ಶಿವಮೊಗ್ಗ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಆಂತರಿಕ ಅಧಿಕಾರ ಸಂಘರ್ಷ ತಾರಕಕ್ಕೇರಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ರಾಜ್ಯದಲ್ಲಿ ಮೂರನೇ ಮುಖ್ಯಮಂತ್ರಿ ಅಧಿಕಾರಕ್ಕೆ ಬಂದರೂ ಆಶ್ಚರ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.
ಹೊಸನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವ ಮುಖ್ಯಮಂತ್ರಿಗಳ ನಾಯಕತ್ವವನ್ನು ಮುನ್ನಿಟ್ಟುಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬಂದಿತೋ, ಅದೇ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮೂಲೆಗುಂಪು ಮಾಡಲು ಸ್ವಪಕ್ಷದಲ್ಲೇ ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂಬ ಗಂಭೀರ ಸಂಶಯ ಮೂಡುತ್ತಿದೆ ಎಂದು ನೇರವಾಗಿ ಆರೋಪಿಸಿದರು.
ಇತ್ತೀಚೆಗೆ ಸಚಿವರ ವಿರುದ್ಧ ಕೇಳಿಬರುತ್ತಿರುವ ಸ್ಟಿಂಗ್ ಆಪರೇಷನ್ಗಳ ಹಿಂದೆ ಯಾರ ಕೈವಾಡವಿದೆ ಮತ್ತು ಇದರ ಸೂತ್ರಧಾರರು ಯಾರು ಎಂಬುದನ್ನು ಕಾಂಗ್ರೆಸ್ ನಾಯಕರೇ ಜನತೆಗೆ ಬಹಿರಂಗಪಡಿಸಬೇಕಿದೆ. ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ಹೇಳಿಕೆಗಳು ಸೇರಿದಂತೆ ಕಾಂಗ್ರೆಸ್ ನಾಯಕರ ಇತ್ತೀಚಿನ ಮಾತುಗಳನ್ನು ಗಮನಿಸಿದರೆ ಪಕ್ಷದೊಳಗೆ ಏನೋ ದೊಡ್ಡ ಮಟ್ಟದ ರಾಜಕೀಯ ಬೆಳವಣಿಗೆ ನಡೆಯುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಮುಖ್ಯಮಂತ್ರಿಗಳು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿರುವುದು ಈ ಆಂತರಿಕ ಬಿಕ್ಕಟ್ಟಿನ ತೀವ್ರತೆಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಅವರು ಲೇವಡಿ ಮಾಡಿದರು.
ಸರ್ಕಾರದ ಸಚಿವರು ಮತ್ತು ಶಾಸಕರು ಸದ್ಯ ಪರಸ್ಪರ ಅಪನಂಬಿಕೆ ಹಾಗೂ ಭೀತಿಯಲ್ಲೇ ದಿನದೂಡುವಂತಾಗಿದೆ. ಯಾರ ವಿರುದ್ಧ ಯಾವಾಗ ರಹಸ್ಯ ಕಾರ್ಯಾಚರಣೆ ನಡೆಯುತ್ತದೋ ಮತ್ತು ಅದರ ಹಿಂದೆ ಸ್ವಪಕ್ಷದವರೇ ಇದ್ದಾರೋ ಎಂಬ ಆತಂಕ ಅವರನ್ನು ಕಾಡುತ್ತಿದೆ. ಆಡಳಿತ ನಡೆಸಬೇಕಾದವರು ತಮ್ಮ ಸ್ಥಾನಮಾನ ಮತ್ತು ರಾಜಕೀಯ ಭವಿಷ್ಯದ ಬಗ್ಗೆ ಚಿಂತಿಸುವ ಪರಿಸ್ಥಿತಿ ಬಂದೊದಗಿದೆ. ಪಕ್ಷದೊಳಗಿನ ಗೊಂದಲ ಯಾವ ಹಂತಕ್ಕೆ ತಲುಪುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಬದಲಾವಣೆಗಳಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ವಿಜಯೇಂದ್ರ ಹೇಳಿದರು.
ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿಯಿಂದ ಬೇಸತ್ತಿರುವ ಆಡಳಿತ ಪಕ್ಷದ 20 ರಿಂದ 25 ಶಾಸಕರು ಬಿಜೆಪಿ ಸೇರಲು ಸಿದ್ಧರಿದ್ದಾರೆ. ನಾಳೆಯೇ ಚುನಾವಣೆ ಘೋಷಣೆಯಾದರೂ ಇಷ್ಟೂ ಶಾಸಕರು ಕಮಲ ಪಾಳಯ ಸೇರುವುದು ನಿಶ್ಚಿತ. ಹಾಗಂತ ನಾವು ಈ ಸರ್ಕಾರವನ್ನು ಕೆಡವಿ ಅಧಿಕಾರ ಹಿಡಿಯುವ ಆತುರದಲ್ಲಿಲ್ಲ. ಕಾಂಗ್ರೆಸ್ ಸರ್ಕಾರ ಇನ್ನು ಒಂದು ವರ್ಷ ಪೂರ್ಣ ಪ್ರಮಾಣದಲ್ಲಿ ಆಡಳಿತ ನಡೆಸಿ, ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಲಿ ಎನ್ನುವುದೇ ನಮ್ಮ ಆಶಯವಾಗಿದೆ. ಆದರೆ ಆಡಳಿತ ಪಕ್ಷವು ತನ್ನ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಭರವಸೆಗಳನ್ನು ಈಡೇರಿಸುವತ್ತ ಗಮನ ಹರಿಸಬೇಕಿದೆ ಎಂದು ಅವರು ತಿಳಿಸಿದರು.

