Sat. Jun 6th, 2026

ದಾವಣಗೆರೆ ದಕ್ಷಿಣ ಬಂಡಾಯ: ಸಾದಿಕ್ ಪೈಲ್ವಾನ್ ಮನವೊಲಿಕೆಗೆ ಕಸರತ್ತು ಆರಂಭಿಸಿದ ಸಚಿವ ಮಲ್ಲಿಕಾರ್ಜುನ್

Share this with Friends

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ವಿರುದ್ಧ ಬಂಡಾಯವೆದ್ದಿರುವ ಸಾದಿಕ್ ಪೈಲ್ವಾನ್ ಅವರನ್ನು ಸಮಾಧಾನಪಡಿಸಲು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮುಂದಾಗಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, “ಸಾದಿಕ್ ಪೈಲ್ವಾನ್ ಹಾಗೂ ಆಯೂಬ್ ಅವರು ನಮ್ಮ ಪಕ್ಷದ ಅವಿಭಾಜ್ಯ ಅಂಗಗಳು. ಅವರ ಅಸಮಾಧಾನವನ್ನು ಹೋಗಲಾಡಿಸಲು ನಾನು ವೈಯಕ್ತಿಕವಾಗಿ ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ ಅವರು ಸದ್ಯಕ್ಕೆ ಕರೆ ಸ್ವೀಕರಿಸುತ್ತಿಲ್ಲ. ಶೀಘ್ರದಲ್ಲೇ ಅವರೊಂದಿಗೆ ಮಾತನಾಡಿ ಎಲ್ಲವನ್ನೂ ಸರಿಪಡಿಸಲಾಗುವುದು” ಎಂದು ತಿಳಿಸಿದರು.

ಜಮೀರ್ ಅಹ್ಮದ್ ಅವರಿಗೆ ಆಮಂತ್ರಣ:

ಕ್ಷೇತ್ರದ ಅಲ್ಪಸಂಖ್ಯಾತ ಸಮುದಾಯದ ಮುಖಂಡರ ಮನವೊಲಿಸಲು ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ದಾವಣಗೆರೆಗೆ ಕರೆಯಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಗಿದೆ. ಕೇರಳ ಪ್ರವಾಸದಲ್ಲಿರುವ ಜಮೀರ್ ಅವರು ಹಿಂದಿರುಗಿದ ತಕ್ಷಣ ದಾವಣಗೆರೆಗೆ ಆಗಮಿಸಿ, ಬಂಡಾಯ ಅಭ್ಯರ್ಥಿಯೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಮಲ್ಲಿಕಾರ್ಜುನ್ ವಿಶ್ವಾಸ ವ್ಯಕ್ತಪಡಿಸಿದರು.

ಒಗ್ಗಟ್ಟಿನ ಮಂತ್ರ:

“ನಮಗೆ ಪಕ್ಷದ ಹಿತಾಸಕ್ತಿ ಮುಖ್ಯ. ಸಮರ್ಥ್ ಶಾಮನೂರ್ ಅವರ ಗೆಲುವಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ಚುನಾವಣಾ ಕಣದಲ್ಲಿ ಒಟ್ಟಾಗಿ ಮುನ್ನುಗ್ಗುತ್ತೇವೆ” ಎಂದು ಸಚಿವರು ಇದೇ ವೇಳೆ ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ಗೆ ಮುಸ್ಲಿಂ ಮುಖಂಡರ ಶಾಕ್: ಬಿಜೆಪಿಗೆ ಬೆಂಬಲದ ಎಚ್ಚರಿಕೆ?

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ದಶಕಗಳಿಂದ ಕಾಂಗ್ರೆಸ್‌ನ ಗಟ್ಟಿಯಾದ ಮತಬ್ಯಾಂಕ್ ಆಗಿದ್ದ ಮುಸ್ಲಿಂ ಸಮುದಾಯದ ಕೆಲವು ಪ್ರಮುಖ ಮುಖಂಡರು ಈ ಬಾರಿ ಬಿಜೆಪಿಗೆ ಬೆಂಬಲ ನೀಡುವ ಸುಳಿವು ನೀಡಿದ್ದಾರೆ. ಇದು ಜಿಲ್ಲಾ ಕಾಂಗ್ರೆಸ್ ಪಾಳಯದಲ್ಲಿ ತಲ್ಲಣ ಸೃಷ್ಟಿಸಿದೆ. ಸತತವಾಗಿ ಕಾಂಗ್ರೆಸ್ ಬೆಂಬಲಿಸುತ್ತಾ ಬಂದಿದ್ದರೂ, ಸಮುದಾಯದ ಸ್ಥಳೀಯ ಮುಖಂಡರಿಗೆ ಸೂಕ್ತ ಸ್ಥಾನಮಾನ ಹಾಗೂ ಟಿಕೆಟ್ ಹಂಚಿಕೆಯಲ್ಲಿ ಆದ್ಯತೆ ನೀಡುತ್ತಿಲ್ಲ ಎಂಬುದು ಮುಖಂಡರ ಪ್ರಮುಖ ದೂರಾಗಿದೆ. “ಕೇವಲ ಮತಬ್ಯಾಂಕ್ ಆಗಿ ನಮ್ಮನ್ನು ಬಳಸಿಕೊಳ್ಳಲಾಗುತ್ತಿದೆ” ಎಂದು ಕೆಲವರು ಅಸಮಾಧಾನ ಹೊರಹಾಕಿದ್ದಾರೆ.

ಬಿಜೆಪಿಗೆ ಮತ ಹಾಕುವ ಎಚ್ಚರಿಕೆ: ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರಿಗೆ ನ್ಯಾಯ ಸಿಗದಿದ್ದರೆ ಅಥವಾ ಹೈಕಮಾಂಡ್ ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ, ಈ ಬಾರಿ ಅನಿವಾರ್ಯವಾಗಿ ಬಿಜೆಪಿಯತ್ತ ಮುಖ ಮಾಡಬೇಕಾಗುತ್ತದೆ ಎಂದು ಕೆಲವು ಮುಖಂಡರು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತಗಳು ನಿರ್ಣಾಯಕವಾಗಿವೆ. ಒಂದು ವೇಳೆ ಮುಸ್ಲಿಂ ಮತಗಳು ವಿಭಜನೆಯಾಗಿ ಅಥವಾ ಬಿಜೆಪಿಗೆ ವರ್ಗಾವಣೆಯಾದರೆ, ಅದು ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರ್ ಅವರಿಗೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆಯಿದೆ. ಇದನ್ನು ತಡೆಯಲು ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪ್ರವೇಶಕ್ಕೆ ಕಾಂಗ್ರೆಸ್ ಎದುರು ನೋಡುತ್ತಿದೆ.

 


Share this with Friends

Related Post