Fri. Jun 5th, 2026

ಬಿಗ್ ಬ್ರೇಕಿಂಗ್: ಮಧ್ಯಾಹ್ನ 2:30ಕ್ಕೆ ಲೋಕ ಭವನಕ್ಕೆ ಸಿಎಂ; 3 ಗಂಟೆಗೆ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸಿದ್ದರಾಮಯ್ಯ ತುರ್ತು ಪತ್ರಿಕಾಗೋಷ್ಠಿ!

Share this with Friends

ಬೆಂಗಳೂರು: ಕರ್ನಾಟಕದ ನಾಯಕತ್ವ ಬದಲಾವಣೆ ಪ್ರಕ್ರಿಯೆ ಅತ್ಯಂತ ವೇಗವಾಗಿ ನಿರ್ಣಾಯಕ ಹಂತಕ್ಕೆ ತಲುಪಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಧ್ಯಾಹ್ನ ನಡೆಸಲಿರುವ ಪ್ರಮುಖ ಅಧಿಕೃತ ಕಾರ್ಯಕ್ರಮಗಳ ನಿಖರ ಸಮಯ ಹಾಗೂ ಸ್ಥಳದ ವಿವರಗಳು ಅಧಿಕೃತವಾಗಿ ಹೊರಬಿದ್ದಿವೆ.

ಮುಖ್ಯಮಂತ್ರಿಗಳ ಕಚೇರಿ ಪ್ರಕಟಿಸಿರುವ ಅಧಿಕೃತ ವೇಳಾಪಟ್ಟಿಯ ಹಂತ ಹಂತದ ವಿವರಗಳು ಹೀಗಿವೆ:

ಮಧ್ಯಾಹ್ನ 2:30ಕ್ಕೆ ಲೋಕ ಭವನಕ್ಕೆ ಸಿಎಂ ಭೇಟಿ:

ನಿಗದಿಪಡಿಸಿದ ಕಾರ್ಯಸೂಚಿಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಧ್ಯಾಹ್ನ 2:30 ಕ್ಕೆ ಸರಿಯಾಗಿ ಲೋಕ ಭವನಕ್ಕೆ ಭೇಟಿ ನೀಡಲಿದ್ದಾರೆ. ರಾಜೀನಾಮೆ ಸಲ್ಲಿಕೆಗೂ ಮುನ್ನ ನಡೆಯಲಿರುವ ಈ ಭೇಟಿಯು ಆಡಳಿತಾತ್ಮಕ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಮಧ್ಯಾಹ್ನ 3:00 ಗಂಟೆಗೆ ಮಹತ್ವದ ಪತ್ರಿಕಾಗೋಷ್ಠಿ:

ಇದಾದ ಬೆನ್ನಲ್ಲೇ ಮಧ್ಯಾಹ್ನ 3:00 ಗಂಟೆಗೆ ಮುಖ್ಯಮಂತ್ರಿಗಳ ಅಧಿಕೃತ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸಿದ್ದರಾಮಯ್ಯ ಅವರು ತುರ್ತು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ತಾವೇಕೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎನ್ನುವುದನ್ನು ಸಚಿವರ ಸಮ್ಮುಖದಲ್ಲಿ ಕೈಗೊಂಡ ನಿರ್ಧಾರದಂತೆ ಅವರು ಅಧಿಕೃತವಾಗಿ ನಾಡಿನ ಜನತೆಯ ಮುಂದೆ ಪ್ರಕಟಿಸಲಿದ್ದಾರೆ.

ಮಾಧ್ಯಮದವರಿಗೆ ಮುಕ್ತ ಆಹ್ವಾನ:

ರಾಜ್ಯ ರಾಜಕಾರಣದ ಈ ಐತಿಹಾಸಿಕ ಮತ್ತು ದಶಕದ ಅತ್ಯಂತ ಪ್ರಮುಖ ರಾಜಕೀಯ ಬೆಳವಣಿಗೆಯನ್ನು ವರದಿ ಮಾಡಲು ಎಲ್ಲಾ ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳ ಪ್ರತಿನಿಧಿಗಳಿಗೆ ಮತ್ತು ವರದಿಗಾರರಿಗೆ ಗೃಹ ಕಚೇರಿ ಕೃಷ್ಣಾಕ್ಕೆ ಮುಕ್ತ ಆಹ್ವಾನ ನೀಡಲಾಗಿದೆ.

ಸಿಎಲ್‌ಪಿ ಸಭೆ ಕರೆಯಲು ಹೈಕಮಾಂಡ್ ಸೂಚನೆಗಾಗಿ ಕಾಯುತ್ತಿದ್ದೇವೆ:

ರಾಜ್ಯ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ನಾಯಕತ್ವ ಬದಲಾವಣೆ ಬೆನ್ನಲ್ಲೇ ಶಾಸಕಾಂಗ ಪಕ್ಷದ (CLP) ಸಭೆ ಕುರಿತು ಮಹತ್ವದ ಬೆಳವಣಿಗೆ ನಡೆದಿದ್ದು, “ವರಿಷ್ಠರು ಸೂಚನೆ ನೀಡಿದರೆ ತಕ್ಷಣವೇ ಶಾಸಕಾಂಗ ಪಕ್ಷದ ಸಭೆ ಕರೆಯಲು ಸಿದ್ಧನಿದ್ದೇನೆ” ಎಂದು ಸಿಎಲ್‌ಪಿ ಕಾರ್ಯದರ್ಶಿ ಅಲ್ಲಮಪ್ರಭು ಪಾಟೀಲ್ ಪ್ರಕಟಿಸಿದ್ದಾರೆ.

ದಿನದ ಪ್ರಮುಖ ರಾಜಕೀಯ ವಿದ್ಯಮಾನಗಳ ವಿವರಗಳು ಹೀಗಿವೆ:

ಅಲ್ಲಮಪ್ರಭು ಪಾಟೀಲ್ ಅವರ ಸ್ಪಷ್ಟನೆ

ರಾಜಧಾನಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಲ್‌ಪಿ ಕಾರ್ಯದರ್ಶಿ ಅಲ್ಲಮಪ್ರಭು ಪಾಟೀಲ್ ಅವರು, ಅಧಿಕಾರ ಹಸ್ತಾಂತರದ ಪ್ರಕ್ರಿಯೆಗಳು ಹೈಕಮಾಂಡ್ ಹಂತದಲ್ಲಿ ನಡೆಯುತ್ತಿವೆ. ಪಕ್ಷದ ವರಿಷ್ಠರು ಅಥವಾ ಹಿರಿಯ ನಾಯಕರು ಸಭೆ ಆಯೋಜಿಸಲು ಅಧಿಕೃತವಾಗಿ ಆದೇಶಿಸಿದರೆ, ಎಲ್ಲ ಶಾಸಕರಿಗೆ ಶೀಘ್ರದಲ್ಲೇ ನೋಟಿಸ್ ಜಾರಿ ಮಾಡಿ ಸಭೆ ಕರೆಯಲಾಗುವುದು ಎಂದು ನಿಯಮಾವಳಿಗಳನ್ನು ಸ್ಪಷ್ಟಪಡಿಸಿದ್ದಾರೆ.

ಮೇ 30ರ ಶನಿವಾರದ ಸಭೆಗೆ ಸಿದ್ಧತೆ

ಕಾಂಗ್ರೆಸ್ ಮೂಲಗಳ ಪ್ರಕಾರ, ಮೇ 30ರ ಶನಿವಾರದಂದು ಶಾಸಕಾಂಗ ಪಕ್ಷದ ಮಹತ್ವದ ಸಭೆ ನಡೆಯುವುದು ಬಹುತೇಕ ನಿಶ್ಚಿತವಾಗಿದೆ. ಈ ಸಭೆಯಲ್ಲಿ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮುಂದಿನ ನೂತನ ನಾಯಕರಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಪ್ರಸ್ತಾಪಿಸಲಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ಹೊಸ ಮುಖ್ಯಮಂತ್ರಿಗಳ ಆಯ್ಕೆ ಪ್ರಕ್ರಿಯೆ ಅಧಿಕೃತವಾಗಿ ಪೂರ್ಣಗೊಳ್ಳಲಿದೆ

 


Share this with Friends

Related Post