Sat. Jun 6th, 2026

ದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್‌ನಿಂದ ಸಮರ್ಥ ಶಾಮನೂರು ಮಲ್ಲಿಕಾರ್ಜುನ್‌ಗೆ ‘ಬಿ-ಫಾರಂ’

Share this with Friends

ದಾವಣಗೆರೆ: ರಾಜ್ಯ ರಾಜಕಾರಣದ ಕುತೂಹಲದ ಕೇಂದ್ರಬಿಂದುವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಣ ಸಜ್ಜಾಗಿದ್ದು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಅಭ್ಯರ್ಥಿಯಾಗಿ ಸಮರ್ಥ ಶಾಮನೂರು ಮಲ್ಲಿಕಾರ್ಜುನ್ ಅವರಿಗೆ ಅಧಿಕೃತವಾಗಿ ‘ಬಿ-ಫಾರಂ’ ನೀಡಲಾಗಿದೆ.

ಹೈ ವೋಲ್ಟೇಜ್ ಸಭೆಯಲ್ಲಿ ರಣತಂತ್ರ:

ಇಂದು ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣಾ ಕಾರ್ಯತಂತ್ರದ ಕುರಿತು ಅತ್ಯಂತ ಮಹತ್ವದ ‘ಹೈ ವೋಲ್ಟೇಜ್’ ಸಭೆ ನಡೆಯಿತು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದರು, ಟಿಕೆಟ್ ಪಟ್ಟು ಹಿಡಿದಿದ್ದ ಎಸ್.ಎಸ್.ಮಲ್ಲಿಕಾರ್ಜುನ್ ಹಾಗು ಜಮೀರ್ ಅಹಮದ್ ಕೂಡ ಭಾಗಿಯಾಗಿದ್ದರು, ಎಲ್ಲ ಆಯಾಮದಲ್ಲಿಯೂ ಚರ್ಚೆಯ ನಂತರ ಶಾಮನೂರು ಕುಟುಂಬಕ್ಕೆ ಜನಾಶೀರ್ವಾದ ಇತ್ತು ಹಾಗಾಗಿ ಅವರ ಕುಟುಂಬಕ್ಕೆ ನೀಡಬೇಕು ಎನ್ನುವ ನಿರ್ಧಾರಕ್ಕೆ ಬರಲಾಯಿತು.ನಂತರ ಅಭ್ಯರ್ಥಿಯ ಗೆಲುವಿಗಾಗಿ ಮಾಸ್ಟರ್ ಪ್ಲಾನ್ ರೂಪಿಸಲಾಯಿತು.

ಸೋಮವಾರ ಶಕ್ತಿ ಪ್ರದರ್ಶನ:

ಮಾರ್ಚ್ 23, ಸೋಮವಾರದಂದು ಸಮರ್ಥ ಶಾಮನೂರು ಮಲ್ಲಿಕಾರ್ಜುನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ತಮ್ಮ ನಾಮಪತ್ರವನ್ನು ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ರಾಜ್ಯದ ಪ್ರಮುಖ ಸಚಿವರು, ಶಾಸಕರು ಹಾಗೂ ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದು, ನಗರದಲ್ಲಿ ಬೃಹತ್ ಮೆರವಣಿಗೆಯ ಮೂಲಕ ಕಾಂಗ್ರೆಸ್ ತನ್ನ ಸಂಘಟನಾ ಶಕ್ತಿಯನ್ನು ಪ್ರದರ್ಶಿಸಲಿದೆ.

ಗೆಲುವಿನ ವಿಶ್ವಾಸ:

ಶಾಮನೂರು ಕುಟುಂಬದ ಸುದೀರ್ಘ ರಾಜಕೀಯ ಹಿನ್ನೆಲೆ ಹಾಗೂ ಸಿದ್ದರಾಮಯ್ಯ-ಡಿ.ಕೆ.ಶಿ ಜೋಡಿಯ ವರ್ಚಸ್ಸು ಈ ಬಾರಿ ಸಮರ್ಥ ಶಾಮನೂರು ಅವರ ಕೈ ಹಿಡಿಯಲಿದೆ ಎಂಬ ವಿಶ್ವಾಸ ಸಭೆಯ ನಂತರ ವ್ಯಕ್ತವಾಗಿದೆ. ಅಭಿವೃದ್ಧಿ ಮಂತ್ರದೊಂದಿಗೆ ಮತದಾರರ ಮುಂದೆ ಹೋಗಲು ಸಭೆಯಲ್ಲಿ ನಿರ್ಧರಿಸಲಾಗಿದ್ದು, ಈ ಉಪಚುನಾವಣೆ ದಾವಣಗೆರೆ ಜಿಲ್ಲೆಯ ರಾಜಕಾರಣದಲ್ಲಿ ಹೊಸ ದಿಕ್ಸೂಚಿಯಾಗುವ ಸಾಧ್ಯತೆಯಿದೆ.

 


Share this with Friends

Related Post