ಬೆಂಗಳೂರು:ಶತಾಯ ಗತಾಯ ಜಿಬಿಎ ಚುನಾವಣೆಯಲ್ಲಿ ಗದ್ದುಗೆ ಹಿಡಿದು ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಮುಂದಾಗಿರುವ ಡಿಸಿಎಂ ಡಿಕೆ ಶಿವಕುಮಾರ್ ಗೀವ್ ಅಂಡ್ ಟೇಕ್ ಪಾಲಿಸಿ ಆಫರ್ ಅನ್ನು ಬೆಂಗಳೂರು ಅಪಾರ್ಟ್ ಮೆಂಟ್ ನಿವಾಸಿಗಳ ಮುಂದಿಟ್ಟಿದ್ದಾರೆ. ನಾನು ನಿಮಗೆ ಸಹಾಯ ಮಾಡುವುದರ ಜೊತೆಗೆ ನಿಮ್ಮ ಸಹಾಯವನ್ನು ಮತಗಳ ಮೂಲಕ ಬಯಸುತ್ತೇನೆ. ಜಿಬಿಎ ಚುನಾವಣೆಯಲ್ಲಿ ನೀವು ನಮ್ಮ ಜತೆ ನಿಲ್ಲಿ ಎಂದು ಅಪಾರ್ಟ್ಮೆಂಟ್ ನಿವಾಸಿಗಳಿಗೆ ಬಹಿರಂಗವಾಗಿಯೇ ರಾಜ್ಯದ ಶಕ್ತಿಸೌಧದಲ್ಲಿ ನಿಂತು ಡಿಸಿಎಂ ಡಿಕೆ ಶಿವಕುಮಾರ್ ಕೋರಿದ್ದಾರೆ.
ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕ 2025 ಕುರಿತು ಅಪಾರ್ಟ್ಮೆಂಟ್ ಅಸೋಸಿಯೇಷನ್ ಗಳ ಪ್ರತಿನಿಧಿಗಳೊಂದಿಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸಂವಾದ ನಡೆಸಿ ಮಾತನಾಡಿದ ಅವರು,“ನಾನು ನಿಮಗೆ ಸಹಾಯ ಮಾಡುವುದರ ಜೊತೆಗೆ ನಿಮ್ಮ ಸಹಾಯವನ್ನು ಮತಗಳ ಮೂಲಕ ಬಯಸುತ್ತೇನೆ. ಜಿಬಿಎ ಚುನಾವಣೆಯಲ್ಲಿ ನೀವು ನಮ್ಮ ಜತೆ ನಿಲ್ಲಿ ಎಂದು ಕೋರುತ್ತೇನೆ. ನಿಮ್ಮ ಮೇಲೆ ನಂಬಿಕೆ ಇಟ್ಟಿದ್ದೇನೆ. ಅದಕ್ಕಾಗಿ ಯಾರೂ ಜಾರಿಗೆ ತರದ ಕಾನೂನನ್ನು ಜಾರಿಗೆ ತರಲು ಮುಂದಾಗಿದ್ದೇನೆ. ನನಗೆ ನಿರಾಸೆ ಮಾಡಬೇಡಿ” ಎಂದು ತಿಳಿಸಿದರು.
“ಯಾರೆಲ್ಲಾ ಈ ಸಂವಾದ ಕಾರ್ಯಕ್ರಮದಲ್ಲಿ ನಿಮ್ಮ ಸಲಹೆ ನೀಡಲು ಸಾಧ್ಯವಾಗಿಲ್ಲವೋ ಅವರುಗಳು gbasuggesion@gmail.com ಗೆ ನಿಮ್ಮ ಮೇಲ್ ಮಾಡಬಹುದಾಗಿದೆ. 10 ದಿನಗಳಲ್ಲಿ ನಿಮ್ಮ ಸಲಹೆ ಕಳುಹಿಸಿ. ನಾನು ಎಲ್ಲವನ್ನು ಪರಿಶೀಲಿಸುತ್ತೇನೆ. ನಿಮ್ಮ ಸಲಹೆ, ಸಮಸ್ಯೆಗಳನ್ನು ನಾನು ಆಲಿಸಿದ್ದೇನೆ. ನಿಮ್ಮ ಸಲಹೆಗಳು ಅತ್ಯುತ್ತಮವಾಗಿವೆ. ನಿಮ್ಮ ಸಮಸ್ಯೆಗಳ ಬಗ್ಗೆ ಅರಿವಿದೆ. ನಾನೂ ಅಪಾರ್ಟ್ ಮೆಂಟ್ ಗಳನ್ನು ಹೊಂದಿದ್ದೇನೆ. ನಿಮ್ಮ ಜೊತೆ ನಿಂತು, ಸಮಸ್ಯೆ ಪರಿಹರಿಸಲು ಬದ್ಧನಾಗಿದ್ದೇನೆ. ಈ ಸರ್ಕಾರ ನನ್ನದಲ್ಲ, ನಿಮ್ಮದು” ಎಂದು ತಿಳಿಸಿದರು.
ನಾನು ನಿಮ್ಮನ್ನು ಕರೆದು ಅಭಿಪ್ರಾಯ ಪಡೆಯುವ ಅಗತ್ಯವಿರಲಿಲ್ಲ. ನಾವು ನಿಮ್ಮ ಮೇಲೆ ಪ್ರೀತಿ ವಿಶ್ವಾಸವಿಟ್ಟು ಕರೆದಿದ್ದೇವೆ. ನಿಮ್ಮ ಸೇವೆ ಮಾಡಿದರೆ ನಮಗೆ ಮತ ಹಾಕುತ್ತೀರಿ ಎಂಬುದಷ್ಟೇ ನಮ್ಮ ಆಸೆ. ಅದನ್ನು ಬಿಟ್ಟು ನಿಮ್ಮನ್ನು ಬೇರೆ ಏನು ಕೇಳುತ್ತೇವೆ? ನಾವು ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಅಪಾರ್ಟ್ ಮೆಂಟ್ ನಿವಾಸಿಗಳಿಗೆ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡಿದ್ದೇವೆ. ಈ ಯೋಜನೆ ಜಾರಿ ಅಸಾಧ್ಯ ಎಂದು ಪ್ರಧಾನಮಂತ್ರಿಗಳು ಹೇಳಿದರು. ಆದರೆ ಇಂದು ಬೇರೆ ರಾಜ್ಯಗಳಲ್ಲಿ ನಮ್ಮ ಯೋಜನೆಗಳೇ ಅವರನ್ನು ಕಾಪಾಡುತ್ತಿದೆ. ಕಾವೇರಿ 5ನೇ ಹಂತದ ಕುಡಿಯುವ ನೀರಿನ ಯೋಜನೆ ಜಾರಿ ಮಾಡಿ, ಮೊದಲು ನೀರಿನ ಸಂಪರ್ಕ ಪಡೆಯಿರಿ, ಒಂದು ವರ್ಷ ತಡವಾಗಿ ಬೇಕಾದರೆ ಹಣ ಪಾವತಿಸಿ ಎಂದು ಕಾಲಾವಕಾಶವನ್ನು ನೀಡಿದ್ದೇವೆ. ಆರನೇ ಹಂತದ ಯೋಜನೆಗೆ ಯೋಜನೆ ರೂಪಿಸಿದ್ದೇವೆ. ಇದನ್ನು ನೀವುಗಳು ಅರಿಯಬೇಕು. ಎಲ್ಲರನ್ನು ಆಟವಾಡಿಸಿದಂತೆ ನಮ್ಮನ್ನು ಆಟವಾಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.
“ನಾನು ಸಾವಿರಾರು ಅಪಾರ್ಟ್ ಮೆಂಟ್ ಕಟ್ಟಿದ್ದೇನೆ. ಅಪಾರ್ಟ್ ಮೆಂಟ್ ಗಳಿಗೆ ಜಾಗ ಕೊಟ್ಟಿದ್ದೇನೆ. ನಾವು ಇರುವುದೇ ನಿಮ್ಮ ಸೇವೆ ಮಾಡಲು. ಚುನಾವಣೆಗಳನ್ನು ಹೇಗೆ ನಡೆಸಬೇಕು ಎಂದು ನನಗೆ ಗೊತ್ತಿದೆ. ಪ್ರತಿ ಅಪಾರ್ಟ್ ಮೆಂಟ್ ನಲ್ಲಿ ಯಾರಿಗೆ ಎಷ್ಟು ಮತ ಬೀಳುತ್ತದೆ ಎಂದೂ ನನಗೆ ಗೊತ್ತಿದೆ. ಆದರೂ ನಾವು ನಿಮ್ಮ ಸೇವೆ ಮಾಡಿ ನಿಮ್ಮ ವಿಶ್ವಾಸ ಗೆಲ್ಲಲು ಬಯಸುತ್ತೇನೆ. ನೀವು ಬಲಿಷ್ಠವಾಗಿದ್ದರೆ, ನಾವು ಬಲಿಷ್ಠ, ನೀವು ದುರ್ಬಲರಾದರೆ, ನಾವು ದುರ್ಬಲ ಎಂದು ಭಾವಿಸಿದ್ದೇನೆ. ನಾನು ನೇರವಾಗಿ, ಕಟುವಾಗಿ ಹಾಗೂ ದಿಟ್ಟವಾಗಿ ಮಾತನಾಡಿದ್ದೇನೆ. ಇದಕ್ಕೆ ಯಾರೂ ಬೇಸರ ಮಾಡಿಕೊಳ್ಳಬೇಡಿ. ಬೆದರಿಸಿದರೆ ನಡೆಯುತ್ತದೆ ಎಂಬ ಭ್ರಮೆ ಬೇಡ” ಎಂದರು.
“ಕಿರಣ್ ಹೆಬ್ಬಾರ್ ಎಂಬಾತ ತಾನು ಅಂಪಾರ್ಟ್ಮೆಂಟ್ ಮಾಲೀಕ ಎಂದು ಪತ್ರ ಬರೆದಿದ್ದು, ನಮಗೆ ಬೆದರಿಕೆ ಹಾಕಲು ಮುಂದಾಗಿದ್ದಾನೆ. ನಮ್ಮಲ್ಲಿ ಬಹುದೊಡ್ಡ ಮತದಾರರ ಸಮೂಹವಿದ್ದು, ಬೆಂಗಳೂರಿನ 1.30 ಕೋಟಿ ಮತದಾರರ ಮೇಲೆ ಪರಿಣಾಮ ಬೀರಬಲ್ಲೆವು. ಸರ್ಕಾರಗಳು ನಮ್ಮನ್ನು ನಿರ್ಲಕ್ಷಿಸಿದ್ದು, ಆಡಳಿತ ಪಕ್ಷ ನಮ್ಮ ಮನವಿ ನಿರ್ಲಕ್ಷಿಸಿದರೆ ಸದ್ಯದಲ್ಲೇ ಜಿಬಿಎ ಚುನಾವಣೆ ಬರುತ್ತಿದೆ ಎಂದು ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾನೆ. ಈ ದೇಶದ ಪ್ರಧಾನಮಂತ್ರಿ, ಗೃಹ ಸಚಿವರಿಗೆ ಹೆದರದೇ ಜೈಲಿಗೆ ಹೋಗಿ ಬಂದಿರುವವನು ನಾನು. ಅವನ್ಯಾರೋ ಹೆಬ್ಬಾರ್ ಎಂಬುವವನಿಗೆ ಹೆದರುತ್ತೇನೆಯೇ? ಯಾರಿಗೂ ಹೆದರುವ, ಜಗ್ಗುವ ಮಾತೇ ಇಲ್ಲ. ಯಾರೇ ಆಗಲಿ ಯಾರ ಜೊತೆ ಮಾತನಾಡುತ್ತಿದ್ದೇವೆ ಎಂಬುದರ ಬಗ್ಗೆ ಕನಿಷ್ಠ ಪರಿಜ್ಞಾನ ಇಟ್ಟುಕೊಳ್ಳಬೇಕು” ಎಂದು ಕಿಡಿಕಾರಿದರು.
ಚುನಾವಣೆ ಸಮಯದಲ್ಲಿ 100 ಅಪಾರ್ಟ್ಮೆಂಟ್ ಗಳಿಗೆ ಭೇಟಿ ನೀಡಿ ನಮಗೆ ಬೆಂಬಲ ನೀಡಿ ಎಂದು ಕೇಳಿಕೊಂಡಿದ್ದೆ. ಆಗ ಬೆಂಗಳೂರಿನಲ್ಲಿ ಸುಮಾರು 6 ಸಾವಿರ ಕೊಳವೆ ಬಾವಿ ಬತ್ತಿದ್ದಾಗ ನಾನು ಎಷ್ಟೇ ಕಷ್ಟ ಆದರೂ ನಿಮಗೆ ತೊಂದರೆ ಆಗಬಾರದು ಎಂದು ಸಹಾಯ ಮಾಡಿದ್ದೆ. ಆದರೆ ಚುನಾವಣೆ ಫಲಿತಾಂಶ ಬಂದಾಗ ನೀವು ನಮಗೆ ಬೆಂಬಲ ನೀಡಲಿಲ್ಲ. ನನ್ನ ತಮ್ಮನನ್ನು ಒಂದೇ ಕ್ಷೇತ್ರದಲ್ಲಿ 1 ಲಕ್ಷ ಮತಗಳಿಂದ ಸೋಲಿಸಿದಿರಿ. ನೀವು ನಮಗೆ ಯಾವುದೇ ರೀತಿಯ ಬೆಂಬಲ ನೀಡಲಿಲ್ಲ. ನಾವು ಕಷ್ಟಪಟ್ಟು ಸಹಾಯ ಮಾಡಿದರೂ ನೀವು ನಮಗೆ ಕರುಣೆ ತೋರಲಿಲ್ಲ. ಆಗ ನಾವು ಯಾಕೆ ಸಹಾಯ ಮಾಡಬೇಕು ಎಂದು ಅನಿಸಿದ್ದು ನಿಜ”“ಆದರೂ ಈ ವಿಧೇಯಕದ ವಿಚಾರವಾಗಿ ನಿಮ್ಮ ಅಭಿಪ್ರಾಯ, ಸಲಹೆ ಪಡೆಯಲು ನಿಮ್ಮನ್ನು ಆಹ್ವಾನಿಸಿದ್ದೇನೆ. ಈ ವಿಧೇಯಕ ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಇರಬೇಕು. ನಿಮ್ಮ ಧ್ವನಿ, ಶಾಸಕರ ಧ್ವನಿ ಸರ್ಕಾರದ ಧ್ವನಿ ಆಗಬೇಕು. ಇಲ್ಲಿ ಬರುವ ಮುನ್ನ ಅಧಿಕಾರಿಗಳ ಜೊತೆ ಚರ್ಚೆ ಮಾಡಿದೆ. ಆತುರದಲ್ಲಿ ಈ ವಿಧೇಯಕ ರೂಪಿಸುವ ಮುನ್ನ ನಿಮ್ಮೆಲ್ಲರ ಅಭಿಪ್ರಾಯ ತಿಳಿಯಲು ಬಂದಿದ್ದೇನೆ. ನಿಮ್ಮ ಅಭಿಪ್ರಾಯ ಪಡೆದ ಬಳಿಕ ಸದನದಲ್ಲಿ ಶಾಸಕರ ಜೊತೆ ಚರ್ಚೆ ಮಾಡಲಾಗುವುದು. ಬೆಂಗಳೂರಿನಲ್ಲಿ ಐದು ಪಾಲಿಕೆ ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಪಾಲಿಕೆಗಳನ್ನು ವಿಸ್ತರಣೆ ಮಾಡಲಾಗುವುದು. ಬೆಂಗಳೂರಿನ ಹೊರ ವಲಯ ಸೇರಿದಂತೆ ಈ ವಿಧೇಯಕ ಇಡೀ ರಾಜ್ಯಕ್ಕೆ ಅನ್ವಯವಾಗಲಿದೆ” ಎಂದು ತಿಳಿಸಿದರು.

