಾರೆ ಎಂದು ಹೇಳಿದರು.

 


Share this with Friends

Related Post