Fri. Jun 5th, 2026

ಧಾರವಾಡ ಪ್ರತ್ಯೇಕ ಪಾಲಿಕೆ ವಿಚಾರ, ಕಾಂಗ್ರೆಸ್‌ ಸುಳ್ಳು ಆರೋಪ ಖಂಡನೀಯ: ಶಾಸಕ ಅರವಿಂದ ಬೆಲ್ಲದ

Share this with Friends

ಬೆಂಗಳೂರು:  ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ವಿಚಾರವನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡು ಬಿಜೆಪಿ ವಿರುದ್ಧ ಕಾಂಗ್ರೆಸ್ ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ಖಂಡನೀಯ ಎಂದು ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಮತ್ತು ಶಾಸಕ ಅರವಿಂದ ಬೆಲ್ಲದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹುಬ್ಬಳ್ಳಿ-ಧಾರವಾಡ ಮಹಾನಗರವು ರಾಜ್ಯದ ಎರಡನೇ ಅತಿ ದೊಡ್ಡ ಮಹಾನಗರವಾಗಿದ್ದು, ಧಾರವಾಡವು ಶೈಕ್ಷಣಿಕ ಕಾಶಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿ ಅನೇಕ ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಹಲವು ವರ್ಷಗಳಿಂದ ಧಾರವಾಡ ಭಾಗದ ಅಭಿವೃದ್ಧಿ ಕುಂಠಿತವಾಗಿರುವುದನ್ನು ಮನಗಂಡು, ಈ ಹಿಂದೆ ಭಾರತೀಯ ಜನತಾ ಪಕ್ಷವೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚಿಸಬೇಕೆಂಬ ನಿರ್ಧಾರ ಕೈಗೊಂಡಿತ್ತು ಎಂದು ತಿಳಿಸಿದ್ದಾರೆ.

ಬದಲಾದ ಪರಿಸ್ಥಿತಿಯಲ್ಲಿ 16ನೇ ಹಣಕಾಸು ಆಯೋಗದ ಅನುದಾನ ಹಂಚಿಕೆ ಸಂದರ್ಭದಲ್ಲಿ ಅವಳಿ ನಗರಗಳು ಒಟ್ಟಾಗಿ ಉಳಿದರೆ ಜನಸಂಖ್ಯೆ ಆಧಾರದ ಮೇಲೆ  ಕೇಂದ್ರ ಸರಕಾರದಿಂದ ಹೆಚ್ಚಿನ ಅನುದಾನ ದೊರೆತು, ಹೊಸ ಅಭಿವೃದ್ಧಿ ಯೋಜನೆಗಳಿಗೆ ವೇಗ ಸಿಗಬಹುದು ಎಂಬ ಉದ್ದೇಶದಿಂದ ಈ ವಿಷಯವನ್ನು ಪುನರ್ ವಿಮರ್ಶೆ ಮಾಡಲು ಬಿಜೆಪಿ ನಿರ್ಧರಿಸಿತ್ತು. ಆದರೆ ಮಹಾನಗರದ ಜನರ ಭಾವನೆ, ನಿರಂತರ ಹೋರಾಟ ಹಾಗೂ ಸಾರ್ವಜನಿಕ ಅಭಿಪ್ರಾಯವನ್ನು ಗೌರವಿಸಿ, ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ನೀಡುವ ನಿಲುವನ್ನು ಬಿಜೆಪಿ ಸ್ಪಷ್ಟವಾಗಿ ಪುನರುಚ್ಚರಿಸಿದೆ. ಈ ಸಂಬಂಧ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಶಾಸಕ ಅರವಿಂದ ಬೆಲ್ಲದ ಅವರ ನೇತೃತ್ವದ ನಿಯೋಗವು ಮೂರು ದಿನಗಳ ಹಿಂದೆ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದು, ಪ್ರಕ್ರಿಯೆ ಈಗಾಗಲೇ ಕಾರ್ಯಗತ ಹಂತದಲ್ಲಿದೆ.

ಕಾಂಗ್ರೆಸ್ ಸರ್ಕಾರವು ಸುಮಾರು ಹನ್ನೊಂದು ತಿಂಗಳ ಹಿಂದೆಯೇ ಪ್ರಸ್ತಾವನೆ ಸಲ್ಲಿಸಿದ್ದರೂ, ರಾಜ್ಯಪಾಲರನ್ನು ಭೇಟಿ ಮಾಡಿ ಮುಂದಿನ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ಅಲ್ಲದೆ ಹೋರಾಟಗಾರರು ಮನವಿ ಸಲ್ಲಿಸಿದ್ದರೂ ಕಾಂಗ್ರೆಸ್ ನಾಯಕರು ರಾಜ್ಯಪಾಲರ ಭೇಟಿಗೆ ಅವಕಾಶ ಕಲ್ಪಿಸುವಲ್ಲಿ ಯಶಸ್ವಿಯಾಗಲಿಲ್ಲ. ಭಾರತೀಯ ಜನತಾ ಪಕ್ಷದ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿದ ತಕ್ಷಣ ಕಾಂಗ್ರೆಸ್ ಪಕ್ಷ ಕಣ್ಣು ಒರೆಸುವ ತಂತ್ರದಲ್ಲಿ ತೊಡಗಿದ್ದು, ಹೋರಾಟಗಾರರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವಿನ ವ್ಯತ್ಯಾಸವನ್ನು ಜನತೆಗೆ ತಪ್ಪಾಗಿ ಬಿಂಬಿಸಲು ಪ್ರಯತ್ನಿಸುತ್ತಿದೆ.

ಪ್ರತ್ಯೇಕ ಪಾಲಿಕೆ ಹೋರಾಟಗಾರರೊಂದಿಗೆ ಭಾರತೀಯ ಜನತಾ ಪಕ್ಷಕ್ಕೆ ಉತ್ತಮ ಸಂಬಂಧ ಹಾಗೂ ಗೌರವವಿದೆ. ಪ್ರತ್ಯೇಕ ಮಹಾನಗರ ಪಾಲಿಕೆ ಕುರಿತು ಪಕ್ಷ ತನ್ನ ನಿಲುವನ್ನು ಈಗ ಸ್ಪಷ್ಟಪಡಿಸಿದ್ದು, ಈ ಹೋರಾಟವನ್ನು ಕಾಂಗ್ರೆಸ್ ಪಕ್ಷ ತನ್ನ ರಾಜಕೀಯ ಅಜೆಂಡಾಕ್ಕೆ ಬಳಸಿಕೊಳ್ಳದಂತೆ ಹೋರಾಟಗಾರರು, ವಿಶೇಷವಾಗಿ ಹೋರಾಟ ಸಮಿತಿಯ ನೇತೃತ್ವ ವಹಿಸಿರುವ ಬಿ.ಡಿ ಹಿರೇಮಠ ಅವರು ಎಚ್ಚರಿಕೆ ವಹಿಸಬೇಕು. ಸಾರ್ವಜನಿಕರು ಕೂಡ ನಿಜಾಂಶವನ್ನು ಅರಿತುಕೊಳ್ಳಬೇಕು ಎಂದು ಅರವಿಂದ ಬೆಲ್ಲದ ಮನವಿ ಮಾಡಿದ್ದಾರೆ.


Share this with Friends

Related Post