ಗದಗ: ಪ್ರತಿಯೊಬ್ಬ ಭಾರತೀಯ ವಿದ್ಯಾರ್ಥಿ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆಯನ್ನು ಬೆಳೆಸಿಕೊಳ್ಳಬೇಕು. ದೇಶ ಅನೇಕ ಜಾತಿ ಧರ್ಮಗಳಿಂದ ಕೂಡಿದ್ದು, ಜಾತ್ಯತೀತ ಸಮಾಜ, ಸಮ ಸಮಾಜ ನಿರ್ಮಾಣ ಮಾಡಬೇಕು. ಅಸಮಾನತೆ ಹೋಗದೆ ಹೋದರೆ ಕಲಿತವರು ಕಂದಾಚಾರ ಬಿಡದೇ ಹೋದರೆ ಮನುಷ್ಯ ಸಮಾಜ ಕಟ್ಟಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಚಂದನ ಎಜುಕೇಶನ್ ಸೊಸೈಟಿ ಲಕ್ಷ್ಮೇಶ್ವರ ಇವರ ವತಿಯಿಂದ ಆಯೋಜಿಸಲಾಗಿದ್ದ ಭಾರತ ರತ್ನ ಪ್ರೋ ಸಿ ಎನ್ ಆರ್ ರಾವ್ 10 ನೇ ವರ್ಷದ ವಿಜ್ಞಾನ ವಿಸ್ಕೃತ ಕಾರ್ಯಕ್ರಮ-2025 ಹಾಗೂ ಬಿ ಎಸ್ ಪಾಟೀಲ ಇವರಿಗೆ 2025 ನೇ ಸಾಲಿನ ಪ್ರತಿಷ್ಠಿತ ಚಂದನ ಶ್ರೀ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಪ್ರಧಾನ ಕಾರ್ಯದರ್ಶಿಗಳಾಗಿದ್ದ ಬಿ.ಎಸ್.ಪಾಟೀಲರೊಂದಿಗೆ ಪ್ರವಾಸ ಹೋಗಿದ್ದ ಸಂದರ್ಭದಲ್ಲಿ ನೆರವು ನೀಡುತ್ತಿದ್ದರು ಎಂದು ಸ್ಮರಿಸಿದರು, ರೈತ ಕುಟುಂಬದಿಂದ ಬಂದು ವಿದ್ಯಾಭ್ಯಾಸ ಮಾಡಿ ಸೈನ್ಯ ಸೇರಿ ನಂತರ ಐಎಎಸ್ ಅಧಿಕಾರಿಯಾದ ಅವರಲ್ಲಿ ಇಚ್ಚಾಶಕ್ತಿ ಇದ್ದದ್ದರಿಂದ ಅಪಘಾತವಾಗಿದ್ದರೂ ಐಎಎಸ್ ಉತ್ತೀರ್ಣರಾಗಲು ಸಾಧ್ಯವಾಯಿತು. ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತಿಯಾಗಿದ್ದಾರೆ. ಜೆ. ಹೆಚ್. ಪಟೇಲರ ಪ್ರಧಾನ ಕಾರ್ಯದರ್ಶಿಯಾಗಿ ಹೆಚ್ಚು ಕೆಲಸವನ್ನು ಮಾಡುತ್ತಿದ್ದರು. ಪಟೇಲರು ಬಹಳ ಬುದ್ಧಿವಂತರು. ಹೆಚ್ಚು ಕೆಲಸಗಳನ್ನು ಇವರೇ ಮಾಡಿ ಒತ್ತಡ ಇಲ್ಲದಂತೆ ಬಿ .ಎಸ್ ಪಾಟೀಲರು ಮಾಡುತ್ತಿದ್ದರು. ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬೆಂಗಳೂರನ್ನು ವಿಭಜಿಸಲು ಪಾಟೀಲರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು..ಈಗಲೂ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿ ವರದಿಯನ್ನೂ ಸಲ್ಲಿಸಿದ್ದಾರೆ. ಗ್ರೇಟರ್ ಬೆಂಗಳೂರಿನ ಒಳಗೆ ಐದು ಕಾರ್ಪೋರೇಷನ್ ಗಳನ್ನಾಗಿ ವಿಭಜಿಸಲಾಗಿದೆ. ಪಾಟೀಲರು ಈ ನಾಡಿಗೆ ಅಪಾರವಾದ ಸೇವೆ ಸಲ್ಲಿಸಿದ್ದಾರೆ. ಅವರನ್ನು ಗುರುತಿಸಿ ಚಂದನ ಎಜುಕೇಶನಲ್ ಸಂಸ್ಥೆ ಆಯ್ಕೆ ಮಾಡಿರುವುದು ಸೂಕ್ತವಾಗಿದೆ ಎಂದರು.
ಸಿ.ಎನ್.ಆರ್ ರಾವ್ ಈ ದೇಶ ಕಂಡ ಅಪರೂಪದ ವಿಜ್ಞಾನಿ. ಎಸ್.ಎಸ್.ಎಲ್.ಸಿ ವರೆಗೆ ಕನ್ನಡ ಮಾಧ್ಯಮದಲ್ಲಿಯೇ ಕಲಿತವರು. ಪಾಟೀಲರು ಆಂಗ್ಲ ಮಾಧ್ಯಮ ಕಲಿತವರು. ಸಿ.ಎನ್.ಆರ್ ವಿಜ್ಞಾನದಲ್ಲಿ ಅತ್ಯಂತ ಎತ್ತರಕ್ಕೆ ಬೆಳೆದವರು.ಸಂಶೋಧನೆಯನ್ನು ಜೀವನವಾಗಿಸಿಕೊಂಡಿದ್ದ ಅವರಿಗೆ ಅವರ ಧರ್ಮಪತ್ನಿ ಒತ್ತಾಸೆಯಾಗಿದ್ದರು ಎಂದರು.
ದಶದ ಪ್ರಧಾನಿ ನೆಹರು ಅವರು ಎಲ್ಲರೂ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದ್ದರು. ಚಂದನ ಶ್ರೀ ವಿದ್ಯಾಲಯದಲ್ಲಿ ವಿಜ್ಞಾನಕ್ಕೆ, ವೈಚಾರಿಕತೆಗೆ ಹೆಚ್ಚು ಒತ್ತು ನೀಡಿರುವುದು ಉತ್ತಮ ಬೆಳವಣಿಗೆ. ಪ್ರತಿಯೊಬ್ಬ ಭಾರತೀಯ ವಿದ್ಯಾರ್ಥಿ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆಯನ್ನು ಬೆಳೆಸಿಕೊಳ್ಳಬೇಕು. ದೇಶ ಅನೇಕ ಜಾತಿ ಧರ್ಮಗಳಿಂದ ಕೂಡಿದ್ದು, ಜಾತ್ಯತೀತ ಸಮಾಜ, ಸಮ ಸಮಾಜ ನಿರ್ಮಾಣ ಮಾಡಬೇಕು. ಅಸಮಾನತೆ ಹೋಗದೆ ಹೋದರೆ ಕಲಿತವರು ಕಂದಾಚಾರ ಬಿಡದೇ ಹೋದರೆ ಮನುಷ್ಯ ಸಮಾಜ ಕಟ್ಟಲು ಸಾಧ್ಯವಿಲ್ಲ ಎಂದರು.
ಬಸವಣ್ಣನವರ ನಾಡಿನಲ್ಲಿ ಹುಟ್ಟಿದ ನಾವು ಇಂದಿಗೂ ಕೂಡ ಮೌಢ್ಯಗಳನ್ನು ಆಚರಿಸಲಾಗುತ್ತಿರುವುದು ದುರ್ದೈವದ ಸಂಗತಿ. ಮೌಢ್ಯ ಹಾಗೂ ಕಂದಾಚಾರಗಳನ್ನು ಕೊನೆಗಾಣಿಸಬೇಕು. ಭ್ರಾತೃತ್ವ, ಸ್ವಾತಂತ್ರ್ಯ , ಸಮಾನತೆಗಳನ್ನು ಸಂವಿಧಾನ ತಿಳಿಸಿದ್ದು, ಇದು ಅಕ್ಷರಶ: ಜಾರಿಯಾಗದೇ, ಜಾತಿ ವ್ಯವಸ್ಥೆಯಾಗಲಿ, ಅಸಮಾನತೆಯಾಗಲಿ ಹೋಗುವುದಿಲ್ಲ. ಮಾನವರಾಗಿ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಶಿಕ್ಷಣ ಅಗತ್ಯ ಎಂದರು.
ಎಲ್ಲ ಧರ್ಮಗಳೂ ಮಾನವೀಯತೆಯನ್ನು ಬೋಧಿಸುತ್ತವೆ. ಪಟ್ಟಭದ್ರಹಿತಾಸಕ್ತಿಗಳು ಧರ್ಮವನ್ನು ತಪ್ಪಾಗಿ ಅರ್ಥೈಸುತ್ತಿದ್ದಾರೆ. ಕಷ್ಟದಲ್ಲಿದ್ದಾಗ ತನ್ನ ಹಣೆಬರಹವೆಂದು ಸುಮ್ಮನಿರದೇ, ಇಚ್ಛಾಶಕ್ತಿಯಿಂದ ಶ್ರಮಿಸಿದರೆ, ಯಾವುದೇ ವರ್ಗದವರೂ ಕೂಡ ಸಾಧನೆಗಳನ್ನು ಮಾಡಬಹುದಾಗಿದೆ. ಶಿಕ್ಷಣವೆಂಬುದು ಒಂದು ವರ್ಗಕ್ಕೆ ಸೀಮಿತವಾದುದಲ್ಲ. ಪ್ರಾಮಾಣಿಕ ಪ್ರಯತ್ನ ಮತ್ತು ಅವಕಾಶಗಳನ್ನು ಸದುಪಯೋಗ ಪಡೆದು, ಉನ್ನತ ಸ್ಥಾನಕ್ಕೆ ತಲುಪಬಹುದು. ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆಯನ್ನು ಅಳವಡಿಸಿಕೊಳ್ಳುವುದೇ ವಿಜ್ಞಾನದ ಉದ್ದೇಶ ಎಂದರು.
ಬಸವಣ್ಣ ಇವನ್ಯಾರವ ಎನ್ನದಿರಿ ಎಂದು 850 ವರ್ಷಗಳ ಹಿಂದೆಯೇ ಹೇಳಿದ್ದರು. ಸ್ವಾತಂತ್ರ್ಯ ಬಂದು 79 ವರ್ಷಗಳಾದರೂ 76% ನಾವು ಸಾಕ್ಷರತೆ ಸಾಧಿಸಿದ್ದರೂ ಜಾತೀಯತೆ ಹೋಗಿಲ್ಲ. ಸುಶಿಕ್ಷಿತರಲ್ಲೇ ಜಾತೀಯತೆಯನ್ನು ಹೆಚ್ಚಾಗಿ ಕಾಣುತ್ತಿದ್ದು ಇದು ಹೋಗಬೇಕಿದೆ ಎಂದರು.

