Sat. Jun 6th, 2026

ದಾವಣಗೆರೆ ದಕ್ಷಿಣ ಟಿಕೆಟ್: ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅಸಮಾಧಾನ; ಜಮೀರ್ ಅಹಮದ್ ರಾಜೀನಾಮೆ ಬೆದರಿಕೆ!

Share this with Friends

ಬೆಂಗಳೂರು: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಟಿಕೆಟ್ ಹಂಚಿಕೆ ವಿಚಾರ ಈಗ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಅಭ್ಯರ್ಥಿ ಆಯ್ಕೆ ಕುರಿತು ನಡೆದ ಹೈವೋಲ್ಟೇಜ್ ಸಭೆಯಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಅವರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದು, ತಮ್ಮ ಬೇಡಿಕೆ ಈಡೇರದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಸಮರ್ತ್ ಮಲ್ಲಿಕಾರ್ಜುನ ನಾಮಪತ್ರಕ್ಕೆ ಆಕ್ಷೇಪ:

ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ತಮ್ಮ ಪುತ್ರ ಸಮರ್ಥ್ ಮಲ್ಲಿಕಾರ್ಜುನ ಅವರಿಗೆ ಟಿಕೆಟ್ ಕೊಡಿಸಲು ನಡೆಸುತ್ತಿರುವ ಪ್ರಯತ್ನಕ್ಕೆ ಜಮೀರ್ ಬಣ ತೀವ್ರ ವಿರೋಧ ವ್ಯಕ್ತಪಡಿಸಿದೆ. ಪಕ್ಷದ ಅಧಿಕೃತ ಬಿ ಫಾರಂ ಸಿಗುವ ಮೊದಲೇ ಸಮರ್ಥ್ ಅವರು ನಾಮಪತ್ರ ಸಲ್ಲಿಸಿರುವುದಕ್ಕೆ ಸಭೆಯಲ್ಲಿದ್ದ ಮುಸ್ಲಿಂ ನಾಯಕರು ಕೆಂಡಾಮಂಡಲರಾದರು. “ಪಕ್ಷದ ಶಿಸ್ತು ಎಲ್ಲಿ ಹೋಯಿತು? ಹೈಕಮಾಂಡ್ ತೀರ್ಮಾನಕ್ಕೂ ಮುನ್ನವೇ ನಾಮಪತ್ರ ಸಲ್ಲಿಸುವುದು ಸರಿಯೇ?” ಎಂದು ಜಮೀರ್ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಜಮೀರ್ ಅಹಮದ್ ಖಾನ್ ಗುಡುಗು:

ದಾವಣಗೆರೆ ದಕ್ಷಿಣ ಕ್ಷೇತ್ರವು ಅಲ್ಪಸಂಖ್ಯಾತ ಸಮುದಾಯದ ಪ್ರಬಲ ಹಿಡಿತವಿರುವ ಕ್ಷೇತ್ರವಾಗಿದ್ದು, ಈ ಬಾರಿ ಸಮುದಾಯದ ಅಭ್ಯರ್ಥಿಗೇ ಟಿಕೆಟ್ ನೀಡಬೇಕು ಎಂಬುದು ಜಮೀರ್ ಅವರ ಪಟ್ಟಾಗಿತ್ತು. ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಸಮ್ಮುಖದಲ್ಲೇ ಗುಡುಗಿದ ಜಮೀರ್, “ನಮ್ಮ ಸಮುದಾಯಕ್ಕೆ ಅನ್ಯಾಯವಾದರೆ ನಾನು ಮಂತ್ರಿಯಾಗಿ ಮುಂದುವರಿಯುವುದಿಲ್ಲ. ಅಲ್ಪಸಂಖ್ಯಾತರ ಹಿತ ಕಾಯಲು ಸಾಧ್ಯವಾಗದಿದ್ದರೆ ಈ ಸ್ಥಾನ ನನಗೇಕೆ? ಕೂಡಲೇ ನನ್ನ ರಾಜೀನಾಮೆ ಸ್ವೀಕರಿಸಿ” ಎಂದು ಸಿದ್ದರಾಮಯ್ಯ ಹಾಗೂ ಡಿಕೆಶಿ ಮುಂದೆ ಪಟ್ಟು ಹಿಡಿದರು.

ಸಂಧಾನಕ್ಕೆ ಒಪ್ಪದ ನಾಯಕರು:

ಸಭೆಯಲ್ಲಿದ್ದ ಸಂಸದ ನಾಸೀರ್ ಹುಸೇನ್, ಶಾಸಕರಾದ ಹ್ಯಾರೀಸ್ ಹಾಗೂ ರಿಜ್ವಾನ್ ಅರ್ಷದ್ ಕೂಡ ಜಮೀರ್ ನಿಲುವಿಗೆ ಬೆಂಬಲ ಸೂಚಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಮೀರ್ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ, “ಟಿಕೆಟ್ ಘೋಷಣೆಯಾಗುವವರೆಗೂ ನಾನು ಶಾಂತನಾಗುವುದಿಲ್ಲ” ಎಂದು ಜಮೀರ್ ಸಭೆಯಿಂದ ಹೊರಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಕ್ಷಕ್ಕೆ ಇಕ್ಕಟ್ಟು:

ಬಿಜೆಪಿ ಈಗಾಗಲೇ ಶ್ರೀನಿವಾಸ ದಾಸಕರಿಯಪ್ಪ ಅವರನ್ನು ಕಣಕ್ಕಿಳಿಸಿ ಪ್ರಚಾರ ಆರಂಭಿಸಿದೆ. ಇತ್ತ ಕಾಂಗ್ರೆಸ್‌ನಲ್ಲಿ ಸಚಿವರೇ ರಾಜೀನಾಮೆ ಬೆದರಿಕೆ ಹಾಕಿರುವುದು ಹೈಕಮಾಂಡ್‌ಗೆ ನುಂಗಲಾರದ ತುತ್ತಾಗಿದೆ. ಶಾಮನೂರು ಕುಟುಂಬದ ವರ್ಚಸ್ಸು ಮತ್ತು ಜಮೀರ್ ಅವರ ಸಮುದಾಯದ ನಾಯಕತ್ವದ ನಡುವೆ ಸಿಲುಕಿರುವ ಕಾಂಗ್ರೆಸ್ ವರಿಷ್ಠರು ಈಗ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.

 


Share this with Friends

Related Post