Tue. Nov 17th, 2026

ದೇವನಹಳ್ಳಿಯಲ್ಲಿ ದೇಶದ ಮೊದಲ ಕಾಲಿನ್ಸ್ ಏರೋಸ್ಪೇಸ್ ಎಂ.ಆರ್.ಒ ಘಟಕಕ್ಕೆ ಸಚಿವ ಎಂ.ಬಿ. ಪಾಟೀಲ ಭೂಮಿಪೂಜೆ

Share this with Friends

ಬೆಂಗಳೂರು: ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್‌ನಲ್ಲಿ ಕಾಲಿನ್ಸ್ ಏರೋಸ್ಪೇಸ್ ಸಂಸ್ಥೆಯು ನಿರ್ಮಿಸುತ್ತಿರುವ ದೇಶದ ಪ್ರಪ್ರಥಮ ವಿಮಾನ ನಿರ್ವಹಣೆ ಮತ್ತು ದುರಸ್ತಿ (MRO) ಘಟಕಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮಂಗಳವಾರ ಭೂಮಿಪೂಜೆ ನೆರವೇರಿಸಿದರು.

ಈ ನೂತನ ಘಟಕಕ್ಕಾಗಿ ರಾಜ್ಯ ಸರ್ಕಾರವು 26 ಎಕರೆ ಭೂಮಿಯನ್ನು ಮಂಜೂರು ಮಾಡಿದ್ದು, ಇದರಿಂದ 2,100 ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ. ಜಾಗತಿಕ ಮಟ್ಟದ ಮೂಲ ಉಪಕರಣ ತಯಾರಕ (OEM) ಕಂಪನಿಯೊಂದು ಭಾರತದಲ್ಲಿ ಸ್ಥಾಪಿಸುತ್ತಿರುವ ಮೊದಲ ಎಂ.ಆರ್.ಒ ಘಟಕ ಇದಾಗಿದೆ. ಈ ಕೇಂದ್ರವು ಎಟಿಆರ್-42, ಎಟಿಆರ್-72 ವಿಮಾನಗಳ ಪ್ರೊಪೆಲ್ಲರ್‌ಗಳಿಗೆ ಹಾಗೂ ಭಾರತೀಯ ಸೇನೆಯ ಸಿ-295 ವಿಮಾನಗಳಿಗೆ ನಿರ್ವಹಣಾ ಸೇವೆ ಒದಗಿಸಲಿದೆ. ಈ ಮೂಲಕ ಬೆಂಗಳೂರು ಏಷ್ಯಾ-ಪೆಸಿಫಿಕ್ ವಲಯದ ಪ್ರಮುಖ ವಿಮಾನ ಸೇವಾ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ಸಚಿವರು ತಿಳಿಸಿದರು.

60 ಸಾವಿರ ಕೋಟಿ ರೂ. ಹೂಡಿಕೆ ಗುರಿ:

ದೇಶದ ವೈಮಾಂತರಿಕ್ಷ (ಏರೋಸ್ಪೇಸ್) ವಲಯದಲ್ಲಿ ಕರ್ನಾಟಕವು ಶೇ. 65ರಷ್ಟು ಪಾಲನ್ನು ಹೊಂದಿದೆ. ಈ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲು ಸರ್ಕಾರವು ‘ನೂತನ ಏರೋಸ್ಪೇಸ್ ಮತ್ತು ರಕ್ಷಣಾ ನೀತಿ’ಯನ್ನು ಜಾರಿಗೆ ತಂದಿದೆ. 2031ರ ವೇಳೆಗೆ ಈ ವಲಯದಲ್ಲಿ 60 ಸಾವಿರ ಕೋಟಿ ರೂ. ಬಂಡವಾಳ ಆಕರ್ಷಿಸಿ, 60 ಸಾವಿರ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ಎಂ.ಆರ್.ಒ ಘಟಕಗಳ ಅಭಿವೃದ್ಧಿ, ರಕ್ಷಣಾ ತಂತ್ರಜ್ಞಾನ ಮತ್ತು ನಾವೀನ್ಯತೆಗೆ ಒತ್ತು ನೀಡಲು 7 ಪ್ರಮುಖ ವಿಭಾಗಗಳನ್ನು ಗುರುತಿಸಲಾಗಿದೆ ಎಂದರು.

ಪ್ರತ್ಯೇಕ ನಾಗರಿಕ ವಿಮಾನಯಾನ ನೀತಿ:

ದೇಶದಲ್ಲಿ ಪ್ರಾದೇಶಿಕ ವಿಮಾನಯಾನ ಸಂಪರ್ಕ ವಿಸ್ತರಿಸುತ್ತಿರುವುದರಿಂದ ಮತ್ತು ರಕ್ಷಣಾ ಇಲಾಖೆಯ ಅಗತ್ಯತೆಗಳಿಂದಾಗಿ ಸ್ಥಳೀಯ ಎಂ.ಆರ್.ಒ ಘಟಕಗಳಿಗೆ ಭಾರಿ ಬೇಡಿಕೆಯಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಪ್ರತ್ಯೇಕ ನಾಗರಿಕ ವಿಮಾನಯಾನ ನೀತಿಯನ್ನು ಸಿದ್ಧಪಡಿಸಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ದೊರೆಯಲಿದೆ. ಇದು ‘ಉಡಾನ್’ ಯೋಜನೆಗೂ ಪೂರಕವಾಗಲಿದೆ ಎಂದು ಪಾಟೀಲ ಹೇಳಿದರು.

ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ 200 ಮಿಲಿಯನ್ ಡಾಲರ್ ಹೂಡಿಕೆ ಮಾಡಿರುವ ಕಾಲಿನ್ಸ್ ಏರೋಸ್ಪೇಸ್, ಕಳೆದ ನವೆಂಬರ್‌ನಲ್ಲಿ ದೇವನಹಳ್ಳಿಯಲ್ಲಿ ತನ್ನ ಉತ್ಪಾದನಾ ಘಟಕವನ್ನು ಆರಂಭಿಸಿತ್ತು. ಇದೀಗ ಹೊಸ ಘಟಕದಿಂದ ರಾಜ್ಯದ ಎಂಎಸ್‌ಎಂಇ (MSME) ವಲಯಕ್ಕೂ ಹೆಚ್ಚಿನ ಅನುಕೂಲವಾಗಲಿದ್ದು, ಮುಂಬರುವ ಏಪ್ರಿಲ್‌ನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೂ ಮುನ್ನ ಬೃಹತ್ ಮತ್ತು ಸಣ್ಣ ಕೈಗಾರಿಕೆಗಳ ಸಮನ್ವಯ ಸಭೆ ನಡೆಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸಂಸದ ಡಾ. ಕೆ. ಸುಧಾಕರ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಕಾಲಿನ್ಸ್ ಏರೋಸ್ಪೇಸ್ ಮುಖ್ಯಸ್ಥ ಅಜಯ್ ಮಹಾಜನ್, ಪ್ರಧಾನ ವ್ಯವಸ್ಥಾಪಕ ಜಾನ್ ಫ್ರಾಂಕೋಯಿಸ್ ಚನುವಾತ್ ಹಾಗೂ ಹಿರಿಯ ನಿರ್ದೇಶಕ ಬಿನು ಕೃಷ್ಣಮೂರ್ತಿ ಉಪಸ್ಥಿತರಿದ್ದರು.

 


Share this with Friends

Related Post