Mon. Oct 19th, 2026

ಬರ ನಿರ್ವಹಣೆಗೆ ರಾಜ್ಯ ಸರ್ಕಾರದಿಂದ ₹1,250 ಕೋಟಿ ಭರವಸೆ, ಕೇಂದ್ರಕ್ಕೆ ಶೀಘ್ರದಲ್ಲೇ 3ನೇ ಮನವಿ ಪತ್ರ: ಡಿಸಿಎಂ ಜಿ. ಪರಮೇಶ್ವರ್

Share this with Friends

ಬೆಂಗಳೂರು: ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ತಲೆದೋರಿದ್ದು, ಆಹಾರ ಉತ್ಪಾದನೆಯಲ್ಲಿ ಶೇ. 82 ರಷ್ಟು ಭಾರಿ ನಷ್ಟ ಸಂಭವಿಸಿದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಕಳವಳ ವ್ಯಕ್ತಪಡಿಸಿದ್ದಾರೆ.

ಇಂದು ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬರ ಪರಿಸ್ಥಿತಿಯ ಗಂಭೀರತೆ ಹಾಗೂ ರಾಜ್ಯ ಸರ್ಕಾರ ಕೈಗೊಂಡಿರುವ ಪರಿಹಾರ ಕ್ರಮಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.

ಆಹಾರ ಮತ್ತು ಮೇವಿನ ತೀವ್ರ ಕೊರತೆ:

“ರಾಜ್ಯದ ಬಹುತೇಕ ಭಾಗಗಳಲ್ಲಿ ಬರದ ತೀವ್ರತೆ ಹೆಚ್ಚಾಗಿದೆ. ಕೆಲವು ದಿನಗಳ ಹಿಂದೆ ರಾಜ್ಯದ ಕೆಲವೆಡೆ ಮಳೆಯಾಗಿದ್ದರೂ ಬರದ ದೃಶ್ಯಾವಳಿ ಬದಲಾಗಿಲ್ಲ. ಬೆಳೆ ನಷ್ಟದಿಂದಾಗಿ ಆಹಾರ ಧಾನ್ಯಗಳ ಕೊರತೆ ಎದುರಾಗುವ ಆತಂಕವಿದ್ದು, ಜಾನುವಾರುಗಳಿಗೆ ಮೇವಿನ ಲಭ್ಯತೆ ತೀವ್ರವಾಗಿ ಕ್ಷೀಣಿಸಿದೆ. ಈಗಾಗಲೇ ಅಂತರ್ಜಲ ಕುಸಿದು ನೀರಿನ ಮೂಲಗಳು ಬತ್ತುತ್ತಿರುವುದು ಆತಂಕ ತಂದಿದೆ. ಸದ್ಯಕ್ಕೆ ಟ್ಯಾಂಕರ್ ಹಾಗೂ ಖಾಸಗಿ ಬೋರ್‌ವೆಲ್‌ಗಳ ಮೂಲಕ ಕುಡಿಯುವ ನೀರು ಒದಗಿಸಲಾಗುತ್ತಿದೆ” ಎಂದು ಡಿಸಿಎಂ ಪರಿಸ್ಥಿತಿಯನ್ನು ವಿವರಿಸಿದರು.

ಕೇಂದ್ರಕ್ಕೆ 3ನೇ ಮನವಿ ಪತ್ರ ಸಲ್ಲಿಕೆ:

ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮೂರನೇ ಮನವಿ ಪತ್ರ ಸಲ್ಲಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಪರಮೇಶ್ವರ್ ತಿಳಿಸಿದರು. “ಇನ್ನೊಂದು ಎರಡು ದಿನಗಳಲ್ಲಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ನಿಧಿ (NDRF) ಮಾರ್ಗಸೂಚಿಗಳ ಅನ್ವಯ ಹೊಸ ವರದಿ ಸಿದ್ಧವಾಗಲಿದೆ. ಇದನ್ನು ಕೇಂದ್ರಕ್ಕೆ ಸಲ್ಲಿಸಲು ಮುಖ್ಯಮಂತ್ರಿಗಳು, ನಾನು ಅಥವಾ ವಿಶೇಷ ನಿಯೋಗ ತೆರಳುವ ಬಗ್ಗೆ ಶೀಘ್ರದಲ್ಲೇ ಸಿಎಂ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಈ ಹಿಂದೆ ಸರ್ವಪಕ್ಷ ನಿಯೋಗ ಕರೆದೊಯ್ಯುವ ಪ್ರಸ್ತಾಪ ಇತ್ತಾದರೂ, ವಿರೋಧ ಪಕ್ಷದವರು ಭಿನ್ನ ನಿಲುವು ತಳೆದಿರುವುದರಿಂದ ಮುಂದಿನ ಹೆಜ್ಜೆಯ ಬಗ್ಗೆ ಚರ್ಚಿಸಬೇಕಿದೆ” ಎಂದರು.

ಕೇಂದ್ರದ ನೆರವಿಲ್ಲದಿದ್ದರೂ ರಾಜ್ಯದಿಂದಲೇ ಪರಿಹಾರ:

ಕೇಂದ್ರ ಸರ್ಕಾರದಿಂದ ಇದುವರೆಗೆ ಅಗತ್ಯ ಅನುದಾನ ಬಾರದಿದ್ದರೂ ರಾಜ್ಯ ಸರ್ಕಾರ ಕೈಕಟ್ಟಿ ಕುಳಿತಿಲ್ಲ ಎಂದು ಡಿಸಿಎಂ ಸ್ಪಷ್ಟಪಡಿಸಿದರು. “ವಿಬಿ ಜಿ ರಾಮ್ ಜಿ ಯೋಜನೆಯಡಿ ಕೇಂದ್ರದಿಂದ ಒಂದು ಪೈಸೆಯೂ ಬಿಡುಗಡೆಯಾಗಿಲ್ಲ. ಆದರೂ ರಾಜ್ಯ ಸರ್ಕಾರ ತನ್ನ ಸ್ವಂತ ಸಂಪನ್ಮೂಲದಿಂದಲೇ ಕಾಮಗಾರಿಗಳನ್ನು ಮುಂದುವರಿಸಿದೆ. ಬರ ಪರಿಸ್ಥಿತಿ ನಿಭಾಯಿಸಲು ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ ಸಿಇಒಗಳಿಗೆ ಅಗತ್ಯ ಅನುದಾನ ನೀಡಲಾಗಿದೆ. ಸಂಕಷ್ಟದಲ್ಲಿರುವ ರೈತರಿಗೆ ತಲಾ ₹2,500 ಪರಿಹಾರ ನೀಡಲು ರಾಜ್ಯ ಸರ್ಕಾರವೇ ₹1,250 ಕೋಟಿ ವೆಚ್ಚ ಭರಿಸುತ್ತಿದ್ದು, ಆರ್ಥಿಕ ಹೊರೆಯ ನಡುವೆಯೂ ಜನರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

 

 


Share this with Friends

Related Post